ಸಾರಾಂಶ
ಕನ್ನಡಪ್ರಭ ವಾರ್ತೆ ನಾಲತವಾಡ
ಶಾಸಕರ ಕಿಸೆಗೆ ದುಡ್ಡು ಹೋಗುತ್ತದೆ ಎಂದು ಮಾತನಾಡುವ ಮಾಜಿ ಶಾಸಕರು ಇದನ್ನು ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿಯಾಗುತ್ತೇನೆ. ಇಲ್ಲ ಅಂದರೆ ತಾವು ಮಾನಹಾನಿ ಕೇಸಿಗೆ ಸಿದ್ಧರಿದ್ದೀರಿ ಏನು ಎಂದು ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಸವಾಲು ಹಾಕಿದರು.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಂಗಳವಾರ ಮಧ್ಯಾಹ್ನ ಜಿಲ್ಲಾಡಳಿತ ವಿಜಯಪುರ, ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪಪಂ ನಾಲತವಾಡ ಆಶ್ರಯದಲ್ಲಿ ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿ ನಾಲತವಾಡ ಪಟ್ಟಣಕ್ಕೆ ಕುಡಿಯುವ ನೀರಿನ ಸರಬರಾಜು ವಿತರಣಾ ವ್ಯವಸ್ಥೆ ಕಲ್ಪಿಸುವ ಯೋಜನೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಜವಾಬ್ದಾರಿ ಇರುವ ಮಾಜಿ ಶಾಸಕರು ಬಹಳ ಎಚ್ಚರಿಕೆಯಿಂದ ಮಾತನಾಡಬೇಕು. ಅರಿವು ಇರಲಾರದೇ ಮಾತನಾಡಬಾರದು. ಜವಾಬ್ದಾರಿಯುತವಾಗಿ ಮಾತನಾಡುವುದನ್ನು ಕಲಿಯಿರಿ. ನಿಮ್ಮ ಅಶಿಸ್ತಿನ ಮಾತಿನಿಂದ ನಾವು ಹೆದರುವುದಿಲ್ಲ. ಪ್ರಾಮಾಣಿಕವಾಗಿ ಒಬ್ಬ ಜವಾಬ್ದಾರಿಯುತ ಶಾಸಕನಾಗಿ ನಾನು ಈ ಕ್ಷೇತ್ರದಲ್ಲಿ ಆಡಳಿತ ನಡೆಸುತ್ತಾ ಬಂದಿದ್ದೇನೆ, ನಿನ್ನಿಂದ ಕಲಿಯುವ ಅವಶ್ಯಕತೆ ನನಗಿಲ್ಲ ಎಂದು ಗುಡುಗಿದರು.
ಸರ್ಕಾರದ ಕೆಲಸ ನಿರಂತರವಾಗಿ ನಡೆಯುವ ಕೆಲಸವಾಗಿದೆ. ಯಾವುದೇ ಕಾಮಗಾರಿ ಪ್ರಾರಂಭ ಮಾಡಿ ಅದು ಅವರ ಕಾಲದಲ್ಲೆ ಮುಕ್ತಾಯವಾದರೆ ಅದರ ಶ್ರೇಯಸ್ಸು ಅವರು ತೆಗೆದುಕೊಳ್ಳಲಿ. ಇದಕ್ಕೆ ನಮ್ಮ ಅಭ್ಯಂತರ ಇಲ್ಲ. ಇದನ್ನು ಬಿಟ್ಟು ನಾನು ತಂದು ಯೋಜನೆ ಎಂದು ಸುಳ್ಳು ಆರೋಪಗಳನ್ನು ಮಾಡುವ ಚಾಳಿ ಕೈ ಬಿಡಬೇಕು ಎಂದು ಕಿಡಿಕಾರಿದರು.2015 ಅಕ್ಟೋಬರ್ 3ರಂದು ಕುಡಿಯುವ ನೀರಿನ ಯೋಜನೆಗಾಗಿ ಪಪಂ ಆಡಳಿತ ಮಂಡಳಿಯವರು ಇಲಾಖೆ ಅನುಮೋದನೆಗಾಗಿ ಪತ್ರ ಬರೆದಿದ್ದಾರೆ. 2017ರಲ್ಲಿ ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ಒಳಚರಂಡಿ ಅಧ್ಯಕ್ಷ ಶಿವಾನಂದ ಪಾಟೀಲಗೆ ಪತ್ರ ಬರೆದಿದ್ದೇನೆ. ಅದಾದ ನಂತರ 2019ರ ಪೂರ್ವದಲ್ಲಿ ಸಮ್ಮಿಶ್ರ ಸರಕಾರದಲ್ಲಿ ಮಂಡಳಿ ಅಧ್ಯಕ್ಷರಾದ ಯಶವಂತರಾಯ ರವರ ಕಚೇರಿಗೆ ಹಲವಾರು ಬಾರಿ ಮಂಜೂರಾತಿಗಾಗಿ ಸುತ್ತಾಡಿದ್ದೇನೆ. ನಂತರ ಆಗಿನ ಶಾಸಕರು ಕುಡಿಯುವ ನೀರಿನ ಯೋಜನೆಗೆ ಪತ್ರ ಬರೆದಿರುತ್ತಾರೆ. 2023 ಜ.30ರಂದು ಕೊನೆಗೆ ಅನುಮೋದನೆ ದೊರೆಯಿತು. ನಂತರ ಇದಕ್ಕೆ ಟೆಂಡರ್ ಕರೆದರು ಯಾರು ಕೂಡ ಹಾಕಲಿಲ್ಲ. ಪ್ಯಾಕೇಜ್ ಟೆಂಡರ್ ಮಾಡಬೇಕು ಎಂದು ಇಲಾಖೆಯವರು 2023 ಸೆಪ್ಟೆಂಬರ್ 9ರಂದು ತಿರ್ಮಾನ ಮಾಡಿದರು. ಆಗ ದೇವರ ದಯೆಯಿಂದ ನಾನು ಶಾಸಕರಾಗಿ ಆಯ್ಕೆಯಾದೆ. ಗ್ಲೊಬಲ್ ಟೆಂಡರ್ ಕರೆದರು ಯಾರು ಟೆಂಡರ್ ಹಾಕಲಿಲ್ಲ. ಆ ವೇಳೆ ಹೈದ್ರಾಬಾದ ಕಂಪನಿಗೆ ಸರ್ಕಾರ ಟೆಂಡರ್ ನೀಡಿತು. ಆದರೆ ಮಾಜಿ ಶಾಸಕರು ನಾನು ಮಾಡಿಸಿದ್ದು ಎಂದು ಹೇಳುತ್ತಿರುವುದು ಎಷ್ಟು ಸರಿ ಎಂದು ಜನ ತಿರ್ಮಾನ ಮಾಡಬೇಕು. ಪಪಂ ಆಡಳಿತ ಮಂಡಳಿಯವರು ಸರಕಾರಕ್ಕೆ ಹಲವಾರು ಬಾರಿ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ತಿಳಿದು ಮಾತನಾಡಬೇಕು ಎಂದರು.
ಸಿಎಂ ಸಿದ್ದರಾಮಯ್ಯ ಸರ್ಕಾರ ಎಲ್ಲ ಶಾಸಕರಿಗೂ ಅಭಿವೃದ್ಧಿಗಾಗಿ ಹಣ ಬಿಡುಗಡೆ ಮಾಡಿದ್ದಾರೆ. ನಾಲತವಾಡಕ್ಕೆ ವಿಶೇಷ ಅಭಿವೃದ್ಧಿಗೆ ₹5 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಅದರ ಕರಡನ್ನು ತಯಾರು ಮಾಡಿ ಸಲ್ಲಿಸಿ ಎಂದು ಆಡಳಿತ ಮಂಡಳಿಗೆ ತಿಳಿಸಿದ್ದೇನೆ. ಮಾಜಿ ಶಾಸಕ 1 ರು. ತಂದಿಲ್ಲ ಎಂದು ಏನು ಆರೋಪ ಮಾಡುತ್ತಾರೆ. ಅವರ ಅಧಿಕಾರದ ಕೊನೆಯ ಅವಧಿಯಲ್ಲಿ ಕೋಟಿಗಟ್ಟಲೆ ಬಿಲ್ ಬಾಕಿಯಿಟ್ಟು ಹೋಗಿದ್ದಾರೆ. ಎಲ್ಲಾ ಇಲಾಖೆಯಲ್ಲೂ ಬಾಕಿ ಇಟ್ಟಿದ್ದರು. ನಮ್ಮ ಸರ್ಕಾರ ಬಂದ ನಂತರ ಆ ಹಣ ಸಂದಾಯ ಮಾಡಿದ್ದೇವೆ. ಎರಡು ವರ್ಷ ಬರೀ ಬಾಕಿ ಬಿಲ್‌ಗಳನ್ನೇ ಸಂದಾಯ ಮಾಡಿದ್ದೇವೆ ಎಂದು ತಿಳಿಸಿದರು.ಮುಂದಿನ ವರ್ಷದಿಂದ ಎಲ್ಲಾ ಮತಕ್ಷೇತ್ರಕ್ಕೂ ಸಾಕಷ್ಟು ಅಭಿವೃದ್ಧಿಗೆ ಅನುದಾನ ಸಿಗಲಿದೆ. ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ₹63 ಸಾವಿರ ಕೋಟಿ ನೇರವಾಗಿ ಫಲಾನುಭವಿಗಳ ಅಕೌಂಟಿಗೆ ಸರಕಾರ ಜಮೆ ಮಾಡ್ತಾ ಇದೆ. ಗ್ಯಾರಂಟಿಯಿಂದ ನಮ್ಮ ಸರಕಾರಕ್ಕೆ ತೊಂದರೆ ಇಲ್ಲ. ಹಿಂದಿನ ಸರಕಾರ ಇಟ್ಟ ಬಾಕಿ ಬಿಲ್‌ನಿಂದ ನಮ್ಮ ಸರಕಾರಕ್ಕೆ ತೊಂದರೆ ಆಗಿತ್ತು. ಗ್ಯಾರಂಟಿ ಬಗ್ಗೆ ಟೀಕೆ ಮಾಡುವ ನೀವು, ದೆಹಲಿ ಚುನಾವಣೆಯಲ್ಲಿ ಯಾಕೆ ತಾವು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದೀರಿ? ನಿಮಗೆ ಗ್ಯಾರಂಟಿ ಯೋಜನೆ ಬಗ್ಗೆ ಟೀಕೆ ಮಾಡುವ ನೈತಿಕ ಅಧಿಕಾರ ಇಲ್ಲಾ ಎಂದರು.
ಪಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಇಲಕಲ್ ಮಾತನಾಡಿ, ಪಟ್ಟಣಕ್ಕೆ ನಿರಂತರವಾಗಿ ಶುದ್ಧ ಕುಡಿಯುವ ನೀರಿನ ಯೋಜನೆಯನ್ನು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ತಂದಿದ್ದಾರೆ. ಸುಮಾರು ₹19.70 ಕೋಟಿ ವೆಚ್ಚದ ಯೋಜನೆ ಇದಾಗಿದೆ. ಇದರಲ್ಲಿ ಶೇ50ಷ್ಟು ಕೇಂದ್ರ ಸರ್ಕಾರ, ಶೇ40ರಷ್ಟು ರಾಜ್ಯ ಸರ್ಕಾರ ಹಾಗೂ ಶೇ.10ರಷ್ಟು ಪಪಂನವರು ಅನುದಾನ ಹಂಚಿಕೆ ಮಾಡಬೇಕು. ಆದ್ದರಿಂದ ಪಪಂ ಜನರು ತರೆಗೆ ಪಾವತಿ ಮಾಡಿದರೆ ಅನುಕೂಲವಾಗುತ್ತದೆ ಎಂದರು.ಎಇಇ ಗೊವಿಂದ ಎಸ್ ಯೋಜನೆ ಕುರಿತು ಮಾತನಾಡಿದರು. ಬಸವರಾಜ ಚಿನಿವಾಲರ್ ನಿರೂಪಿಸಿದರು. ಈ ವೇಳೆ ಪಪಂ ಮುಖ್ಯಾಧಿಕಾರಿ ಈರಣ್ಣ ಕೊಣ್ಣೂರ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಮುಖಂಡರಾದ ನಾನಾಸಾಹೇಬ ದೇಶಮುಖ, ಶಿವಪ್ಪ ತಾತರೆಡ್ಡಿ, ಪಪಂ ಉಪಾಧ್ಯಕ್ಷ ಬಸವರಾಜ ಗಂಗನಗೌಡರ, ಸದಸ್ಯರಾದ ಪೃಥ್ವಿರಾಜ ನಾಡಗೌಡ, ಡಾ.ಎಸ್.ಬಿ.ಗಂಗನಗೌಡರ, ಅಂಬ್ರಪ್ಪ ಶೀರಿ, ಬಾಬು ಕ್ಷತ್ರಿ, ರಮೇಶ ಆಲಕೊಪ್ಪರ, ಶಿವಪುತ್ರಪ್ಪ ಗುರಿಕಾರ, ಸಂಗಪ್ಪ ಬಾರಡ್ಡಿ, ಯಮನವ್ವ ಬಂಡಿವಡ್ಡರ, ಲಲಿತಾ ಗೊರಬಾಳ ಹಾಗೂ ಇನ್ನಿತರರು ಇದ್ದರು.
-----11ಎನ್.ಎಲ್ಟಿ1
ನಾಲತವಾಡ ಪಟ್ಟಣಕ್ಕೆ ಕುಡಿಯುವ ನೀರಿನ ಸರಬರಾಜು ವಿತರಣಾ ವ್ಯವಸ್ಥೆ ಕಲ್ಪಿಸುವ ಅಮೃತ ಯೋಜನೆ 2.0 ಕಾಮಗಾರಿಗೆ ಬಸವೇಶ್ವರ ವೃತ್ತದಲ್ಲಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಭೂಮಿಪೂಜೆ ನೆರವೇರಿಸಿದರು.-----
ಕೋಟ್...ಗ್ಯಾರಂಟಿ ಬಗ್ಗೆ ಟೀಕೆ ಮಾಡುವ ನೀವು, ದೆಹಲಿ ಚುನಾವಣೆಯಲ್ಲಿ ಯಾಕೆ ತಾವು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದೀರಿ? ನಿಮಗೆ ಗ್ಯಾರಂಟಿ ಯೋಜನೆ ಬಗ್ಗೆ ಟೀಕೆ ಮಾಡುವ ನೈತಿಕ ಅಧಿಕಾರ ಇಲ್ಲಾ.
- ಸಿ.ಎಸ್.ನಾಡಗೌಡ ಅಪ್ಪಾಜಿ, ಶಾಸಕ