ಲಿಂಕ್ ಕೆನಾಲ್ ಮೂಲಕ ನೀರನ್ನು ತೆಗೆದುಕೊಂಡು ಹೋಗುತ್ತಿದ್ದು ಆ ನೀರನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ ಎಂಬುದನ್ನು ಸಾರ್ವಜನಿಕರಿಗೆ ಬಹರಂಗಪಡಿಸಿ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರಿಗೆ ಸವಾಲು ಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ ಡಿಸಿಎಂ ಡಿ.ಕೆ. ಶಿವಕುಮಾರ್ ತಾವು ಹಾಗೂ ತಮ್ಮ ಸರ್ಕಾರ ರಾಜ್ಯದಲ್ಲಿ ಏನು ಅಭಿವೃದ್ಧಿ ಮಾಡಿದ್ದೀರಿ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಿ. ಲಿಂಕ್ ಕೆನಾಲ್ ಮೂಲಕ ನೀರನ್ನು ತೆಗೆದುಕೊಂಡು ಹೋಗುತ್ತಿದ್ದು ಆ ನೀರನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ ಎಂಬುದನ್ನು ಸಾರ್ವಜನಿಕರಿಗೆ ಬಹರಂಗಪಡಿಸಿ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರಿಗೆ ಸವಾಲು ಹಾಕಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು ಡಿ.ಕೆ.ಶಿವಕುಮಾರ್ ರವರು ಕುಣಿಗಲ್ ಹಬ್ಬದ ಕಾರ್ಯಕ್ರಮವೊಂದರಲ್ಲಿ ಕುಣಿಗಲ್ ಗೆ ನೀರು ಹರಿಸಲು ಎಂ.ಟಿ.ಕೃಷ್ಣಪ್ಪ ಮತ್ತು ಸುರೇಶ್ ಗೌಡ ತೊಡರುಗಾಲು ಹಾಕುತ್ತಿದ್ದಾರೆಂದು ದೂರಿದ್ದಾರೆ. ಇದು ಸರಿಯಲ್ಲ. ನಾವು ಜಿಲ್ಲೆಯ ರೈತರ ಹಿತ ಕಾಪಾಡಲು ಕಟಿಬದ್ದರಾಗಿದ್ದೇವೆ. ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಜನ ವಿರೋಧಿ, ರೈತ ವಿರೋಧಿ ಸರ್ಕಾರವಾಗಿದೆ. ಕುಣಿಗಲ್ ಗೆ ನೀರು ತೆಗೆದುಕೊಂಡು ಹೋಗುತ್ತಿರುವುದಾಗಿ ಡಿ.ಕೆ.ಶಿವಕುಮಾರ್ ಹೇಳುತ್ತಿರುವುದು ಶುದ್ಧ ಸುಳ್ಳು. ಈಗಾಗಲೇ ಕುಣಿಗಲ್ ಗೆ ಸುಮಾರು 6.5 ಟಿಎಂಸಿ ನೀರು ಹರಿದಿದೆ. ಅಲ್ಲಿಗೆ ಬೇಕಿರುವುದು ಕೇವಲ 3 ಟಿಎಂಸಿ ನೀರು ಮಾತ್ರ. ಇನ್ನುಳಿದ ನೀರನ್ನು ಎಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂಬುದನ್ನು ಡಿ.ಕೆ.ಶಿವಕುಮಾರ್ ರವರು ಬಹಿರಂಗಪಡಿಸಬೇಕೆಂದು ಆಗ್ರಹಿಸಿದರು. ಕೆನಾಲ್ ನಿರ್ಮಾಣಕ್ಕೆ ಸಾವಿರ ಕೋಟಿ ರುಗಳನ್ನು ವಿನಿಯೋಗಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಇದು ಯಾರ ಉದ್ದಾರಕ್ಕೆ. ನಾವು ಜಿಲ್ಲೆಯ 24 ಲಕ್ಷ ಜನರ ಹಿತ ಬಲಿ ಕೊಡಲು ತಯಾರಿಲ್ಲ. ನಮಗೆ ಜಿಲ್ಲೆಯ ರೈತರ ಹಿತವೇ ಮುಖ್ಯ. ಇದು ರಾಜಕೀಯದ ಪ್ರಶ್ನೆಯಲ್ಲ. ರೈತರ, ಜನರ ಪ್ರಶ್ನೆ. ನಾವು ನಿಮ್ಮ ರಾಜಕೀಯದ ತೆವಲಿಗೆ ಜಿಲ್ಲೆಯ ರೈತರ ಹಿತ ಬಲಿಕೊಡಲು ತಯಾರಿಲ್ಲ ಎಂದು ಎಂ.ಟಿ.ಕೃಷ್ಣಪ್ಪ ಗುಡುಗಿದರು. ಡಿ.ಕೆ.ಶಿವಕುಮಾರ್, ಕುಣಿಗಲ್ ನ ಹುಚ್ಚಮಾಸ್ತಿಗೌಡ ಮತ್ತು ವೈ.ಕೆ.ರಾಮಯ್ಯನವರ ಹೋರಾಟದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದು ವಿಷಾದನೀಯ. ಈರ್ವರ ಹೆಸರನ್ನು ಎತ್ತಲು ಡಿ.ಕೆ ಗೆ ನೈತಿಕತೆ ಇಲ್ಲ. ಈ ಲಿಂಕ್ ಕೆನಾಲ್ ಮಾಡುತ್ತಿರುವುದು ಜನರ ಹಿತಕ್ಕಾಗಿ ಅಲ್ಲ. ಅವರ ಸ್ವಾರ್ಥಕ್ಕಾಗಿ ಎಂದರು. ಎಚ್.ಡಿ.ಕುಮಾರಸ್ವಾಮಿಯವರನ್ನು ಚಪಲ ಚನ್ನಿಗರಾಯ ಎಂದು ಸಂಭೋಧಿಸಿರುವುದು ಡಿ.ಕೆ.ಶಿವಕುಮಾರ್ ನ ಸಣ್ಣತನ ತೋರಿಸುತ್ತದೆ. ಎಚ್.ಡಿ.ಕೆ. ಸಿಎಂ ಆಗಿದ್ದ ವೇಳೆ ರೈತರ ಹಿತ ಕಾಪಾಡಲು 25 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಿದರು. ಬೆಂಗಳೂರಿನ ಸಂಚಾರ ಜನ ದಟ್ಟಣೆಯನ್ನು ತಪ್ಪಿಸಲು ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಿದರು. ಎಚ್.ಡಿ. ದೇವೇಗೌಡರು ನೈಸ್ ರಸ್ತೆ ಮಾಡಿದರು. ನೀವೇನು ಮಾಡಿದ್ದೀರಿ ಹೇಳ್ರಪ್ಪಾ ಎಂದು ಎಂ.ಟಿ.ಕೃಷ್ಣಪ್ಪ ಕೇಳಿದರು. ಡಿ.ಕೆ.ಶಿವಕುಮಾರ್ ಕೂಡಲೇ ಲಿಂಕ್ ಕೆನಾಲ್ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು. ಅಲ್ಲಿಯ ತನಕ ನನ್ನ ಹೋರಾಟ ನಿರಂತರ. ಅವರ ಗೊಡ್ಡು ಬೆದರಿಕೆಗೆ ಜಗ್ಗುವ ಜಾಯಮಾನ ನನ್ನದಲ್ಲ. ಇಂತಹ ಬೆದರಿಕೆಗಳಿಗೆ ಸೊಪ್ಪು ಹಾಕುವ ಮನುಷ್ಯ ನಾನಲ್ಲ ಎಂದು ಖಡಾಖಂಡಿತವಾಗಿ ಹೇಳಿದರು. ಈ ಸಂದರ್ಭದಲ್ಲಿ ಪಕ್ಷದ ವಕ್ತಾರ ವೆಂಕಟಾಪುರ ಯೋಗೀಶ್, ಜೆ ಡಿಎಸ್ ಮುಖಂಡ ತ್ಯಾಗರಾಜು ಇದ್ದರು.