- ದಾವಣಗೆರೆಯ ದಯಾ ಮರಣ ಹೋರಾಟಗಾರ್ತಿ ಕರಿಬಸಮ್ಮ ಮಾದರಿ ಕಾರ್ಯ - ಹೋರಾಟದ ಜೊತೆ ದೇಶಪ್ರೇಮ ಮೆರೆದ ಅಮ್ಮ: ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದಯಾ ಮರಣಕ್ಕಾಗಿ ಹೋರಾಟ ನಡೆಸಿರುವ ವಯೋವೃದ್ಧೆ, ನಿವೃತ್ತ ಶಿಕ್ಷಕಿ ಕರಿಬಸಮ್ಮ ಭಾರತೀಯ ಸೇನೆಯ ಯೋಧರ ಕಲ್ಯಾಣಕ್ಕೆ ₹10 ಲಕ್ಷಗಳ ದೇಣಿಗೆಯ ಚೆಕ್ ನೀಡುವ ಮೂಲಕ ರಾಷ್ಟ್ರಪ್ರೇಮ ಹಾಗೂ ಭಾರತೀಯ ವೀರಯೋಧರ ಬಗ್ಗೆ ಅಭಿಮಾನ ಮೆರೆದಿದ್ದಾರೆ.ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ₹10 ಲಕ್ಷ ಮೊತ್ತದ ಚೆಕ್ ಅನ್ನು ನಿವೃತ್ತ ಶಿಕ್ಷಕಿ, ದಯಾ ಮರಣ ಹೋರಾಟಗಾರರಾದ ಕರಿಬಸಮ್ಮ ತಮ್ಮ ಹಳೆಯ ವಿದ್ಯಾರ್ಥಿ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ ಇತರರೊಂದಿಗೆ ನೀಡುವ ಮೂಲಕ ದೇಶಪ್ರೇಮಕ್ಕೆ ಸಾಕ್ಷಿಯಾದರು.
₹10 ಲಕ್ಷ ಮೌಲ್ಯದ ಚೆಕ್ ಸ್ವೀಕರಿಸಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ದೇಶದ ಗಡಿ ಕಾಯುವ ವೀರಯೋಧರ ಸೇವೆ, ತ್ಯಾಗವನ್ನು ಸ್ಮರಿಸಿ, ಅಂತಹವರ ಕಲ್ಯಾಣಕ್ಕಾಗಿ ತಮ್ಮ ಜೀವಿತಾವಧಿಯ ಸಂಪಾದನೆಯನ್ನು ಧಾರೆ ಎರೆಯುವ ಮೂಲಕ ನಿವೃತ್ತ ಶಿಕ್ಷಕಿ ಕರಿಬಸಮ್ಮ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ರಾಜ್ಯಾದ್ಯಂತ ತಾವೊಬ್ಬರೇ ದಯಾ ಮರಣಕ್ಕೆ ಹೋರಾಟ ನಡೆಸುವ ಮೂಲಕ ದಯಾಮರಣ ಹೋರಾಟಗಾರ್ತಿ ಕರಿಬಸಮ್ಮ ಅಂತಲೇ ನಿವೃತ್ತ ಶಿಕ್ಷಕಿ ಕರಿಬಸಮ್ಮ ಹೆಸರಾಗಿದ್ದಾರೆ. ತಮ್ಮ ನಿವೃತ್ತಿ ವೇತನ (ಪಿಂಚಣಿ) ಹಾಗೂ ಸ್ವಂತ ಮನೆಯನ್ನು ಮಾರಾಟ ಮಾಡಿ, ಬಂದ ಹಣದಲ್ಲಿ ₹10 ಲಕ್ಷಗಳ ಚೆಕ್ ವೀರಯೋಧರ ಸೇವೆ ಸ್ಮರಿಸಿ, ವೀರಯೋಧರ ಕಲ್ಯಾಣಕ್ಕಾಗಿ ದೇಣಿಗೆ ನೀಡಿರುವುದು ಇತರರಿಗೂ ಮೇಲ್ಪಂಕ್ತಿ ಹಾಕಿಕೊಟ್ಟಿದೆ ಎಂದು ತಿಳಿಸಿದರು.
ಜಿಲ್ಲಾಡಳಿತ ಅಭಿನಂದನೆ:ಕೇಂದ್ರ ಸರ್ಕಾರದ ಅಧಿಕೃತ ನಿಧಿಯಾದ ಭಾರತ್ ಕೆ ವೀರ್ **(Bharat Ke Veer Corpus Fund)**ಗೆ ಈ ಮೊತ್ತವನ್ನು ಅರ್ಪಿಸಲಾಗಿದ್ದು, ₹10 ಲಕ್ಷಗಳ ಚೆಕ್ ಅನ್ನು ಕೇಂದ್ರ ಸರ್ಕಾರದ ನಿಧಿಗೆ ತಲುಪಿಸಲಾಗುವುದು. ಕರಿಬಸಮ್ಮನವರು ದೇಶದ ವೀರಯೋಧರ ಕಲ್ಯಾಣಕ್ಕಾಗಿ ಆರ್ಥಿಕ ನೆರವು ನೀಡಬೇಕೆಂಬ ಸುದೀರ್ಘ ವರ್ಷದ ಗುರಿ ಹೊಂದಿದ್ದರು. ತಮ್ಮ ವಿದ್ಯಾರ್ಥಿಗಳ ಜೊತೆ ಚರ್ಚಿಸಿ, ಜಿಲ್ಲಾಡಳಿತದ ಮೂಲಕ ಚೆಕ್ ಸಲ್ಲಿಸಲು ಬಂದಿದ್ದಾರೆ. ಹಿರಿಯರಾದ ಕರಿಬಸಮ್ಮನವರ ಅಪೇಕ್ಷೆಯಂತೆ ನಿವೃತ್ತ ಶಿಕ್ಷಕರ ದೇಶಪ್ರೇಮ ಹಾಗೂ ಉದಾತ್ತ ಕಾರ್ಯಕ್ಕೆ ಜಿಲ್ಲಾಡಳಿತ ಅಭಿನಂದಿಸುತ್ತದೆ ಎಂದು ಡಿಸಿ ಗಂಗಾಧರ ಸ್ವಾಮಿ ಹೇಳಿದರು.
ಸೈನಿಕರ ಪರಿಸ್ಥಿತಿ ಮನ ಕಲುಕಿತ್ತು:ದಯಾ ಮರಣ ಹೋರಾಟಗಾರ್ತಿ, ನಿವೃತ್ತ ಶಿಕ್ಷಕಿ ಕರಿಬಸಮ್ಮ ಮಾತನಾಡಿ, 5 ದಶಕಗಳ ಹಿಂದೆ ಕೇವಲ ರೇಡಿಯೋಗಳಿದ್ದ ಕಾಲದಲ್ಲಿ ಗಡಿಯಲ್ಲಿ ಕಠಿಣ, ಪ್ರತಿಕೂಲ ಪರಿಸ್ಥಿತಿಯಲ್ಲಿ ನಮ್ಮ ದೇಶದ ಗಡಿ ಕಾಯುವ ಯೋಧರ ಕಷ್ಟಗಳ ಬಗ್ಗೆ ಕೇಳಿ ಮನ ಸದಾ ನೋಯುತ್ತಿತ್ತು. ತಮ್ಮ ಹೆಂಡತಿ, ಮಕ್ಕಳು, ವಯಸ್ಸಾದ ಹೆತ್ತವರ ಯೋಗಕ್ಷೇಮ ವಿಚಾರಿಸಲು ಕಡಿದಾದ ಬೆಟ್ಟ ಗುಡ್ಡಗಳಿಂದ ಮೈಲುಗಟ್ಟಲೇ ನಡೆದು ಬರುವ ಸೈನಿಕರ ಪರಿಸ್ಥಿತಿ ಮನಸ್ಸನ್ನು ಕಲುಕಿತ್ತು. ಆಗಿನಿಂದಲೇ ದೇಶಕ್ಕಾಗಿ ನಾನೇನಾದರೂ ಸೇವೆ ಮಾಡಬೇಕೆಂಬ ಸಂಕಲ್ಪ ಮಾಡಿದ್ದೆ. ಅನಂತರ ದಯಾಮರಣ ಹೋರಾಟಕ್ಕೆ ಇಳಿದಾಗ ತಮಗೆ ಹಣದ ಅವಶ್ಯಕತೆ ಎದುರಾಯಿತು ಎಂದರು. ಯಾರಿಂದಲೂ ನಯಾಪೈಸೆ ಪಡೆದಿಲ್ಲ:
ದಾವಣಗೆರೆಯ ಅನೇಕ ಗಣ್ಯರು ಹಣದ ಸಹಾಯ ಮಾಡಲು ಮುಂದೆ ಬಂದರರು. ಆದರೆ, ಯಾರಿಂದಲೂ ನಯಾಪೈಸೆ ಸ್ವೀಕರಿಸದೇ, ನಮ್ಮ ಸ್ವಂತ ಮನೆ ಮಾರಾಟ ಮಾಡಿದೆ. ಮನೆ ಮಾರಿದಾಗ ಬಂದ ಹಣದಲ್ಲಿ ₹6 ಲಕ್ಷವನ್ನು ಬಿಎಸ್‌ಎಫ್ ನಿಧಿಗೆ, ವೀರಯೋಧರಿಗೆಂದೇ ಮೀಸಲಿಟ್ಟಿದ್ದೆ. ಆ ಹಣವನ್ನು ಹಾಗೆಯೇ ಉಳಿಸಿಕೊಂಡು, ನನ್ನ ಪಿಂಚಣಿ ಹಣವನ್ನೂ ಸೇರಿಸಿದ್ದು, ಈಗ ಬಡ್ಡಿಯೂ ಸೇರಿ ಒಟ್ಟು ₹10 ಲಕ್ಷಗಳಾಗಿದೆ. ಅಷ್ಟೂ ಹಣವನ್ನು ಸಂಪೂರ್ಣವಾಗಿ ದೇಶದ ಸೈನಿಕರ ನಿಧಿಗೆ ನೀಡಲು ನಿರ್ಧರಿಸಿದೆ. ಅದಕ್ಕಾಗಿ ಇಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿಯವರ ಮುಖಾಂತರ ಅರ್ಪಿಸಿದ್ದೇನೆ ಎಂದು ತಿಳಿಸಿದರು.ನಿವೃತ್ತ ಶಿಕ್ಷಕಿ ಕರಿಬಸಮ್ಮನವರ ಶಿಷ್ಯರಾದ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ ಇತರರು ಇದ್ದರು.
- - -(ಬಾಕ್ಸ್) * ಸೈನಿಕರಿಗಾಗಿ ಚೆಕ್ ಸಮರ್ಪಿಸಿದ ಅತ್ಮತೃಪ್ತಿ ನಿರಂತರ ಹೋರಾಟದ ಪರಿಣಾಮವಾಗಿ ನನಗೆ ಬಿಪಿ, ಶುಗರ್, ಪೆಪ್ಟಿಕ್ ಅಲ್ಸರ್, ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗೆ ತುತ್ತಾಗಿದ್ದೆ. ಅನಾರೋಗ್ಯದ ಏರುಪೇರಿನ ಮಧ್ಯೆಯೂ ಸೈನಿಕರಿಗೆ ಏನಾದರೂ ಸಹಾಯ ಮಾಡಬೇಕೆಂಬ ನನ್ನ ಸಂಕಲ್ಪ ಮಾತ್ರ ಈಗಲೂ ಕುಗ್ಗಿಲ್ಲ. ನನ್ನ ಆರೋಗ್ಯದಲ್ಲಿ ಏರುಪೇರು ಆಗುತ್ತಿರುವುದರಿಂದ, ಆದಷ್ಟು ಬೇಗನೇ ಈ ಹಣವನ್ನು ದೇಶಕ್ಕೆ ಒಪ್ಪಿಸಿ ಋಣಮುಕ್ತಳಾಗಬೇಕು ಎಂಬುದು ನನ್ನ ಆಸೆಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಮುಖಾಂತರ ಸಲ್ಲಿಸಲು ಉದ್ದೇಶಿಸಿದ್ದೆ. ಆದರೆ, ಅದು ಸಾಧ್ಯವಾಗಲಿಲ್ಲ. ಹಾಗಾಗಿ, ವೀರಯೋಧರ ಹೆಸರಿಗೆ ಸಂಕಲ್ಪ ಮಾಡಿಟ್ಟದ್ದ ಈ ಹಣವನ್ನು ಬಿಎಸ್ಎಫ್ ನಿಧಿಗೆ ಹಸ್ತಾಂತರಿಸಿದ್ದೇನೆ. ಇಂದಿನ ದಿನ ನನಗೆ ಅಪಾರ ಸಂತೋಷ ತಂದಿದೆ ಎಂದು ನಿವೃತ್ತ ಶಿಕ್ಷಕಿ ಕರಿಬಸಮ್ಮ ಸಂತೃಪ್ತಿಯ ಮಾತುಗಳನ್ನಾಡಿದರು.
- - --22ಕೆಡಿವಿಜಿ7: ಭಾರತೀಯ ಸೇನೆಯ ಯೋಧರ ಕಲ್ಯಾಣಕ್ಕೆಂದು ದಾವಣಗೆರೆಯಲ್ಲಿ ದಯಾ ಮರಣ ಹೋರಾಟಗಾರ್ತಿ, ನಿವೃತ್ತ ಶಿಕ್ಷಕಿ ಕರಿಬಸಮ್ಮ ₹10 ಲಕ್ಷಗಳ ಚೆಕ್ ಜಿಲ್ಲಾಧಿಕಾರಿ ಮುಖಾಂತರ ಸೇನೆಗೆ ಸಮರ್ಪಿಸಿದರು. ಈ ವೇಳೆ ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ ಇತರರು ಇದ್ದರು.