ಸಾರಾಂಶ
ರಾಜ್ಯದಲ್ಲಿ ಪೋಡಿ ಸಮಸ್ಯೆ ಇರುವ ಗ್ರಾಮಗಳಲ್ಲಿ ಸರ್ವೇ ಕಾರ್ಯ ಪೂರ್ಣಗೊಳಿಸಿ ಪೋಡಿ ಮುಕ್ತವನ್ನಾಗಿಸಲು ಕ್ರಮ ಕೈಗೊಳ್ಳಬೇಕು.
ಬೆಂಗಳೂರು : ರಾಜ್ಯದಲ್ಲಿ ಪೋಡಿ ಸಮಸ್ಯೆ ಇರುವ ಗ್ರಾಮಗಳಲ್ಲಿ ಸರ್ವೇ ಕಾರ್ಯ ಪೂರ್ಣಗೊಳಿಸಿ ಪೋಡಿ ಮುಕ್ತವನ್ನಾಗಿಸಲು ಕ್ರಮ ಕೈಗೊಳ್ಳಬೇಕು. ಅದಕ್ಕೆ ಪೂರಕವಾಗಿ 1,227 ಪರವಾನಗಿ ಭೂಮಾಪಕರನ್ನು ಕಾಯಂ ಮಾಡುವುದು ಹಾಗೂ ಸರ್ವೇ ಇಲಾಖೆಯಲ್ಲಿ ಖಾಲಿ ಇರುವ 36 ಸಹಾಯಕ ನಿರ್ದೇಶಕ (ಎಡಿಎಲ್‌ಆರ್)ರನ್ನು ನೇಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ವಿಧಾನಸೌಧದಲ್ಲಿ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಆಯೋಜಿಸಿದ್ದ 36ನೇ ರಾಷ್ಟ್ರೀಯ ಭೂಮಾಪನಾ ದಿನಾಚರಣೆಯಲ್ಲಿ ಮಾತನಾಡಿದರು. ಕಂದಾಯ ಇಲಾಖೆ ಸರ್ಕಾರದ ಮಾತೃ ಇಲಾಖೆ ಇದ್ದ ಹಾಗೆ. ಈ ಇಲಾಖೆ ಉತ್ತಮವಾಗಿ ಕೆಲಸ ಮಾಡಿದರೆ ರೈತರು ನೆಮ್ಮದಿಯಾಗಿರುತ್ತಾರೆ. ಕಂದಾಯ ಇಲಾಖೆ ರೈತರೊಂದಿಗೆ ಹೆಚ್ಚಿನ ಸಂಪರ್ಕ ಹೊಂದಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಿದರೆ ಸರ್ಕಾರದ ಶೇ.50ರಷ್ಟು ಜವಾಬ್ದಾರಿ ನಿರ್ವಹಿಸಿದಂತಾಗುತ್ತದೆ ಎಂದರು.
ಒತ್ತುವರಿ ಪತ್ತೆಗೆ ಸರ್ವೇ ಮಾಡಿ:ಪೋಡಿ ಮುಕ್ತ ಅಭಿಯಾನ ನಡೆಸಿದರೂ ಇನ್ನೂ ಹಲವು ಗ್ರಾಮಗಳಲ್ಲಿ ಪೋಡಿ ಸಮಸ್ಯೆ ನಿವಾರಣೆಯಾಗಿಲ್ಲ. ಹೀಗಾಗಿ ಸರ್ವೇ ಕಾರ್ಯ ಪೂರ್ಣಗೊಳಿಸಿ, ದಾಖಲೆಗಳನ್ನು ಸರಿಪಡಿಸಿ ಪೋಡಿ ಮುಕ್ತ ಗ್ರಾಮವನ್ನಾಗಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಅದರ ಜತೆಗೆ ಕೆರೆಗಳ ಒತ್ತುವರಿ ಪತ್ತೆ ಮಾಡಲು ರಾಜ್ಯದ ಎಲ್ಲ ಕೆರೆಗಳನ್ನು ಸರ್ವೇ ನಡೆಸಿ ಒತ್ತುವರಿ ತೆರವು ಮಾಡಬೇಕು. ಅದಕ್ಕಾಗಿ ಸರ್ವೇ ಇಲಾಖೆ ಸೂಕ್ತ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.
ಕಂದಾಯ ಇಲಾಖೆಯಲ್ಲಿ ಹಲವು ಹೊಸ ಕಾರ್ಯ
ಕಂದಾಯ ಇಲಾಖೆಯು ಪರಿವರ್ತನೆಯ ಹಾದಿಯಲ್ಲಿದೆ. ಹಲವು ಹೊಸಬಗೆಯ ತಂತ್ರಜ್ಞಾನವನ್ನು ಬಳಸಿ ಜನರ ಸಮಸ್ಯೆ ನಿವಾರಿಸುವ ಕೆಲಸ ಮಾಡಲಾಗುತ್ತಿದೆ. ಸರ್ವೇ ಕಾರ್ಯಕ್ಕೆ ರೋವರ್ ತಂತ್ರಜ್ಞಾನ ಬಳಸಲಾಗುತ್ತಿದೆ. ಹಾಗೆಯೇ, ಇಲಾಖೆಯು ಹಲವು ಹೊಸ ಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಸ್ವಾಮಿತ್ವ ಯೋಜನೆ ಅಡಿ ಗ್ರಾಮಠಾಣಾಗಳನ್ನು ಸರ್ವೇ ಮಾಡುವ ಕೆಲಸ ಮಾಡಲಾಗುತ್ತಿದೆ. ಇದೇ ಮಾದರಿ ಅನುಕರಿಸಿ ಕೇಂದ್ರ ಸರ್ಕಾರ ದೇಶಾದ್ಯಂತ ನಕ್ಷಾ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಕಳೆದ 23 ತಿಂಗಳಲ್ಲಿ 26 ಲಕ್ಷ ಸರ್ವೇ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಡಲಾಗಿದೆ. ದಿನಕ್ಕೆ ಸರಾಸರಿ 5 ರಿಂದ 6 ಸಾವಿರ ಪ್ರಕರಣಗಳ್ನು ಸರ್ವೇ ಮಾಡಿಕೊಡುತ್ತಿದ್ದೇವೆ. ಅಲ್ಲದೆ, 8 ದಿನದಲ್ಲಿ ಹದ್ದುಬಸ್ತು ಮತ್ತು 3 ದಿನಗಳಲ್ಲಿ 11ಇ ಸ್ಕೆಚ್ ಮಾಡಿಕೊಡುತ್ತಿದ್ದೇವೆ. ಈ ಹಿಂದೆ ತಿಂಗಳುಗಳ ಕಾಲ ಕಾಯಬೇಕಿತ್ತು. ಇನ್ನು, ಪೋಡಿ ಮುಕ್ತ ಗ್ರಾಮ ಮಾಡುವ ಸವಾಲನ್ನು ನಾವು ಸ್ವೀಕರಿಸಿದ್ದೇವೆ. 2013-18ನೇ ಸಾಲಿನಲ್ಲಿ ರಾಜ್ಯದ 30 ಸಾವಿರ ಗ್ರಾಮಗಳ ಪೈಕಿ 16,630 ಗ್ರಾಮಗಳನ್ನು ಪೋಡಿ ಮುಕ್ತಗೊಳಿಸಲಾಗಿತ್ತು. ಆದರೆ, ಹಿಂದಿನ ಸರ್ಕಾರದ ಅವಧಿಯಲ್ಲಿ ಕೇವಲ 2 ಸಾವಿರ ಗ್ರಾಮಗಳಲ್ಲಿ ಮಾತ್ರ ಪೋಡಿ ಮಾಡಲಾಗಿದೆ. ಈಗ 23 ತಿಂಗಳಲ್ಲಿ 2079 ಗ್ರಾಮಗಳನ್ನು ಈಗಾಗಲೇ ಪೋಡಿ ಮುಕ್ತ ಮಾಡಲಾಗಿದೆ. ಮುಂದಿನ 1 ವರ್ಷದಲ್ಲಿ ಉಳಿದೆಲ್ಲ ಗ್ರಾಮಗಳನ್ನು ಪೋಡಿ ಮುಕ್ತ ಮಾಡುವ ಸವಾಲನ್ನು ತೆಗೆದುಕೊಳ್ಳಲಾಗಿದೆ ಎಂದರು.
ಶಾಸಕ ರಿಜ್ವಾನ್ ಅರ್ಷದ್, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ ಇತರರಿದ್ದರು.
ಸರ್ವೇ ಕಾರ್ಯಕ್ಕೆ ವೇಗ ನೀಡಲು ಈಗಾಗಲೇ 750 ಸರ್ವೇಯರ್‌ಗಳ ನೇಮಕ ಪ್ರಕ್ರಿಯೆ ಆರಂಭಿಸಲಾಗಿದೆ. ಅದರ ಜತೆಗೆ 1,227 ಪರವಾನಗಿ ಭೂಮಾಪಕರನ್ನು ಕಾಯಂಗೊಳಿಸಲು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಲಿದೆ. ಹಾಗೆಯೇ, ಸರ್ವೇ ಇಲಾಖೆಗೆ 36 ಮಂದಿ ಎಡಿಎಲ್‌ಆರ್ ನೇಮಕ ಪ್ರಕ್ರಿಯೆಗೆ ಶೀಘ್ರ ಚಾಲನೆ ನೀಡಲಾಗುವುದು. ಆಮೂಲಕ ರಾಜ್ಯದಲ್ಲಿನ ಸರ್ವೇ ಸಮಸ್ಯೆ ಹಾಗೂ ಭೂಮಿಗೆ ಸಂಬಂಧಿಸಿದ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದರು.
ದೀರ್ಘಾವಧಿ ಅಧಿಕಾರದಲ್ಲಿದ್ದರೂ ಸಮಸ್ಯೆ ಬಗೆಹರಿಸಿಲ್ಲ
ನಾನು ದೀರ್ಘಾವಧಿಯಿಂದ ಜನಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದೇನೆ. 1978ರಲ್ಲಿ ತಾಲೂಕು ಅಭಿವೃದ್ಧಿ ಮಂಡಳಿಯಲ್ಲಿ ಕೆಲಸ ಮಾಡಿದ್ದೇನೆ. ನಂತರ 1983ರಲ್ಲಿ ಶಾಸಕನಾಗಿ, 1984ರಲ್ಲಿ ಸಚಿವನಾದೆ. ತಲಾ 2 ಬಾರಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದೇನೆ. ಇಷ್ಟು ದೀರ್ಘಾವಧಿವರೆಗೆ ಅಧಿಕಾರದಲ್ಲಿದ್ದರೂ ಕಂದಾಯ ಇಲಾಖೆ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸಲಾಗಲಿಲ್ಲ ಎಂಬ ಕೊರಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಕೃಷ್ಣ ಬೈರೇಗೌಡ ಕಾರ್ಯಕ್ಕೆ ಮೆಚ್ಚುಗೆ
ಕಂದಾಯ ಸಚಿವರಾಗಿ ಕೃಷ್ಣ ಬೈರೇಗೌಡ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇಲಾಖೆಯಲ್ಲಿ ಹಲವು ಹೊಸ ಕೆಲಸಗಳನ್ನು ಆರಂಭಿಸಿದ್ದಾರೆ. ಕ್ಷಣದಲ್ಲಿ ಅಂಕಿ-ಅಂಶಗಳನ್ನು ಹೇಳುವ ಮಟ್ಟಿಗೆ ಇಲಾಖೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಶ್ಲಾಘಿಸಿದರು.