ಬಿಜೆಪಿಯಿಂದ ಸೇಡು, ಸುಳ್ಳು ರಾಜಕಾರಣ: ಉಗ್ರಪ್ಪ

| Published : Aug 01 2024, 12:32 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ನುಡಿದಂತೆ ನಡೆಯುವ ಸರ್ಕಾರವಾಗಿದೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ತಿಳಿಸಿದರು.

ಶಿರಸಿ: ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿಯವರು ಮೌಲ್ಯ ಬಿಟ್ಟು ಸೇಡು, ಸುಳ್ಳು ರಾಜಕಾರಣ ಮಾಡುತ್ತಿದ್ದಾರೆ. ಅವರಿಂದ ಪ್ರಜಾಪ್ರಭುತ್ವದ ವ್ಯವಸ್ಥೆ, ಸಂವಿಧಾನ, ಸಾಮರಸ್ಯಕ್ಕೆ, ದೇಶ ಭದ್ರತೆ ಜತೆಗೆ ಜನಸಾಮಾನ್ಯರ ಬದುಕಿಗೆ ಧಕ್ಕೆಯಾಗುತ್ತಿದೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ವಾಗ್ದಾಳಿ ನಡೆಸಿದರು.

ಬಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸಕ್ತ ಸಾಲಿನ ಲೋಕಸಭಾ ಚುನಾವಣೆಯು ದೇಶದ ಅಭಿವೃದ್ಧಿ ದೃಷ್ಟಿಯಿಂದ ಮಹತ್ತರವಾಗಿತ್ತು. ಕೇಂದ್ರ ಸರ್ಕಾರ ವೈಫಲ್ಯಗಳಿದ್ದರೂ ೪೦೦ ಸ್ಥಾನ ಗೆಲ್ಲುತ್ತೇವೆ ಎಂದು ನರೇಂದ್ರ ಮೋದಿ ಬಿಂಬಿಸಿದ್ದರು. ಕೇಂದ್ರ ಸರ್ಕಾರದ ವೈಫಲ್ಯಗಳು ಮತ್ತು ಇಂಡಿಯಾ ಒಕ್ಕೂಟದಿಂದ ೩೦೦ಕ್ಕಿಂತ ಅಧಿಕ ಸ್ಥಾನ ಗೆಲ್ಲುವ ನಿರೀಕ್ಷೆಯಿತ್ತು. ಜನರು ನೀಡಿದ ತೀರ್ಮಾನಕ್ಕೆ ತಲೆಬಾಗಬೇಕಾಗುತ್ತದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ನುಡಿದಂತೆ ನಡೆಯುವ ಸರ್ಕಾರವಾಗಿದೆ. ಚುನಾವಣಾ ಸಂದರ್ಭದಲ್ಲಿ ನೀಡಿದ ವಾಗ್ದಾನಕ್ಕೆ ₹೫೮ ಸಾವಿರ ಕೋಟಿ ಪ್ರತಿವರ್ಷ ವೆಚ್ಚ ಮಾಡಿ, ೫ ಗ್ಯಾರಂಟಿಯಿಂದ ೧ರಿಂದ ೨೦ ಸ್ಥಾನ ಗೆಲ್ಲುತ್ತೇವೆ ಎಂದು ಬಯಸಿದ್ದೇವು. ಯಡಿಯೂರಪ್ಪ ೨೮ಕ್ಕೆ ೨೮ ಗೆಲ್ಲುತ್ತೇವೆ ಎಂದು ಜನರ ಮುಂದೆ ಹೇಳಿಕೊಂಡು ತಿರುಗಿದ್ದರು. ೧ರಿಂದ ೮ ಸ್ಥಾನಕ್ಕೆ ಪಡೆದುಕೊಂಡೆವು. ಬಿಜೆಪಿಯವರು ೨೯ ಸ್ಥಾನದಿಂದ ೧೮ ಸ್ಥಾನಕ್ಕೆ ಇಳಿದರು. ಜನರ ತೀರ್ಪು ರಾಷ್ಟ್ರ ಮತ್ತು ರಾಜ್ಯದಲ್ಲಿ ಹುಸಿ ಮಾಡಿದೆ ಎಂದರು

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ದೇಶದಲ್ಲಿ ₹೫೨ ಲಕ್ಷ ಕೋಟಿ ಸಾಲ ಇತ್ತು. ನರೇಂದ್ರ ಮೋದಿ ಎಂಬ ಮಹಾನುಭಾವ ದೇಶಕ್ಕೆ ಒಕ್ಕರಿಸಿದ ಮೇಲೆ ₹೧೮೫ ಲಕ್ಷ ಕೋಟಿ ಸಾಲ ಆಗಿದೆ. ಇದು ಬಹುದೊಡ್ಡ ಸಾಧನೆ. ಕೇಂದ್ರ ಸರ್ಕಾರಕ್ಕೆ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ನಾಚಿಕೆಯಾಗಬೇಕು. ಕಳೆದ ೧೦ ವರ್ಷದಲ್ಲಿ ನೀರಾವರಿ ಯೋಜನೆಯೂ ಇಲ್ಲ. ಉದ್ಯೋಗ ಸೃಷ್ಟಿಗೆ ಕೈಗಾರಿಕೆಯೂ ಇಲ್ಲ. ದೇಶದಲ್ಲಿ ಅಭಿವೃದ್ಧಿ ಶೂನ್ಯ, ಬಡತನ, ನಿರುದ್ಯೋಗ ಅಧಿಕವಾಗಿದೆ. ರೈತರ ಮೇಲೆ ದೌರ್ಜನ್ಯ ಮಾಡುವುದು ಬಿಟ್ಟರೆ ಮತ್ತೇನು ಇವರಿಗೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಶಿರೂರು ಗುಡ್ಡ ಕುಸಿತದಲ್ಲಿ ಮೃತಪಟ್ಟವರಿಗೆ ಕೇಂದ್ರ ಸರ್ಕಾರ ಪರಿಹಾರ ನೀಡಿಲ್ಲ. ಮಾನವ ನಿರ್ಮಿತ ಕಾರಣದಿಂದ ಪರಿಸರದ ಮೇಲೆ ಉಂಟಾಗುತ್ತಿರುವ ದಾಳಿಯಿಂದ ಜನ ಜಾನುವಾರು, ಸಂಪನ್ಮೂಲಗಳು, ವ್ಯವಸ್ಥೆ ಹಾಳಾಗುತ್ತಿದೆ. ಪರಿಸರ ರಕ್ಷಣೆ ಮಾಡುವ ದೃಷ್ಟಿಯಿಂದ ಹಾನಿಯಾಗಿರುವುದನ್ನು ಗಮನಿಸಿ, ಸಾವು- ನೋವು ಉಂಡ ಜನರಿಗೆ ಕೇಂದ್ರ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಭೀಮಣ್ಣ ನಾಯ್ಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ, ಕೆಪಿಸಿಸಿಯ ಸಯ್ಯದ ಅಹಮ್ಮದ್, ಶಂಭು ಶೆಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಪ್ರಮುಖರಾದ ಆರ್.ಎಚ್. ನಾಯ್ಕ, ಎಸ್.ಕೆ. ಭಾಗ್ವತ್ ಶಿರಸಿಮಕ್ಕಿ, ದೀಪಕ ಹೆಗಡೆ ದೊಡ್ಡೂರು, ಅಬ್ಬಾಸ ತೋನ್ಸೆ ಮತ್ತಿತರರು ಇದ್ದರು.