ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಹಾಸನ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಸತತ ಏಳನೇ ಬಾರಿಗೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಪುನರ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.ನಗರದ ಹಾಮೂಲ್ ಸಭಾಂಗಣದಲ್ಲಿ ಮಂಗಳವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಆಡಳಿತ ಮಂಡಳಿ ನಿರ್ದೇಶಕರ ಸಭೆಯಲ್ಲಿ ಎಲ್ಲರೂ ಮತ್ತೆ ರೇವಣ್ಣರವರನ್ನೇ ಆಯ್ಕೆ ಮಾಡಲು ಒಪ್ಪಿಗೆ ನೀಡಿದರು. ೧೯೮೫ ರಲ್ಲಿ ನಿರ್ದೇಶಕರಾಗಿ, ೧೯೯೪ ರಿಂದ ಸತತವಾಗಿ ಅಧ್ಯಕ್ಷರಾಗಿ ಆಯ್ಕೆ ಆಗುತ್ತಿರುವ ಎಚ್.ಡಿ.ರೇವಣ್ಣ, ೨೦೨೪ ರಿಂದ ೨೦೨೯ ರವರೆಗೆ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಹದಿನಾಲ್ಕು ಮಂದಿ ನಿರ್ದೇಶಕರ ಸ್ಥಾನಕ್ಕೆ ಈಚೆಗೆ ಚುನಾವಣೆ ನಡೆದಿತ್ತು. ಎಲ್ಲ ಸ್ಥಾನಗಳಿಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಡಿ.ರೇವಣ್ಣ ಅವರ ಹೆಸರು ಸೂಚಿಸಿದಾಗ ಎಲ್ಲರೂ ಬೆಂಬಲ ವ್ಯಕ್ತಪಡಿಸಿ ಅವಿರೋಧವಾಗಿ ಆಯ್ಕೆ ಮಾಡಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಹಾಮೂಲ್ ಅಧ್ಯಕ್ಷ ಎಚ್.ಡಿ. ರೇವಣ್ಣರವರು, ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಹಾಯದಿಂದ ನಡೆದ ಡೈರಿ ಚುನಾವಣೆಯ ಅಧ್ಯಕ್ಷ ಸ್ಥಾನ ಅವಿರೋಧವಾಗಿ ಆಯ್ಕೆ ಆಗಿದೆ. ಮಾರ್ಚ್ ೮ ರಂದು ಅಧ್ಯಕ್ಷರ ಚುನಾವಣೆಯನ್ನು ಮಂಗಳವಾರ ನಿಗಧಿ ಮಾಡಿದ್ದು, ಡೈರಿಗೆ ೧೪ ಜನ ನಿರ್ದೇಶಕರು ಪಾಲ್ಗೊಂಡು ನನ್ನನ್ನು ಮತ್ತೆ ೨೦೨೪ ರಿಂದ ೨೦೨೯ರವರೆಗೂ ೫ ವರ್ಷದ ಅವಧಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ನಾನು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ಡೈರಿ ಅಭಿವೃದ್ಧಿಗೆ ಇಷ್ಟು ದಿವಸ ಸಹಕಾರ ಕೊಟ್ಟಂತಹ ಎಲ್ಲಾ ಹಳೆ ನಿರ್ದೇಶಕರು ಪ್ರಸ್ತುತ ನೂತನ ಅಧ್ಯಕ್ಷರಿಗೆ ಮತ್ತೊಮ್ಮೆ ಧನ್ಯವಾದ ತಿಳಿಸುತ್ತೇನೆ. ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಹಾಸನ, ಚಿಕ್ಕಮಗಳೂರು, ಕೊಡಗು ಸೇರಿ ಮೂರು ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಸಂಘಗಳ ಸದಸ್ಯರು, ಅಧ್ಯಕ್ಷರು, ಕಾರ್ಯದರ್ಶಿಗಳೆಲ್ಲರೂ ಸೇರಿ ಈ ಸಂಸ್ಥೆಯನ್ನು ಬೆಳೆಸಬೇಕು. ಆಡಳಿತ ಮಂಡಳಿಯು ಯಾವುದೇ ಚುನಾವಣೆಯಿಲ್ಲದೇ, ವೆಚ್ಚ ಭರಿಸಲು ಅವಕಾಶ ಮಾಡಿಕೊಡದೇ ಈ ಸಂಸ್ಥೆಯನ್ನು ಇಷ್ಟು ಎತ್ತರಕ್ಕೆ ಕೊಂಡೂಯ್ಯಲು ಎಲ್ಲರ ಸಹಕಾರವಿದೆ ಎಂದು ಹೇಳಿದರು.
ರಾಜ್ಯದಲ್ಲಿ ಹಾಸನ ಹಾಲು ಒಕ್ಕೂಟ ಎರಡನೇ ಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲಿ ಮೊದಲ ಸ್ಥಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶೀಘ್ರವೇ ಮೆಗಾ ಡೇರಿ ಕಾರ್ಯಾರಂಭ ಮಾಡಲಿದೆ ಎಂದರು.ಇದೆ ವೇಳೆ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ, ಜಿಲ್ಲಾ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಭವಾನಿ ರೇವಣ್ಣ, ನಿರ್ದೇಶಕರಾದ ಹೊನ್ನವಳ್ಳಿ ಸತೀಶ್, ನಾರಾಯಣಗೌಡ, ಸ್ವಾಮಿಗೌಡ, ಹಾಲು ಒಕ್ಕೂಟದ ನೂತನ ನಿರ್ದೇಶಕರು ಹಾಗೂ ಇತರರು ಉಪಸ್ಥಿತರಿದ್ದರು.