ಅಂತರಂಗದ ಭಾವನೆಗಳನ್ನು ಅನಾವರಣ ಮಾಡಿ: ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀ

| Published : Sep 08 2025, 01:00 AM IST

ಅಂತರಂಗದ ಭಾವನೆಗಳನ್ನು ಅನಾವರಣ ಮಾಡಿ: ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಅಂತರಂಗದ ಭಾವನೆಗಳನ್ನ ಅನಾವರಣ ಮಾಡಬೇಕು. ಮಾತುಬಲ್ಲವರು ವ್ಯಕ್ತಿತ್ವ ಸೋಲುವಂತೆ ಆಡಬೇಕು ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಅಂತರಂಗದ ಭಾವನೆಗಳನ್ನ ಅನಾವರಣ ಮಾಡಬೇಕು. ಮಾತುಬಲ್ಲವರು ವ್ಯಕ್ತಿತ್ವ ಸೋಲುವಂತೆ ಆಡಬೇಕು ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.

ಅವರು ಶಿವಮೊಗ್ಗ ತಾಲೂಕಿನ ಹೊಸ ಮಡಿಕೆ ಚೀಲೂರುನಲ್ಲಿ ಆಯೋಜಿಸಿದ್ದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾ ಸ್ವಾಮಿಗಳ 33ನೇ ಶ್ರದ್ದಾಂಜಲಿ ಹಾಗೂ ಭಕ್ತಿ ಸಮರ್ಪಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದಿದ್ದು, ಹಿರಿಯ ಶ್ರೀಗಳು. ಸ್ವಾತಂತ್ರ್ಯ ಪೂರ್ವದಲ್ಲಿ ಸಮುದಾಯಗಳ ಹೊಂದಾಣಿಕೆಯ ಸಹ ಪಂಕ್ತಿಯ ಬೋಜನ ನಡೆಸಿದ ಕೀರ್ತಿ ತರಳಬಾಳು ಮಠಕ್ಕೆ ಸಲ್ಲುತ್ತದೆ. ಸಮಾಜದಲ್ಲಿ ಜಾತಿ ವೈಶಮ್ಯ ಬೆಳೆಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಸಮಾಜದಲ್ಲಿ ಶತಮಾನಗಳಿಂದ ಜಾತಿ ಸಂಘರ್ಷಗಳು ನಡೆಯುತ್ತಿವೆ. ದೇಶ ವಿದೇಶದಲ್ಲಿ ಮಠದ ವಿದ್ಯಾರ್ಥಿಗಳು ಸಿಗುವುದು ಆಶಾದಾಯಕ ಬೆಳವಣಿಗೆ. ಗಣಕ ವಚನ ಸಂಪುಟ ಪ್ರತಿಯೊಬ್ಬರಿಗೂ ತಲುಪಬೇಕು ಎಂದರು.

ಸಾಮಾಜಿಕ ಜಾಲತಾಣದ ಬೆರಳತುದಿಯಲ್ಲಿ ವಚನಗಳು ಲಭ್ಯವಿರುವಂತೆ ಮಾಡಲಾಗಿದೆ. ಮಕ್ಕಳಿಗೆ ವಚನಗಳ ಅರಿವಿರುವಂತೆ ಮಾಡಬೇಕು. ಜಗತ್ತಿನ ಹತ್ತು ಹಲವು ಭಾಷೆಗಳಲ್ಲಿ ಸಿಗುವಂತೆ ಮಾಡಲಾಗಿದೆ. ಆಂಗ್ಲ ಮಾದ್ಯಮ ವ್ಯಾಮೋಹಕ್ಕೆ ಒಳಗಾಗಿ ಮಾತೃಭಾಷೆಯನ್ನು ಮರೆಯಬಾರದು. ಭಾಷಣಗಳಿಂದ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಿಲ್ಲ. ಕೌಟುಂಬಿಕ ಸಂಬಂಧಗಳು ವಿಫಲವಾಗುತ್ತಿವೆ. ಎಲ್ಲ ವೇಳೆಯಲ್ಲೂ ಹಣವೇ ಮುಖ್ಯವಲ್ಲ ಎಂದರು.

ಅಮವಾಸ್ಯೆ ಹಾಗೂ ಮಂಗಳವಾರದಂದು ವಿವಾಹವಾದರೆ ಮಕ್ಕಳು ಕಪ್ಪಾಗುವುದಿಲ್ಲ. ಮನಸಿನಲ್ಲಿನ ಕುರುಡು ನಂಬಿಕೆಗಳನ್ನು ಆದಷ್ಟು ಕೈಬಿಡಬೇಕು. ಮೌಡ್ಯಕ್ಕೆ ಬಲಿಯಾಗಿ ಸಂಸಾರಗಳು ಅವನತಿಗೆ ಸರಿಯಬಾರದು. ಶಿವ ಪಾರ್ವತಿ ದೇವಸ್ಥಾನಗಳು ಬೇರೆ ಬೇರೆಯಾಗಿರುವಂತೆ ದೇವಸ್ಥಾನ ನಿರ್ಮಿಸಿದರೆ ಸತಿ ಪತಿಗಳ ಕಥೆ ಏನಾಗಬೇಡ. ಆಧ್ಯಾತ್ಮಿಕ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರಪಂಚವೆಂಬ ದನದ ಕೊಟ್ಟಿಗೆಯಲ್ಲಿ ಭಗವಂತ ಸಂಸಾರ ಎಂಬ ಹಗ್ಗದಿಂದ ಕಟ್ಟಿಹಾಕಿದ್ದಾನೆ‌ ಎಂದರು.

ಮೇಲು ಕೀಳೆಂಬ ಭಾವನೆಗಳನ್ನು ಸಾದ್ಯವಾದಷ್ಟು ತೊಡೆದುಹಾಕಬೇಕು. ಮತೀಯ ಭಾವನೆಗಳು ದಮನವಾಗಿ ಸರ್ವ ಜನಾಂಗಗಳು ಒಗ್ಗಟಿನ ಮಂತ್ರ ಸಾಧಿಸಬೇಕು ಮನೆ ಸರಿಯಾದರೆ ಸಾಲದು ಜನರ ಮನಸ್ಸುಗಳು ಸರಿಯಾಗಬೇಕಿದೆ ಎಂದರು.

ಸಾದು ಸಧರ್ಮ ಸಮಾಜದ ರಾಜ್ಯಾಧ್ಯಕ್ಷ ಹೆಚ್.ಅರ್ ಬಸವರಾಜಪ್ಪ, ಗ್ರಾಮಾಂತರದ ಶಾಲೆ ತೆರೆದು ಅಕ್ಷರ ದಾಸೋಹ ನೀಡಿದ ಕೀರ್ತಿ ಸಿರಿಗೆರೆ ಶ್ರೀಗಳಿಗೆ ಸಲ್ಲುತ್ತದೆ. ಜಾತ್ಯತೀತವಾಗಿ ಸಮಾಜದ ಪ್ರತಿಯೊಬ್ಬರಿಗೂ ಸಹಬಾಳ್ವೆ ಕಲಿಸಿದವರು. ನೀರಾವರಿ ವಿಚಾರದಲ್ಲಿ ಬಯಲು ಸೀಮೆಯನ್ನು ಮಲೆನಾಡು ಮಾಡಿದ್ದಾರೆ. ಸರ್ಕಾರದಿಂದ ಬಿಡಿಗಾಸು ಪಡೆಯದ ಮಠವಾಗಿ ಜನಮನ್ನಣೆ ಗಳಿಸಿದೆ. ಯಶಸ್ವಿನಿ ಆರೋಗ್ಯ ಯೋಜನೆ ರೈತರ ಪಾಲಿನ ಸಂಜೀವಿನಿ. ಪ್ರಧಾನ ಮಂತ್ರಿ ಫಸಲ್ ಬೀಮ್ ಯೋಜನೆಯಲ್ಲಿ ಹತ್ತಾರು ನ್ಯೂನ್ಯತೆಗಳಿವೆ. ಶಿವ ಶರಣರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿವಮೊಗ್ಗದಲ್ಲಿ 12 ಕೋಟಿ ವೆಚ್ಚದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗುತ್ತಿದೆ. ಹನಸವಾಡಿ ಶಾಲೆ ಜೀರ್ಣೋದ್ದಾರ ಮಾಡಲಾಗಿದೆ. ಸೂಗೂರಿನಲ್ಲಿ ಪಾಳು ಬಿದ್ದ ಕಲ್ಯಾಣ ಮಂಟಪ ಅಬಿವೃದ್ಧಿಯಾಗಿದೆ. ಹರಮಘಟ್ಟದಲ್ಲಿ ನರ್ಸರಿ ಶಾಲೆ ಆರಂಭಿಸಲಾಗಿದೆ ಎಂದರು.

ರಾಜ್ಯದಾದ್ಯಂತ ಇರುವ 361 ಶಾಲಾ ಕಾಲೇಜುಗಳ ಕಟ್ಟಡಗಳು ನವೀಕರಣಗೊಳ್ಳುತ್ತಿವೆ. ಕೈಮರದಲ್ಲಿ 3 ಕೋಟಿಗೆ 3 ಎಕರೆ ಜಮೀನು ಖರೀದಿಸಲಾಗಿದ್ದು, ಸಮಾಜದ ಉದ್ದಾರಕ್ಕೆ ಬಳಸಿಕೊಳ್ಳಲಾಗುತ್ತದೆ. ಪ್ರಮಾಣಿಕವಾಗಿ ರೈತ ಸಂಘಟನೆಗೆ ಮುಂದಾಗಬೇಕಿದೆ. ಸಾಲಕ್ಕೆ ರೈತರು ಜೀವ ಕಳೆದುಕೊಳ್ಳಬಾರದು. ರೈತರು ದೇಶದ ಮಾಲೀಕರು ಎನ್ನುವುದು ಸರ್ವ ಕಾಲಿಕ ಸತ್ಯ ಎಂದರು.

ಪರಿಷತ್ ಸದಸ್ಯ ಧನಂಜಯ್ ಸರ್ಜಿ, ಶಿವ ಪತವ ಅರಿತು ನಡೆಯಬೇಕು. ಅನ್ನ ಹಂಚಿದರೆ ಧನ ಪ್ರಾಪ್ತಿಯಾಗುತ್ತದೆ. ಸಂಸ್ಕಾರ ಸಂಸ್ಕೃತಿ ಬಹುಮುಖ್ಯ. ದೇಶದ ಸಂಸ್ಕೃತಿ ನಾಶವಾದರೆ ನಾಡುಗಳು ನಶಿಸಿಹೋಗುತ್ತವೆ. ಮಕ್ಕಳಿಗೆ ಅಕ್ಷರಾಭ್ಯಾಸದೊಂದಿಗೆ ಸಂಸ್ಕಾರ ಕಲಿಸುವುದನ್ನು ಮರೆಯುವಂತಿಲ್ಲ. ಗುರುಗಳ ಜೋಳಿಗೆ ತುಂಬಿದರೆ ಭಕ್ತಾದಿಗಳ ಹೊಟ್ಟೆ ತುಂಬುತ್ತವೆ. ಸಾರ್ಥಕತೆ ಇಲ್ಲದ ಜೀವನ ಬದುಕಬಾರದು. ಬದುಕಿನ ಸವಿಯನ್ನು ಸಂಭ್ರಮವಾಗಿಸಿಕೊಳ್ಳಬೇಕು ಎಂದರು.

ಸಮಾಜದ ಶಿವಮೊಗ್ಗ ಗ್ರಾಮಾಂತರ ಅಧ್ಯಕ್ಷ ಷಣ್ಮುಖಪ್ಪ, ಕುವೆಂಪು ವಿವಿ ಉಪ ಕುಲಪತಿಗಳು ಆರ್.ಸಿ ಜಗದೀಶ್, ಕೆ.ಸಿ ಸತೀಶ್ ಕಶೇಟ್ಟಿ, ಹೆಚ್ . ಪರಮೇಶ್ವರಪ್ಪ, ಇಸ್ರೇಲ್ ದೇಶದ ಡಾ ಗೀಲ್ , ಶಿವರಾಜ್, ಕಲ್ಯಾಣಪ್ಪ, ತೀರ್ಥಪ್ಪ, ಛಾಯಪ್ಪಗೌಡ, ಹೊಳಲೂರು ಸಂತೋಷ್, ಮಂಗೋಟೆ ರುದ್ರೇಶ್, ಹೆಚ್.ಜಿ ಮಲ್ಲಯ್ಯ, ನಾಗೇಂದ್ರಮ್ಮ ಇತರರಿದ್ದರು.

ಆದರ್ಶ ಕಣ್ಣಿನ ಆಸ್ಪತ್ರೆಯಿಂದ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಗ್ರಾಮದ ಮುತ್ತೈದೆಯರು ಪೂರ್ಣ ಕುಂಬ ಸ್ವಾಗತ ಮಾಡಿದರು. ತರಬಾಳು ಶ್ರೀಗಳು ಅಕ್ಕಿ ತುಂಬಿದ ಲಾರಿಗೆ ಚಾಲನೆ ನೀಡಿದರು.