ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಗರದ ತಣ್ಣೀರುಹಳ್ಳದ ಬಳಿ ನಗರಸಭೆ ವತಿಯಿಂದ ನಡೆದ ಒತ್ತುವರಿ ತೆರವು ಖಂಡಿಸಿ ಶಾಸಕ ಸ್ವರೂಪ್ ರಸ್ತೆ ಮಧ್ಯೆ ಧರಣಿ ಕೂತ ಸ್ಥಳಕ್ಕೆ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಭೇಟಿ ನೀಡಿ ನಗರಸಭೆ ಆಯುಕ್ತರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ನಗರಸಭೆ ವತಿಯಿಂದ ಬುಧವಾರ ಬೆಳ್ಳಂಬೆಳಗ್ಗೆ ಅಕ್ರಮ ಕಟ್ಟಡಗಳು ಹಾಗೂ ಒತ್ತುವರಿ ವಿರುದ್ಧ ನಗರಸಭೆ ಆಯುಕ್ತರು ತೆರವು ಕಾರ್ಯಾಚರಣೆ ನಡೆಸಿದ್ದರು. ಆದರೆ ಈ ಮೊದಲೇ ಯಾವುದೇ ನೋಟಿಸ್ ನೀಡದೆ ಕಾರ್ಯಾಚರಣೆ ನಡೆಸಿದ ಹಿನ್ನೆಲೆಯಲ್ಲಿ ಸ್ಥಳೀಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಲ್ಲದೇ ಸ್ಥಳೀಯ ಶಾಸಕರು ಹಾಗೂ ನಗರಸಭೆ ಅಧ್ಯಕ್ಷರ ಗಮನಕ್ಕೂ ತಾರದೆ ತೆರವು ಕಾರ್ಯಾಚರಣೆ ನಡೆಸಿರುವುದಕ್ಕೆ ಶಾಸಕ ಸ್ವರೂಪ ರಸ್ತೆ ಮಧ್ಯೆ ಧರಣಿ ಕೂತು ನಗರಸಭೆ ಆಯುಕ್ತರು ಕೂಡಲೇ ಸ್ಥಳಕ್ಕೆ ಆಗಮಿಸಿ, ಉತ್ತರ ನೀಡುವಂತೆ ತಾಕೀತು ಮಾಡಿದರು. ಸ್ಥಳಕ್ಕೆ ಬರೆದಿದ್ದರೆ ನಗರಸಭೆ ಮುಂದೆಯೇ ಅನಿರ್ದಿಷ್ವಧಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು. ಬಳಿಕ ಮಾಜಿ ಸಚಿವ ಎಚ್‌ಡಿ ರೇವಣ್ಣ ಆಗಮಿಸಿ ಪ್ರತಿಭಟನಾಕಾರರ ಸಮಸ್ಯೆ ಆಲಿಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಯಾವುದೇ ಮುನ್ಸೂಚನೆ ಅಥವಾ ನೋಟಿಸ್ ನೀಡದೆ ನಗರಸಭೆ ಅಧಿಕಾರಿಗಳು ಮಾಡಿರುವ ಕೆಲಸ ಖಂಡನೀಯ ಎಂದರು.ಬಡ ಬೀದಿ ವ್ಯಾಪಾರಿಗಳ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡಿರುವ ನಗರಸಭೆ ಆಯುಕ್ತರನ್ನು ಕೂಡಲೇ ಅಮಾನತು ಮಾಡಿ ಕ್ರಮ ಕೈಗೊಳಬೇಕು. ಒಬ್ಬ ಶಾಸಕ ಕರೆದಾಗ ಬಾರದೆ ಇರುವ ಆಯುಕ್ತ ಯಾವ ಮಟ್ಟಕ್ಕೆ ಇದ್ದಾರೆ ಎಂಬುದನ್ನು ಯೋಚಿಸಬೇಕು. ಈಗಾಗಲೇ ಅಪರ ಜಿಲ್ಲಾಧಿಕಾರಿ.ಜೊತೆ ಚರ್ಚೆ ಮಾಡಿದ್ದೇನೆ. ಶೀಘ್ರವಾಗಿ ಈ ಬಗ್ಗೆ ಸಭೆ ನಡೆಸಿ ಅನ್ಯಾಯ ಆಗಿರುವವರಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.