ಇವರಿಬ್ಬರು ರಾಷ್ಟ್ರ ರಾಜಕಾರಣದ ದಿಗ್ಗಜ ನಾಯಕರು. ಒಂದು ಕಾಲದಲ್ಲಿ ಕಾಂಗ್ರೆಸ್‌ನ ‘ಆಪ್ತ ಮಿತ್ರ’ರಾಗಿದ್ದವರು, ಕಳೆದ 4 ದಶಕಗಳಿಂದ ಕಡು ವೈರಿಗಳಾಗಿ ಬದಲಾಗಿದ್ದರು. ಇದೀಗ ದೀರ್ಘ ಕಾಲದ ದ್ವೇಷ ಮರೆತು ಒಂದಾಗಿದ್ದಾರೆ!

ಸಂದೀಪ್‌ ವಾಗ್ಲೆ

ಮಂಗಳೂರು: ಇವರಿಬ್ಬರು ರಾಷ್ಟ್ರ ರಾಜಕಾರಣದ ದಿಗ್ಗಜ ನಾಯಕರು. ಒಂದು ಕಾಲದಲ್ಲಿ ಕಾಂಗ್ರೆಸ್‌ನ ‘ಆಪ್ತ ಮಿತ್ರ’ರಾಗಿದ್ದವರು, ಕಳೆದ 4 ದಶಕಗಳಿಂದ ಕಡು ವೈರಿಗಳಾಗಿ ಬದಲಾಗಿದ್ದರು. ಇದೀಗ ದೀರ್ಘ ಕಾಲದ ದ್ವೇಷ ಮರೆತು ಒಂದಾಗಿದ್ದಾರೆ!

ಅವರೇ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಹಾಗೂ ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ. ರಾಜಕೀಯ ಜೀವನದ ಸಂಧ್ಯಾ ಕಾಲದಲ್ಲಿರುವ ಈ ನಾಯಕರಿಬ್ಬರ ದಿಢೀರ್‌ ಪುನರ್ಮಿಲನಕ್ಕೆ ಪೂಜಾರಿ ಅವರ ನಿವಾಸ ಭಾನುವಾರ ಸಾಕ್ಷಿಯಾಯಿತು. ಈ ಮೂಲಕ ಸುದೀರ್ಘ ದ್ವೇಷಕ್ಕೆ ಅಂತ್ಯ ಹಾಡಿ ಮರಳಿ ಸ್ನೇಹದ ಬಾಂಧವ್ಯ ಬೆಸೆದಿತ್ತು. ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ ಎಂಬ ಮಾತು ಈ ಪ್ರಕರಣದಲ್ಲಿ ನಿಜವಾಗಿ, ಧನಾತ್ಮಕ ಮೇಲ್ಪಂಕ್ತಿ ಹಾಕಿಕೊಟ್ಟಿದೆ.

ದಿಗ್ಗಜರ ಪುನರ್ಮಿಲನ:

ಭಾನುವಾರ ಕರಾವಳಿಗೆ ಆಗಮಿಸಿದ್ದ ವೀರಪ್ಪ ಮೊಯ್ಲಿ ಅವರು ಮಧ್ಯಾಹ್ನ 1 ಗಂಟೆಗೆ ಬಂಟ್ವಾಳದಲ್ಲಿರುವ ಜನಾರ್ದನ ಪೂಜಾರಿ ನಿವಾಸಕ್ಕೆ ತೆರಳಿದರು. 4 ದಶಕಗಳಿಂದ ವೇದಿಕೆಯನ್ನೂ ಹಂಚಿಕೊಳ್ಳದ (ಅನಿವಾರ್ಯತೆ ಹೊರತುಪಡಿಸಿ) ಇಬ್ಬರ ಭೇಟಿ ತೀರ ಭಾವುಕವಾಗಿತ್ತು. ಪರಸ್ಪರ ನಮಿಸಿ ಗೌರವಿಸಿದರು, ನೆನಪುಗಳನ್ನು ಹಂಚಿಕೊಂಡರು. ಮೊದಲಿನ ಸ್ನೇಹದ ದಿನಗಳು, ನಂತರದ ಸುದೀರ್ಘ ದ್ವೇಷದ ಪ್ರಸ್ತಾಪವೂ ಆಯಿತು. ಇಬ್ಬರ ಕಣ್ಣಾಲಿಗಳು ತೇವಗೊಂಡವು, ಇಷ್ಟಾಗುವ ಹೊತ್ತಿಗೆ ಮರಳಿ ಸ್ನೇಹದ ಟಿಸಿಲೊಡೆದಿತ್ತು.

ಪೂಜಾರಿ ಅವರನ್ನು ಭೇಟಿ ಮಾಡಲು ಬೆಂಗಳೂರಿನಿಂದ ಬರುತ್ತಿರುವುದಾಗಿ ವೀರಪ್ಪ ಮೊಯ್ಲಿ ಅವರು ಬೆಳಗ್ಗೆಯೇ ಕರೆ ಮಾಡಿ ಪೂಜಾರಿ ಮನೆಯವರಿಗೆ ತಿಳಿಸಿದ್ದರು. ಅದರಂತೆ ಬೆಳಗ್ಗೆ 10 ಗಂಟೆಯಿಂದಲೇ ಪೂಜಾರಿ ಮನೆಯವರು ಮೊಯ್ಲಿ ಬರುವಿಕೆಗಾಗಿ ಕಾಯುತ್ತಿದ್ದರು. ಆದರೆ ಮೊಯ್ಲಿ ಅವರಿಗೆ ಮಂಗಳೂರಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಆಹ್ವಾನ ಬಂದಿದ್ದರಿಂದ ಮಧ್ಯಾಹ್ನ ಈ ಭೇಟಿ ಸಾಕಾರವಾಯಿತು.ರಾಜಕೀಯ ಮಾತೇ ಇಲ್ಲ:

ಇಬ್ಬರು ನಾಯಕರು ಪರಸ್ಪರ ಕುಟುಂಬಸ್ಥರ ಉಭಯ ಕುಶಲೋಪರಿ, ಆರೋಗ್ಯ ವಿಚಾರಿಸಿದರು. ಸುದೀರ್ಘ ಆರೋಗ್ಯ, ಚಟುವಟಿಕೆಯ ಭವಿಷ್ಯಕ್ಕಾಗಿ ಹಾರೈಸಿದರು. ‘‘ಆರಂಭ ಕಾಲದಲ್ಲಿ ಅಣ್ಣ- ತಮ್ಮಂದಿರಂತೆ ಇದ್ದೆವು, ನಡುವೆ ಏನೋ ಕೆಟ್ಟ ಗಳಿಗೆ ಬಂದಿತ್ತು. ಇನ್ನು ಮುಂದೆ ಹೀಗೇ ಅಣ್ಣ- ತಮ್ಮಂದಿರಂತೆ ಇರೋಣ” ಎಂದು ಹೇಳಿಕೊಂಡರು. ಹಿಂದೆ ಪೂಜಾರಿ ಕೇಂದ್ರ ಸಚಿವರಾಗಬೇಕೆಂದು ಮೊಯ್ಲಿ ಅವರ ಪತ್ನಿ ಹರಕೆ ಹೊತ್ತುಕೊಂಡದ್ದನ್ನು ಮೊಯ್ಲಿ ನೆನಪಿಸಿಕೊಂಡರು. ತಮ್ಮ ಬೆಂಗಳೂರಿನ ಮನೆಗೆ ಪೂಜಾರಿ ಅವರನ್ನು ಆಹ್ವಾನಿಸಿದರು. ಈ ಬಾಂಧವ್ಯ ಮುಂದುವರಿಸುವ ಆಶಯದೊಂದಿಗೆ ಉಭಯ ನಾಯಕರು ಸ್ನೇಹಪೂರ್ವಕವಾಗಿ ಬೀಳ್ಕೊಟ್ಟರು. ಯಾವುದೇ ರಾಜಕೀಯ ಮಾತುಕತೆ ನಡೆದಿಲ್ಲ ಎಂಬುದಾಗಿ ಸ್ಥಳದಲ್ಲಿದ್ದ ಕಾಂಗ್ರೆಸ್‌ ಮುಖಂಡರೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಈ ಅಪರೂಪದ ಸಂಗಮಕ್ಕೆ ಮಾಜಿ ಸಚಿವ ರಮಾನಾಥ ರೈ, ಕಾಂಗ್ರೆಸ್‌ ಮುಖಂಡರಾದ ಭಾಸ್ಕರ್‌ ಕೆ., ಡಿ.ಕೆ. ಅಶೋಕ್‌, ಬೇಬಿ ಕುಂದರ್‌ ಮತ್ತಿತರರು ಸಾಕ್ಷಿಯಾಗಿದ್ದರು.

1985ರಿಂದಲೇ ಹಾವು- ಮುಂಗುಸಿಯಾಟ!:

1972ರಲ್ಲಿ ಕಾರ್ಕಳ ಶಾಸಕರಾಗುವ ಮೂಲಕ ರಾಜಕೀಯ ಅಧಿಕಾರಕ್ಕೆ ಪಾದಾರ್ಪಣೆ ಮಾಡಿದವರು ವೀರಪ್ಪ ಮೊಯ್ಲಿ. 1977ರಲ್ಲಿ ಮೊದಲ ಬಾರಿ ಸಂಸದರಾದವರು ಜನಾರ್ದನ ಪೂಜಾರಿ. ಅದಕ್ಕೂ ಮೊದಲಿನಿಂದಲೂ ಮೊಯ್ಲಿ- ಪೂಜಾರಿ ಅವರ ಸ್ನೇಹ ರಾಜಕೀಯದಲ್ಲಿ ಮನೆ ಮಾತಾಗಿತ್ತು. ವೀರಪ್ಪ ಮೊಯ್ಲಿ 6 ಬಾರಿ ಶಾಸಕ, 2 ಬಾರಿ ಎಂಪಿ, ಮುಖ್ಯಮಂತ್ರಿಯಾಗಿ, ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಜನಾರ್ದನ ಪೂಜಾರಿ ಅವರು 4 ಬಾರಿ ಎಂಪಿ, 2 ಬಾರಿ ರಾಜ್ಯಸಭಾ ಸದಸ್ಯ, 2 ಬಾರಿ ಕೆಪಿಸಿಸಿ ಅಧ್ಯಕ್ಷರಾಗಿದ್ದವರು. ಇಬ್ಬರೂ ಕಾಂಗ್ರೆಸ್‌ನ ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವಿಗಳಾಗಿದ್ದು, ಗಾಂಧಿ ಕುಟುಂಬಸ್ಥರಿಗೆ ಆಪ್ತರಾಗಿದ್ದರು. ಎಐಸಿಸಿಯಲ್ಲಿ ಕೂಡ ಪ್ರಭಾವಿ ಹುದ್ದೆಗಳಲ್ಲಿದ್ದವರು. ಆದರೆ ಒಂದು ಹಂತದಲ್ಲಿ ದಿಢೀರನೆ ಇಬ್ಬರ ನಡುವೆ ಗಾಢ ವೈರತ್ವ ಬೆಳೆದಿತ್ತು. 1985ರಿಂದಲೂ ಈ ವೈರತ್ವ ಇತ್ತು, ಕಾಲಕ್ರಮೇಣ ಬದ್ಧ ವೈರಿಗಳಾಗಿ ಬದಲಾಗಿದ್ದರು ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ನೆನಪಿಸಿಕೊಳ್ಳುತ್ತಾರೆ.