ಸಾರಾಂಶ
ಕಂದಾಯ ಮತ್ತು ಅರಣ್ಯ ಇಲಾಖೆಯವರು ತಮ್ಮ ವ್ಯಾಪ್ತಿಗೆ ಸೇರಿದ ಜಮೀನನ್ನು ಗುರುತಿಸಿ ಗಡಿ ನಿಗದಿಪಡಿಸಿಕೊಳ್ಳುವುದಕ್ಕೆ ಮುಂದಾಗಿಲ್ಲ. ಯಾವುದಾದರೊಂದು ಯೋಜನೆಗೆ ಜಮೀನು ನಿಗದಿಪಡಿಸಲು ಹೋದರೆ ಅರಣ್ಯಕ್ಕೆ ಸೇರಿದ ಜಮೀನು, ಇದು ಕಂದಾಯ ಜಮೀನು, ಗೋಮಾಳ ಎಂದೆಲ್ಲಾ ತಗಾದೆ ತೆಗೆಯುತ್ತಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಕಂದಾಯ ಮತ್ತು ಅರಣ್ಯ ಇಲಾಖೆ ನಡುವಿನ ಭೂಮಿ ಗೊಂದಲ ಇದುವರೆಗೂ ಬಗೆಹರಿದಿಲ್ಲ. ಇದರಿಂದ ಜಮೀನುಗಳನ್ನು ಗುರುತಿಸಿ ಅನ್ಯ ಉದ್ದೇಶಗಳಿಗೆ ಬಳಸುವುದಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ವಿಷಯ ಪ್ರಸ್ತಾಪಿಸಿದರು.ಮಂಗಳವಾರ ಜಿಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಬಗರ್ ಹುಕುಂ ಸಾಗುವಳಿದಾರರ ವಿಷಯ ಪ್ರಸ್ತಾಪವಾದಾಗ, ಕಂದಾಯ ಮತ್ತು ಅರಣ್ಯ ಇಲಾಖೆಯವರು ತಮ್ಮ ವ್ಯಾಪ್ತಿಗೆ ಸೇರಿದ ಜಮೀನನ್ನು ಗುರುತಿಸಿ ಗಡಿ ನಿಗದಿಪಡಿಸಿಕೊಳ್ಳುವುದಕ್ಕೆ ಮುಂದಾಗಿಲ್ಲ. ಯಾವುದಾದರೊಂದು ಯೋಜನೆಗೆ ಜಮೀನು ನಿಗದಿಪಡಿಸಲು ಹೋದರೆ ಅರಣ್ಯಕ್ಕೆ ಸೇರಿದ ಜಮೀನು, ಇದು ಕಂದಾಯ ಜಮೀನು, ಗೋಮಾಳ ಎಂದೆಲ್ಲಾ ತಗಾದೆ ತೆಗೆಯುತ್ತಾರೆ. ಹೀಗಿರುವಾಗಿ ಸಾಗುವಳಿದಾರರಿಗೆ ಭೂಮಿಯನ್ನು ಎಲ್ಲಿಂದ ನೀಡುವಿರಿ ಎಂದು ಪ್ರಶ್ನಿಸಿದರು.
ಇದಕ್ಕೆ ಶಾಸಕ ಎಚ್.ಟಿ.ಮಂಜು ದನಿಗೂಡಿಸಿ ಕೆ.ಆರ್.ಪೇಟೆ ತಾಲೂಕಿನಲ್ಲಿ ಲೇ-ಔಟ್ ನಿರ್ಮಾಣವಾಗಿರುವ ಜಾಗ ಕೂಡ ಈಗಲೂ ಅರಣ್ಯ ಎಂದೇ ದಾಖಲೆಗಳಲ್ಲಿದೆ. ರೈತರ ಜಮೀನುಗಳನ್ನೂ ಅದರೊಳಗೆ ಸೇರಿಸಿದ್ದು ಸಮಸ್ಯೆ ಎದುರಿಸುತ್ತಿದ್ದಾರೆ ಎಂದಾಗ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಮಳವಳ್ಳಿ ತಾಲೂಕಿನಲ್ಲಿ ಕಾವೇರಿ ವನ್ಯಜೀವಿ ವಲಯಕ್ಕೆ ರೈತರ ಜಮೀನುಗಳನ್ನೂ ಸೇರಿಸಿಕೊಂಡಿದ್ದಾರೆ. ಅವರೇನು ಮಾಡುವುದು ಎಂದು ಪ್ರಶ್ನಿಸಿದರು.