ಎಸ್‌ಐಟಿ ವಿಚಾರಣೆ ವೇಳೆ ರೇವಣ್ಣ ಭಾರಿ ಅಸಹಕಾರ

| Published : May 07 2024, 01:03 AM IST / Updated: May 07 2024, 08:37 AM IST

HD Revanna

ಸಾರಾಂಶ

ಯಾವುದೇ ಪ್ರಶ್ನೆಗೂ ಸಮರ್ಪಕ ಉತ್ತರವಿಲ್ಲದೆ ಪ್ರಶ್ನಿಸುವ ಅಧಿಕಾರಿಗಳ ಮೇಲೆಯೇ ರೇಗಾಟ ನಡೆಸುತ್ತಿರುವ ರೇವಣ್ಣ ತನಿಖೆಗೆ ಭಾರೀ ಅಸಹಕಾರ ತೋರುತ್ತಿದ್ದಾರೆ.

 ಬೆಂಗಳೂರು :  ಮಹಿಳೆ ಅಪಹರಣ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಎರಡನೇ ದಿನವಾದ ಸೋಮವಾರವೂ ಆರೋಪಿ ಎಚ್‌.ಡಿ.ರೇವಣ್ಣ ಅವರನ್ನು ವಿಚಾರಣೆ ಮಾಡಿದರು.ನಾಲ್ಕು ದಿನಗಳ ಕಾಲ ರೇವಣ್ಣ ಅವರನ್ನು ವಶಕ್ಕೆ ಪಡೆದಿರುವ ಎಸ್‌ಐಟಿ ಅಧಿಕಾರಿಗಳು ಕಾರ್ಲ್‌ಟನ್‌ ಕಟ್ಟಡದ ಸಿಐಡಿ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, ಅಧಿಕಾರಿಗಳ ವಿಚಾರಣೆಗೆ ರೇವಣ್ಣ ಸಹಕರಿಸುತ್ತಿಲ್ಲ. ಯಾವುದೇ ಪ್ರಶ್ನೆಗಳಿಗೂ ಸಮರ್ಪಕ ಉತ್ತರ ನೀಡುತ್ತಿಲ್ಲ. ಆ ಮಹಿಳೆ ಯಾರೆಂಬುದೇ ನನಗೆ ಗೊತ್ತಿಲ್ಲ. ಆಕೆಯನ್ನು ನಾನು ನೋಡಿಯೂ ಇಲ್ಲ. ಅಪಹರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಒಂದು ಸಾಲಿನ ಸಿದ್ಧ ಮಾದರಿ ಉತ್ತರ ಮುಂದುವರೆಸಿದ್ದಾರೆ ಎನ್ನಲಾಗಿದೆ.

ಮುಂದುವರೆದು, ಹೊಳೆನರಸೀಪುರ ಟೌನ್‌ ಠಾಣೆಯಲ್ಲಿ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಕೇಳಲಾದ ಪ್ರಶ್ನೆಗಳಿಗೆ ರೇವಣ್ಣ ಅಧಿಕಾರಿಗಳ ಮೇಲೆಯೇ ರೇಗಾಡಿದ್ದಾರೆ. ನನಗೆ ಯಾವ ಮಹಿಳೆಯೂ ಗೊತ್ತಿಲ್ಲ ಎಂದು ಸಿಡಿಮಿಡಿಗೊಂಡರು ಎಂದು ತಿಳಿದು ಬಂದಿದೆ.ಇನ್ನು ಮಹಿಳೆ ಅಪಹರಣ ಪ್ರಕರಣ ಸಂಬಂಧ ಸ್ವಚ್ಛಾ ಹೇಳಿಕೆಗೆ ಸಹಿ ಹಾಕಲು ರೇವಣ್ಣ ನಿರಾಕರಿಸಿದ್ದಾರೆ. ನೀವು ಬೇಕಾದಂತೆ ಬರೆದುಕೊಂಡಿರುವುದಕ್ಕೆ ನಾನು ಸಹಿ ಹಾಕಲ್ಲ ಎಂದು ಹಠ ಹಿಡಿದಿದ್ದಾರೆ.

 ರೇವಣ್ಣ ಅವರ ವರ್ತನೆಗೆ ಎಸ್ಐಟಿ ಅಧಿಕಾರಿಗಳು ಸುಸ್ತು ಹೊಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.ಬೆಳಗ್ಗೆ ವಕೀಲರೊಂದಿಗೆ ಚರ್ಚೆ:ನ್ಯಾಯಾಲಯವು ಆರೋಪಿ ರೇವಣ್ಣಗೆ ಪ್ರತಿ ದಿನ ಒಂದು ತಾಸು ತಮ್ಮ ವಕೀಲರ ಜತೆ ಮಾತನಾಡಲು ಅವಕಾಶ ನೀಡಿದೆ. ಅದರಂತೆ ಸೋಮವಾರ ಬೆಳಗ್ಗೆ 9.30ಕ್ಕೆ ಸಿಐಡಿ ಕಚೇರಿಗೆ ಬಂದಿದ್ದ ವಕೀಲರ ಜತೆಗೆ ರೇವಣ್ಣ ಚರ್ಚಿಸಿದರು. 

ಪ್ರಕರಣ ಸಾಗುತ್ತಿರುವ ರೀತಿ, ವಿಚಾರಣೆ, ಜಾಮೀನು ಅರ್ಜಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ವಕೀಲರ ಜತೆಗೆ ಮಾತುಕತೆ ನಡೆಸಿದರು ಎಂದು ತಿಳಿದು ಬಂದಿದೆ.ಸ್ಥಳ ಮಹಜರ್‌ಗೆ ಕರೆದೊಯ್ಯವ ಸಾಧ್ಯತೆ:ಎಸ್‌ಐಟಿ ಬಂಧನದಲ್ಲಿರುವ ಆರೋಪಿಗಳಾದ ರೇವಣ್ಣ ಮತ್ತು ಸತೀಶ್‌ ಬಾಬು ಇಬ್ಬರನ್ನೂ ಎಸ್ಐಟಿ ಅಧಿಕಾರಿಗಳು ಕೆ.ಆರ್‌.ನಗರ ಮತ್ತು ಹುಣಸೂರಿಗೆ ಕರೆದೊಯ್ದು ಸ್ಥಳ ಮಹಜರ್‌ ನಡೆಸುವ ಸಾಧ್ಯತೆಯಿದೆ. ಮೇ 8ಕ್ಕೆ ರೇವಣ್ಣ ಎಸ್‌ಐಟಿ ಕಸ್ಟಡಿ ಅಂತ್ಯವಾಗಲಿದೆ. ಅಷ್ಟರೊಳಗೆ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಸ್ಥಳ ಮಹಜರ್‌ಗೆ ಕರೆದೊಯ್ಯುವ ಸಾಧ್ಯತೆಯಿದೆ.