ಸಾರಾಂಶ
ಕುಮಟಾ: ಕಂದಾಯ ಇಲಾಖೆಗೆ ಇರುವಷ್ಟು ಸೇವಾ ಅವಕಾಶ ಮತ್ತು ಕರ್ತವ್ಯಗಳು ಬೇರೆ ಯಾವುದೇ ಇಲಾಖೆಗೆ ಇಲ್ಲ. ಮಾಡುವ ಒಂದು ಸಹಿಗೂ ಸಾರ್ವಕಾಲಿಕ ಮಹತ್ವ ಇದೆ, ಯಾರದ್ದೋ ಭವಿಷ್ಯ ಅಡಗಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡಿರಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಹೇಳಿದರು.
ರಾಜ್ಯ ಸರ್ಕಾರಿ ಕಂದಾಯ ನೌಕರರ ಸಂಘದ ತಾಲೂಕು ಘಟಕದಿಂದ ಪಟ್ಟಣದ ಪುರಭವನದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಕಂದಾಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಕಂದಾಯ ಇಲಾಖೆಯವರು ಯಾವತ್ತೂ ತಾಯಿಯಂತೆಯೇ ಕೆಲಸ ಮಾಡುತ್ತೇವೆ. ಏನೇ ಸಮಸ್ಯೆಗಳಿದ್ದರೂ ಜನರು ಬರುವುದು ಕಂದಾಯ ಇಲಾಖೆ ಬಳಿಗೆ. ಏನೇ ಸಮಸ್ಯೆ ಇದ್ದರೂ ಸ್ಥಳದಲ್ಲೇ ನಿಂತು ಕೆಲಸ ಮಾಡುವ ದೊಡ್ಡ ಜವಾಬ್ದಾರಿ ಸರ್ಕಾರ ನಮಗೆ ನೀಡಿದೆ. ಸರ್ಕಾರಿ ಭೂಮಿಯ ರಕ್ಷಣೆ ಮಾಡಬೇಕು. ಇಲಾಖೆಯಿಂದ ಡಿಜಿಟಲೈಜೇಶನ್ ಪೂರ್ಣ ಪ್ರಮಾಣದಲ್ಲಿ ನಡೆದಿದೆ. ೮೮ ಸಾವಿರಕ್ಕೂ ಹೆಚ್ಚು ಅರಣ್ಯ ಹಕ್ಕಿ ಅರ್ಜಿಗೆ ನಿರ್ಣಯ ನೀಡಿದ್ದೇವೆ. ೬೦೦ಕ್ಕೂ ಹೆಚ್ಚು ಹಂಗಾಮಿ ಲಾಗಣಿ ಮಂಜೂರಿ ನೀಡಿದ್ದೇವೆ. ಜಿಲ್ಲೆಯ ೨೩೧ ಗ್ರಾಮ ಸಹಾಯಕರಲ್ಲಿ ೨೧೦ ಗ್ರಾಮ ಸಹಾಯಕರಿಗೆ ಕಚೇರಿ ವ್ಯವಸ್ಥೆ ಮಾಡಿದ್ದೇವೆ. ಉಳಿದವರಿಗೆ ಮುಂದಿನ ದಿನಗಳಲ್ಲಿ ವ್ಯವಸ್ಥೆಯಾಗಲಿದೆ. ಗ್ರಾಪಂ ಆಡಳಿತ ಜತೆಗೆ ಸಂಲಗ್ನಗೊಳಿಸಿ ಅಧಿಕಾರಿ ಎಲ್ಲಿದ್ದರೋ ಅಲ್ಲಿಂದಲೇ ಫೈಲ್ ಮುಂದುವರೆಸುವುದು, ತಂತ್ರಜ್ಞಾನ ಬಳಸುವಂತೆ ಮುಂದಿನ ೬ ತಿಂಗಳಲ್ಲಿ ಜಿಲ್ಲೆಯಲ್ಲಿ ಹೊಸ ವ್ಯವಸ್ಥೆ ಅಳವಡಿಕೆಯಾಗಲಿದೆ ಎಂದರು.
ಐಎಎಸ್ ಪದವಿ ಬಳಿಕ ಕುಮಟಾದಲ್ಲೇ ಉಪವಿಭಾಗಾಧಿಕಾರಿಯಾಗಿ ಮೊದಲ ಸೇವೆ ನಿಯುಕ್ತಿಯಾಗಿದ್ದರಿಂದ ಕುಮಟಾ ಎಂದರೆ ನನಗೆ ಜೀವನದಲ್ಲಿ ಯಾವತ್ತೂ ವಿಶೇಷ. ಬಳಿಕ ಜಿಲ್ಲಾಧಿಕಾರಿಯಾಗಿಯೂ ಉತ್ತರಕನ್ನಡ ಜಿಲ್ಲೆಗೆ ನಿಯುಕ್ತಿಯಾದಾಗಲೂ ಅತ್ಯಂತ ಸಂತಸ ಹಾಗೂ ಉತ್ಸುಕತೆಯಿಂದ ಬಂದು ಕರ್ತವ್ಯ ನಿರ್ವಹಿಸುತ್ತಿದ್ದು ಮುಂದೆಯೂ ಅವಕಾಶ ಸಿಕ್ಕಿದರೆ ಈ ಜಿಲ್ಲೆಯಲ್ಲಿ ಕೆಲಸ ಮಾಡಲು ಖುಷಿ. ಈ ಜಿಲ್ಲೆಯಲ್ಲಿರುಷ್ಟು ಕಂದಾಯ ಅಧಿಕಾರಿ ಸಿಬ್ಬಂದಿ ಬೇರೆ ಯಾವ ಜಿಲ್ಲೆಯಲ್ಲೂ ನಿರೀಕ್ಷೆ ಮಾಡಲಾಗದು. ನಾವೆಲ್ಲರೂ ಒಂದು ದೊಡ್ಡ ಕುಟುಂಬದಂತೆ ಕೆಲಸ ಮಾಡಿ ಈ ಜಿಲ್ಲೆಗೆ ಒಳ್ಳೆಯದು ಮಾಡೋಣ ಎಂದರು.ತಹಸೀಲ್ದಾರ ಶ್ರೀಕೃಷ್ಣ ಕಾಮಕರ ಮಾತನಾಡಿ, ಕಂದಾಯ ಇಲಾಖೆಯ ಪ್ರತಿಯೊಬ್ಬರ ಜನನದಿಂದ ಮರಣದವರೆಗೆ ಹಲವು ಬಗೆಯ ಸೇವೆ ನೀಡುತ್ತಿದೆ. ಇದು ಎಲ್ಲ ಇಲಾಖೆಗಳ ತಾಯಿ ಇದ್ದ ಹಾಗೆ. ಎಂತಹ ಸಮಸ್ಯೆಗಳಿದ್ದರೂ ಕಂದಾಯ ನೌಕರರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಕಂದಾಯ ಇಲಾಖೆಯೆಂದರೆ ನೇರವಾಗಿ ಜನರೊಂದಿಗೆ ಸಂಪರ್ಕದಲ್ಲಿರುವ ಇಲಾಖೆ. ನಾವು ಎಷ್ಟೆಲ್ಲ ಸೇವೆ ನೀಡುತ್ತಿದ್ದರೂ ಜನರೊಂದಿಗೆ ಬೆರೆತು ಯಶಸ್ವಿಯಾಗಿ ಸೇವೆ ನೀಡಿ ಜನರ ಮನ್ನಣೆಗೆ ಒಳಗಾದಾಗ ಮಾತ್ರ ಕಂದಾಯ ದಿನಾಚರಣೆ ಅರ್ಥಪೂರ್ಣ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ಉಪವಿಭಾಗಾಧಿಕಾರಿ ಕಚೇರಿಯ ತಹಸೀಲ್ದಾರ ಗ್ರೇಡ್ ೨ ಅಶೋಕ ಭಟ್, ತಹಸೀಲ್ದಾರ ಗ್ರೇಡ್ ೨ ಸತೀಶ ಗೌಡ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಉಮೇಶ ಆಗೇರ, ಲೆಕ್ಕಪತ್ರ ಇಲಾಖೆಯ ನಿವೃತ್ತ ಉಪನಿರ್ದೇಶಕ ಡಿ.ಎಸ್. ನಾಯ್ಕ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿನಾಯಕ ಭಂಡಾರಿ, ಗ್ರಾಮ ಸಹಾಯಕ ಸಂಘದ ಅಧ್ಯಕ್ಷ ಚಂದ್ರಕಾಂತ ನಾಯ್ಕ, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಚಂದ್ರಶೇಖರ ನಾಯ್ಕ, ಕಂದಾಯ ನೌಕರರ ಸಂಘದ ಅಧ್ಯಕ್ಷ ಟಿ.ಎಸ್. ಗಾಣಿಗೇರ ವೇದಿಕೆಯಲ್ಲಿದ್ದರು.ಕಾರ್ಯಕ್ರಮದಲ್ಲಿ ನಿವೃತ್ತ ಶಿರಸ್ತೆದಾರರ ವಿಷ್ಣು ವೆಂಕಟ್ರಮಣ ಹೊಸ್ಕಟ್ಟಾ, ಯಶೋದಾ ರಾಮ ಲಕ್ಕುಮನೆ, ಸಿಡಿಪಿಒ ಶೀಲಾ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಸಭಾಕಾರ್ಯಕ್ರಮದ ಬಳಿಕ ಕಂದಾಯ ನೌಕರರ ವತಿಯಿಂದ ಏರ್ಪಡಿಸಿದ್ದ ಮನರಂಜನೆ ಆಟಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದವರನ್ನು ರಂಜಿಸಿತು.