ಎಚ್ ಡಿ ರೇವಣ್ಣಗೆ ಬಂಧನ ಭೀತಿ!

| Published : Apr 29 2024, 01:31 AM IST / Updated: Apr 29 2024, 07:17 AM IST

HD Revanna

ಸಾರಾಂಶ

ಪ್ರಜ್ವಲ್‌ ಬಳಿಕ ಆರೋಪಿ ನಂ.1 ತಂದೆಗೂ ಸಂಕಷ್ಟ ಎದುರಾಗಿದ್ದು, ಹೊಳೆನರಸೀಪುರ ಶಾಸಕ ರೇವಣ್ಣಗೆ ಬಂಧನ ಭೀತಿ ಎದುರಾಗಿದೆ.

 ಬೆಂಗಳೂರು :  ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಬೆನ್ನಲ್ಲೇ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಚ್‌.ಡಿ.ರೇವಣ್ಣ ವಿರುದ್ಧವೂ ಅದೇ ಆರೋಪ ಕೇಳಿಬಂದಿದೆ. ಇದೀಗ ಪುತ್ರನ ಜತೆಗೆ ಎಚ್‌.ಡಿ.ರೇವಣ್ಣ ಸಹ ಸಂಕಷ್ಟಕ್ಕೆ ಸಿಲುಕಿದ್ದು, ಬಂಧನದ ಭೀತಿ ಎದುರಾಗಿದೆ.

ಈಗಾಗಲೇ ಪ್ರಜ್ವಲ್‌ ರೇವಣ್ಣ ಹಲವು ಮಹಿಳೆಯರ ಮೇಲೆ ನಡೆಸಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಸಂಬಂಧ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ.

ಇದರ ಬೆನ್ನಲ್ಲೇ ಭಾನುವಾರ ಮಹಿಳೆಯೊಬ್ಬರು ತನ್ನ ಮೇಲೆ ಎಚ್‌.ಡಿ.ರೇವಣ್ಣ ಮತ್ತು ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಹೊಳೆನರಸೀಪುರ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಪೊಲೀಸರು ತಂದೆ-ಮಗನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಎಚ್‌.ಡಿ.ರೇವಣ್ಣ 1ನೇ ಆರೋಪಿಯಾಗಿದ್ದಾರೆ. ಹೀಗಾಗಿ ಪುತ್ರನ ಜತೆಗೆ ಎಚ್‌.ಡಿ.ರೇವಣ್ಣ ಅವರು ಸಂಕಷ್ಟಕ್ಕೆ ಗುರಿಯಾಗಿದ್ದು, ಬಂಧನದ ಭೀತಿಯಲ್ಲಿದ್ದಾರೆ.ಈ ಪ್ರಕರಣವು ಶೀಘ್ರದಲ್ಲೇ ಎಸ್‌ಐಟಿಗೆ ವರ್ಗಾವಣೆಯಾಗಲಿದ್ದು, ತಂದೆ-ಮಗನಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಅಧಿಕಾರಿಗಳು ನೋಟಿಸ್‌ ನೀಡುವ ಸಾಧ್ಯತೆಯಿದೆ.