ಬೆಳೆಹಾನಿ ಪರಿಹಾರದ ಅರ್ಜಿ ಪಡೆಯದೇ ವಾಪಸ್‌, ರೈತ ಸಂಪರ್ಕ ಕೇಂದ್ರಕ್ಕೆ ಬೀಗ

| Published : Aug 28 2024, 12:52 AM IST

ಬೆಳೆಹಾನಿ ಪರಿಹಾರದ ಅರ್ಜಿ ಪಡೆಯದೇ ವಾಪಸ್‌, ರೈತ ಸಂಪರ್ಕ ಕೇಂದ್ರಕ್ಕೆ ಬೀಗ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳೆ ಪರಿಹಾರದ ಅರ್ಜಿಯನ್ನು ಕೃಷಿ ಇಲಾಖೆ ಅಧಿಕಾರಿಗಳು ಪಡೆಯದೆ ಕಾಲ ಮಿತಿ ಹಾಕಿ ರೈತರನ್ನು ವಾಪಸ್‌ ಕಳಿಸಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಜಡಿದು ಸೋಮವಾರ ಪ್ರತಿಭಟನೆ ನಡೆಸಿದರು.

ರಟ್ಟೀಹಳ್ಳಿ: ಬೆಳೆ ಪರಿಹಾರದ ಅರ್ಜಿಯನ್ನು ಕೃಷಿ ಇಲಾಖೆ ಅಧಿಕಾರಿಗಳು ಪಡೆಯದೆ ಕಾಲ ಮಿತಿ ಹಾಕಿ ರೈತರನ್ನು ವಾಪಸ್‌ ಕಳಿಸಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಜಡಿದು ಸೋಮವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ಸಂಕಷ್ಟದಲ್ಲಿದ್ದು, ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ರೈತ ಸಂಪರ್ಕ ಕೇಂದ್ರಕ್ಕೆ ಬಂದರೆ ಅವರ ಅರ್ಜಿ ಪಡೆಯದೆ ಉದ್ದಟತನದಿಂದ ವರ್ತಿಸಿ ರೈತರನ್ನು ವಾಪಸ್‌ ಕಳಿಸುತ್ತಿದ್ದಾರೆ. ಕೃಷಿ ಮಂತ್ರಿಯಾಗಲಿ, ಜಿಲ್ಲಾ ಉಸ್ತುವಾರಿ ಮಂತ್ರಿ, ಸರ್ಕಾರದ ಆದೇಶವಿಲ್ಲದಿದ್ದರೂ ಕೃಷಿ ಅಧಿಕಾರಿಗಳು ಹಾಗೂ ತಹಸೀಲ್ದಾರ ತೀರ್ಮಾನ ತೆಗೆದುಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಕಳೆದ ತಿಂಗಳು ಈ ಬಗ್ಗೆ ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳು ತಹಸೀಲ್ದಾರ್‌ ಕಾಲ ಮಿತಿ ಹಾಕದೇ ರೈತರ ಎಲ್ಲ ಅರ್ಜಿಗಳನ್ನು ಪಡೆಯುತ್ತೇವೆ ಎಂದು ಒಪ್ಪಿಗೆ ನೀಡಿದಾಗ ಪ್ರತಿಭಟನೆ ಕೈಬಿಟ್ಟಿತ್ತು. ಆದರೆ ಆ. 23 ಕೊನೆ ದಿನಾಂಕ ಎಂದು ಬೋರ್ಡ್‌ ಹಾಕಿ ರೈತರನ್ನು ವಾಪಸ್ಸ ಕಳಿಸಿದ್ದಾರೆ. ಕಾರಣ ಈ ತಿಂಗಳ ಕೊನೆಯವರೆಗೆ ಬೆಳೆ ಹಾಳಾದ ಎಲ್ಲ ರೈತರ ಅರ್ಜಿಗಳನ್ನು ಪಡೆಯಬೇಕೆಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಶಂಕರಪ್ಪ ಶಿರಗಂಬಿ ಮಾತನಾಡಿ, ಕೃಷಿ ಅಧಿಕಾರಿ ಹಾಗೂ ತಹಸೀಲ್ದಾರ್‌ ಸೇರಿಕೊಂಡು ಅರ್ಜಿ ಪಡೆಯಲು ಕಾಲ ಮಿತಿ ಹಾಕಿದ್ದು ಈ ಬಗ್ಗೆ ಸರಕಾರದ ಆದೇಶವಿಲ್ಲದಿದ್ದರೂ ಅಧಿಕಾರಿಗಳು ಮಾತ್ರ ಉದ್ದಟತನ ಪ್ರದರ್ಶಿಸುತ್ತಿರುವುದು ಸರಿಯಲ್ಲ, ಬಂದಂತ ಅರ್ಜಿ ಪಡೆದು ಹೊಲಗಳಿಗೆ ಭೇಟಿ ನೀಡಿ ಬೆಳೆ ಕಳೆದುಕೊಂಡ ರೈತರ ಸಮರ್ಪಕ ವರದಿ ನೀಡಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ್‌ ಕೆ. ಗುರುಬಸವರಾಜ ಹಾಗೂ ಕೃಷಿ ನಿರ್ದೇಶಕ ಹೆಚ್.ಬಿ. ಗೌಡಪ್ಪಳವರ ಹಾಗೂ ಕೃಷಿ ಅಧಿಕಾರಿ ಜಿ.ಎಂ. ಬತ್ತಿಕೊಪ್ಪ ಸ್ಥಳಕ್ಕಾಗಮಿಸಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಆ.31ರವರೆಗೆ ಬೆಳೆ ಹಾನಿ ಅರ್ಜಿಗಳನ್ನು ಪಡೆಯಲಾಗುವುದು ಎಂದು ಪ್ರತಿಭಟನಾ ನಿರತ ರೈತರಿಗೆ ಮಾಹಿತಿ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

ಇದೇ ಸಂದರ್ಭದಲ್ಲಿ ಬಸನಗೌಡ ಗಂಗಪ್ಪಳವರ, ಉಜನೆಪ್ಪ ಕೊಡಿಹಳ್ಳಿ, ಮಲ್ಲನಗೌಡ ಮಾಳಗಿ, ಜಗದೀಶ ಮೂಲಿಮನಿ, ಶಂಭು ಮುತ್ತಗಿ, ಮಲ್ಲೇಶಪ್ಪ ಸಿದ್ದಗೇರಿ, ಎಂ.ಆರ್. ಮಣಕೂರ, ಮಂಜಪ್ಪ ಬಾಗೊಡಿ, ಕರಬಸಪ್ಪ ಬಸಾಪೂರ, ಮಲ್ಲನಗೌಡ ಮಳಗಿ, ಮಂಜನಗೌಡ ಪಾಟೀಲ, ಕರಬಸಪ್ಪ ಸಣ್ಣಗುಬ್ಬಿ, ಜಗದೀಶ ಮೂಲಿಮನಿ ಮುಂತಾದವರು ಇದ್ದರು.