ಕನ್ನಡಪ್ರಭ ವಾರ್ತೆ ಬೇಲೂರು

ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳುವುದಿಲ್ಲ ಎಂದು ಗ್ಯಾರಂಟಿ ಅನುಷ್ಠಾನ ಯೋಜನೆ ರಾಜ್ಯಾಧ್ಯಕ್ಷ ಎಚ್. ಎಂ. ರೇವಣ್ಣ ಸ್ಪಷ್ಟನೆ ನೀಡಿದರು.ಮತದಾರರ ಹಕ್ಕುಗಳ ಸಂರಕ್ಷಣೆ, ಮತದಾರರ ಪಟ್ಟಿಯ ನಿಖರತೆ ಹಾಗೂ ಪ್ರಜಾಪ್ರಭುತ್ವದ ಬಲವರ್ಧನೆಗೆ ಒತ್ತು ನೀಡುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷದ ವತಿಯಿಂದ “ಕಾಂಗ್ರೆಸ್ ನಡೆ ನಿಮ್ಮ ಮತ ರಕ್ಷಣೆಯ ಕಡೆ” ಕಾರ್ಯಕ್ರಮವನ್ನು ಪಟ್ಟಣದ ಭರತ್ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಿಸಲಾಯಿತು. ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕುರಿತು ಕಾರ್ಯಾಗಾರ ಮತ್ತು ಜಾಗೃತಿ ಸಭೆ ನಡೆಸಿ, ಬಿಎಲ್‌ಎ-2 ಕಾರ್ಯಕರ್ತರಿಗೆ ತರಬೇತಿ ನೀಡಿದ ಕಾರ್ಯಕ್ರಮದಲ್ಲಿ ಮಾತನಾಡಿ ಯೋಜನೆಗಳ ಅನುಷ್ಠಾನಕ್ಕಾಗಿ ಬಜೆಟ್‌ನಲ್ಲಿ ₹52 ಸಾವಿರ ಕೋಟಿ ಮೀಸಲಿಡಲಾಗಿದ್ದು, ಲಕ್ಷಾಂತರ ಫಲಾನುಭವಿಗಳಿಗೆ ಯಶಸ್ವಿಯಾಗಿ ತಲುಪಿಸಲಾಗುತ್ತಿದೆ. ಯೋಜನೆಗಳ ಪಾರದರ್ಶಕ ಅನುಷ್ಠಾನಕ್ಕಾಗಿ ಪರಿಶೀಲನೆ ನಡೆಯುತ್ತಿದ್ದು, ಸುಮಾರು 1.42 ಲಕ್ಷ ಮರಣ ಹೊಂದಿದವರ ಖಾತೆಗಳಿಗೆ ಹಣ ಜಮೆಯಾಗುತ್ತಿರುವುದು ಪತ್ತೆಯಾಗಿದೆ. ಇಂತಹ ಅನರ್ಹ ಪ್ರಕರಣಗಳನ್ನು ತಡೆಗಟ್ಟುವ ಉದ್ದೇಶದಿಂದ ಮಾತ್ರ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ನೋಡಿಕೊಳ್ಳುವುದು ಕಾಂಗ್ರೆಸ್‌ನ ಉದ್ದೇಶವಾಗಿದ್ದು, ಯಾರ ಹೆಸರನ್ನೂ ಅನ್ಯಾಯವಾಗಿ ತೆಗೆದುಹಾಕುವ ಪ್ರಶ್ನೆಯೇ ಇಲ್ಲ. ಬಿಜೆಪಿ ನಾಯಕರು ಸತ್ಯಾಂಶಗಳಿಗಿಂತ ಸುಳ್ಳು ಆರೋಪಗಳ ಮೂಲಕ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ದಿವಾಳಿಯಾಗುತ್ತದೆ ಎಂದು ಟೀಕಿಸಿದ್ದ ಬಿಜೆಪಿ ನಾಯಕರು ಈಗ ತಮ್ಮ ಆಡಳಿತದ ರಾಜ್ಯಗಳಲ್ಲೇ ಇದೇ ಮಾದರಿಯ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಮುಂದಿನ ಒಂದು ತಿಂಗಳ ಕಾಲ ಕಾರ್ಯಕರ್ತರು ಪ್ರತಿದಿನ ಕನಿಷ್ಠ ಎರಡು ಗಂಟೆಗಳ ಕಾಲ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಮೀಸಲಿಟ್ಟು, ಹೊಸ ಮತದಾರರ ಸೇರ್ಪಡೆ, ತಿದ್ದುಪಡಿ ಹಾಗೂ ಮರಣ ಹೊಂದಿದ ಅಥವಾ ವಲಸೆ ಹೋದ ಮತದಾರರ ಹೆಸರುಗಳ ತೆರವು ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು. 18 ವರ್ಷ ಪೂರೈಸಿದ ಪ್ರತಿಯೊಬ್ಬ ಯುವಕ-ಯುವತಿಯ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವಂತೆ ಕರೆ ನೀಡಿದ ಅವರು, ಬಿಎಲ್‌ಒ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇ.ಎಚ್. ಲಕ್ಷ್ಮಣ್, ಪಟೇಲ್ ಶಿವಪ್ಪ, ಬಸವರಾಜು, ಶಶಿಧರ್, ತಾಲೂಕು ಅಧ್ಯಕ್ಷ ಎಂ.ಜೆ. ನಿಶಾಂತ್, ಪುರಸಭೆ ಅಧ್ಯಕ್ಷ ಅಕ್ರಂ ಶರೀಫ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸೈಯದ್ ತೌಫಿಕ್, ಗ್ರಾನೈಟ್ ರಾಜಶೇಖರ್, ಬಿ.ಎಂ. ಸಂತೋಷ್, ಸೌಮ್ಯ ಆನಂದ್ ಸೇರಿದಂತೆ ಪಕ್ಷದ ಮುಖಂಡರು, ಬೂತ್ ಮಟ್ಟದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

----- ಹೇಳಿಕೆ ಮತದಾರರ ಪಟ್ಟಿ ರಕ್ಷಣೆ ಮತ್ತು ಪರಿಷ್ಕರಣೆ ಕಾರ್ಯ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನ ಪ್ರಮುಖ ಜವಾಬ್ದಾರಿಯಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ 280ಕ್ಕೂ ಹೆಚ್ಚು ಬೂತ್‌ಗಳ ಪೈಕಿ 258 ಬೂತ್‌ಗಳಿಗೆ ಬಿಎಲ್‌ಎ-2 ಕಾರ್ಯಕರ್ತರನ್ನು ನೇಮಕ ಮಾಡಲಾಗಿದ್ದು, ಈ ಪ್ರಕ್ರಿಯೆಯಲ್ಲಿ ಬೇಲೂರು ಕ್ಷೇತ್ರ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ.


ಶ್ರೇಯಸ್‌ ಪಟೇಲ್‌, ಸಂಸದ----------ಶೇ.95ಕ್ಕೂ ಹೆಚ್ಚು ಬಿಎಲ್‌ಎ ನೇಮಕ: ಶಿವರಾಂಮಾಜಿ ಸಚಿವ ಬಿ. ಶಿವರಾಂ ಮಾತನಾಡಿ, ಕ್ಷೇತ್ರದಲ್ಲಿ ಶೇ.95ಕ್ಕೂ ಹೆಚ್ಚು ಬಿಎಲ್‌ಎಗಳನ್ನು ನೇಮಕ ಮಾಡಲಾಗಿದ್ದು, ಎಲ್ಲರಿಗೂ ಮತದಾರರ ಪಟ್ಟಿಗಳನ್ನು ವಿತರಿಸಲಾಗಿದೆ. ಶೀಘ್ರದಲ್ಲೇ ಬಿಎಲ್‌ಎಗಳಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಗುವುದು.ಪಟ್ಟಣದ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಪಟೇಲ್ ಶಿವಪ್ಪ ಅವರು ಧನಸಹಾಯ ಹಾಗೂ ಅನುದಾನ ನೀಡುವುದಾಗಿ ಅಧಿಕೃತವಾಗಿ ಘೋಷಿಸಿರುವುದನ್ನು ಸ್ವಾಗತಿಸಿದ ಶಿವರಾಂ, ಕ್ಷೇತ್ರದ ಅಭಿವೃದ್ಧಿ ಹಾಗೂ ಪಕ್ಷದ ಸಂಘಟನೆಗೆ ಅವರ ಕೊಡುಗೆ ಮಹತ್ವದ್ದಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಯಶಸ್ವಿಗೊಳಿಸುವ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕೆಂದು ಕರೆ ನೀಡಿದರು.