ರಥೋತ್ಸವ ಪ್ರಸಾದ ವಿಚಾರದಲ್ಲಿ ರೇವಣ್ಣ ಅಸಮಾಧಾನ

| Published : Mar 13 2025, 12:49 AM IST

ಸಾರಾಂಶ

ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಸೇವೆ ಮಾಡುವ ಉದ್ದೇಶದಿಂದ ಕಳೆದ ೨೫ ವರ್ಷದಿಂದ ಹೂವಿನ ವ್ಯವಸ್ಥೆ ಹಾಗೂ ಪ್ರಸಾದ ವ್ಯವಸ್ಥೆ ಮಾಡುತ್ತಿದ್ದೇವೆ. ಒಬ್ಬ ಎಂಪಿ ಹೇಳಿದರು ಅಂತ ಪ್ರಸಾದ ಸೇವೆಯನ್ನೆ ನಿಲ್ಲಿಸುತ್ತೇವೆ ಎಂದು ನೀವು ಹೇಳಿದರೆ ಏನರ್ಥ. ಈ ರೀತಿಯಲ್ಲಿ ತೇಜೋವಧೆ ಮಾಡುವುದಾದರೆ ನನಗೆ ಕೊಟ್ಟಿರುವ ಪ್ರೋಟಾಕಾಲ್ ಬೇಡ ಬಿಡಿ ಎಂದು ಸರ್ಕಾರಕ್ಕೆ ಬರೆಯುತ್ತೇನೆ ಎಂದು ಶಾಸಕ ಎಚ್.ಡಿ.ರೇವಣ್ಣ ಬೇಸರದಿಂದ ನುಡಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಸೇವೆ ಮಾಡುವ ಉದ್ದೇಶದಿಂದ ಕಳೆದ ೨೫ ವರ್ಷದಿಂದ ಹೂವಿನ ವ್ಯವಸ್ಥೆ ಹಾಗೂ ಪ್ರಸಾದ ವ್ಯವಸ್ಥೆ ಮಾಡುತ್ತಿದ್ದೇವೆ. ಒಬ್ಬ ಎಂಪಿ ಹೇಳಿದರು ಅಂತ ಪ್ರಸಾದ ಸೇವೆಯನ್ನೆ ನಿಲ್ಲಿಸುತ್ತೇವೆ ಎಂದು ನೀವು ಹೇಳಿದರೆ ಏನರ್ಥ. ಈ ರೀತಿಯಲ್ಲಿ ತೇಜೋವಧೆ ಮಾಡುವುದಾದರೆ ನನಗೆ ಕೊಟ್ಟಿರುವ ಪ್ರೋಟಾಕಾಲ್ ಬೇಡ ಬಿಡಿ ಎಂದು ಸರ್ಕಾರಕ್ಕೆ ಬರೆಯುತ್ತೇನೆ ಎಂದು ಶಾಸಕ ಎಚ್.ಡಿ.ರೇವಣ್ಣ ಬೇಸರದಿಂದ ನುಡಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ತಹಸೀಲ್ದಾರ್‌ ವೈ.ಎಂ.ರೇಣುಕುಮಾರ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಬೇಸರ ವ್ಯಕ್ತಪಡಿಸಿ ಮಾತನಾಡಿದರು. ಎಂಪಿಯವರು ಅವರ ಮನೆ ಪೂಜೆ ದಿನ ೧೦ ಸಾವಿರ ಜನರಿಗೆ ಪ್ರಸಾದ ಮಾಡಿಸಲಿ, ನಾನು ನಮ್ಮ ಪೂಜೆ ದಿನ ಪ್ರಸಾದ ಮಾಡಿಸುತ್ತೇನೆ. ನಾನು ಸ್ಥಳೀಯ ಶಾಸಕನಾಗಿದ್ದೇನೆ ಜತೆಗೆ ಆರಾಧನಾ ಸಮಿತಿ ಅಧ್ಯಕ್ಷನಿದ್ದೇನೆ. ನನಗೆ ಹಕ್ಕಿದೆ, ನನಗೆ ಮಾಡಿಸಬೇಡ ಅಂತ ಹೇಳಲು ನೀವ್ಯಾರೀ, ಆದರೂ ಊರಿನಲ್ಲಿ ಅಶಾಂತಿ ಆಗಬಾರದು ಅಂತ ತಲೆ ಬಾಗುತ್ತಿದ್ದೇನೆ. ಇಂದು ಬೇಡ ಅಂತ ಹೇಳುವವರು ಕಳೆದ ೨೫ ವರ್ಷಗಳಿಂದ ಯಾವ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ದೇವೇಗೌಡರು ಜನರಿಂದ ಹಣ ಸಂಗ್ರಹಿಸಿ, ಶಾಲಾ ಕಾಲೇಜು ಕಟ್ಟಿಸಿದ್ದಾರೆ, ಈಗ ನೋಡ್ರಿ ನಾನು ಎಷ್ಟು ಶಾಲಾ ಕಾಲೇಜು ಹಾಗೂ ಅಭಿವೃದ್ಧಿ ಮಾಡಿದ್ದೇನೆ ಎಂದರು.

ಜನಸಾಮಾನ್ಯರಿಗರ ತೊಂದರೆ ಆಗದಂತೆ ನೋಡಿಕೊಳ್ಳಿ:

ಊರಿನಲ್ಲಿ ಅಶಾಂತಿ ಉಂಟಾಗಬಾರದು, ಜಾತ್ರೆ ದಿನ ಹೆಣ್ಣುಮಕ್ಕಳಿಗೆ ಬಣ್ಣ ಹಾಕೋದು ಅಥವಾ ಕೆಟ್ಟದಾಗಿ ವರ್ತಿಸದಂತೆ ನೋಡಿಕೊಳ್ಳಿ, ಯಾವುದೇ ಪಕ್ಷವಾದರೂ ಮುಲಾಜಿಲ್ಲದೇ ಬೆಂಡೆತ್ತಿ ಎಂದರು. ಪೊಲೀಸ್ ಠಾಣೆಯಲ್ಲಿ ಬೇಕಾದವರಿಗೆ ಕುರ್ಚಿ ಹಾಕಿಸಿ ಕೂರಿಸೋದು, ಬೇಡದವರನ್ನು ನಿಲ್ಲಿಸೋದು ಬಿಡಿ. ಹಳ್ಳಿಮೈಸೂರಿನ ಜೋಡಿಗುಬ್ಬಿಯಲ್ಲಿ ಅಣ್ಣತಮ್ಮ ಗಲಾಟೆಯಲ್ಲಿ ಪೊಲೀಸ್ ಒಬ್ಬ ಮಫ್ತಿಯಲ್ಲಿ ಮದ್ಯ ಸೇವಿಸಿ ಜನರನ್ನು ಪೀಡಿಸುವ ವಿಡಿಯೋ ಬಂದಿದೆ. ನಿಮಗೆ ಕಳುಹಿಸುತ್ತೇನೆ. ನೀವೇ ನೋಡಿ, ಎಸ್ಪಿ ಸಾಹೇಬರಿಗೂ ತೋರಿಸಿದ್ದೇನೆ ಎಂದರು. ಜನಸಾಮಾನ್ಯರಿಗೆ ತೊಂದರೆ ಆಗದಂತೆ ಅಗತ್ಯ ಕ್ರಮಕೈಗೊಂಡು ಜಾತ್ರಾ ಮಹೋತ್ಸವ ಸುಸೂತ್ರವಾಗಿ ನಡೆಯುವಂತೆ ಎಲ್ಲರೂ ನೋಡಿಕೊಳ್ಳಿ ಎಂದರು.

ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ ಸಂದರ್ಭದಲ್ಲಿ ಕೋಟೆ ನಾಲ್ಕೂ ರಾಜಬೀದಿಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಗಾಂಧಿವೃತ್ತದ ಮೂಲಕ ಬರುವ ಭಕ್ತಾದಿಗಳಿಗೆ ಶ್ರೀಮಹಾಗಣಪತಿ ಪೆಂಡಾಲಿನ ಮುಂಭಾಗದಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಪಾರ್ಕಿಂಗ್‌ಗೆ ಅವಕಾಶ ಮಾಡಲಾಗಿದೆ. ಕಾಲುವೆ ಕವರ್‌ ಡೆಕ್ ಮೇಲೆ ಒಂದು ಬದಿ ಮಾರುಕಟ್ಟೆ ನಡೆಯುತ್ತಿದ್ದ ಮತ್ತೊಂದು ಕಡೆ ಅರಕಲಗೂಡು ರಸ್ತೆ ಸಮೀಪ ಬಾಬು ಜಗಜೀವನರಾಂ ವೃತ್ತದವರೆಗೂ ಖಾಲಿ ಪ್ರದೇಶದಲ್ಲಿ ಪಾರ್ಕಿಂಗ್‌ಗೆ ಅವಕಾಶ ಮಾಡಲಾಗಿದೆ. ಮೈಸೂರು ರಸ್ತೆಯಿಂದ ದೇವರಾಜ ರಸ್ತೆ ಮೂಲಕ ಎಸ್‌ಎಲ್‌ಎನ್‌ ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿ ಎಡಬದಿಯ ಖಾಲಿ ನಿವೇಶನಗಳನ್ನು ಸಮತಲಗೊಳಿಸಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ ಮತ್ತು ಇವುಗಳನ್ನು ಹೊರತುಪಡಿಸಿ ಬೇರೆಲ್ಲೂ ವಾಹನಗಳ ಪ್ರವೇಶ ಹಾಗೂ ಪಾರ್ಕಿಂಗ್ ಮಾಡದಂತೆ ವಿನಂತಿಸಿ, ಸಾರ್ವಜನಿಕರು ಸಹಕರಿಸಲು ನಗರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.