ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಜಮೀನು ಖಾತೆ ಮಾಡಿಕೊಡುವ ವಿಚಾರವಾಗಿ ರೈತರೊಬ್ಬರ ಬಳಿ 10,000 ರು. ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತರು ನಡೆಸಿದ ದಾಳಿಗೆ ಸಿ.ಎಸ್. ಪುರ ನಾಡ ಕಚೇರಿ ಕಂದಾಯ ನಿರೀಕ್ಷಕ ನರಸಿಂಹಮೂರ್ತಿ ಸಿಕ್ಕಿಬಿದ್ದಿದ್ದಾರೆ.ಗುಬ್ಬಿ ತಾಲೂಕು, ಸಿ.ಎಸ್.ಪುರ ಹೋಬಳಿ, ಉಂಗ್ರ ಮಜರೆ, ಗದ್ದೆಹಳ್ಳಿ ಗ್ರಾಮದ ವಾಸಿ ದೂರುದಾರ ನಾಗರಾಜು ರವರ ತಂದೆ ಚಿಕ್ಕಯಲ್ಲಯ್ಯ ಅವರ ಹೆಸರಿನಲ್ಲಿದ್ದ ಉಂಗ್ರ ಗ್ರಾಮದ ಸರ್ವೆ ನಂಬರ್ 201/1 ಮತ್ತು ಹುಲ್ಲೇಕೆರೆ ಗ್ರಾಮದ ಸರ್ವೆ ನಂಬರ್ 32 ರ ಜಮೀನುಗಳನ್ನು ಅವರ ಮಗನಾದ ದೂರುದಾರ ನಾಗರಾಜುಗೆ ಗುಬ್ಬಿ ತಾಲೂಕು ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಹಕ್ಕು ಖುಲಾಸೆ ಪತ್ರ ಮುಖೇನ ನೋಂದಣಿ ಮಾಡಿಕೊಟ್ಟಿದ್ದು, ಸದರಿ ಜಮೀನುಗಳ ಖಾತೆ ಮತ್ತು ಪಹಣಿಗಳನ್ನು ತಂದೆಯ ಹೆಸರಿನಿಂದ ಮಗನಾದ ದೂರುದಾರ ನಾಗರಾಜು ಹೆಸರಿಗೆ ವರ್ಗಾವಣೆ ಮಾಡಿಕೊಡಲು ಸಿ.ಎಸ್.ಪುರ ಹೋಬಳಿ ರಾಜಸ್ವ ನಿರೀಕ್ಷಕ ಕೆ.ನರಸಿಂಹಮೂರ್ತಿ 10,000 ರು. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.ಲಂಚ ಕೊಡಲು ಇಷ್ಟವಿಲ್ಲದೇ ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಸುರೇಶ್.ಕೆ ಅವರು ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮ ಅನ್ವಯ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡಿದ್ದರು. ಬುಧವಾರ ಮಧ್ಯಾಹ್ನ 2.45ಕ್ಕೆ ನಾಗರಾಜು ಅವರಿಂದ 10,000 ರು. ಲಂಚದ ಹಣವನ್ನು ಕಚೇರಿಯಲ್ಲಿಯೇ ಸ್ವೀಕರಿಸುವ ಮೂಲಕ ಆರೋಪಿ ಕೆ.ನರಸಿಂಹಮೂರ್ತಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಆರೋಪಿ ಕೆ.ನರಸಿಂಹಮೂರ್ತಿ ಅವರು ಈ ಹಿಂದೆಯೂ ಕೂಡ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ತುಮಕೂರು ಲೋಕಾಯುಕ್ತ ಕಚೇರಿ ಪೊಲೀಸ್ ಅಧೀಕ್ಷಕ ವಲಿಬಾಷಾ ಮಾರ್ಗದರ್ಶನದಲ್ಲಿ, ಪೊಲೀಸ್ ಉಪ ಅಧೀಕ್ಷಕ ಬಿ.ಉಮಾಶಂಕರ್ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಸುರೇಶ್.ಕೆ, ಬಿ.ಮೊಹಮ್ಮದ್ ಸಲೀಂ ಮತ್ತು ಶಿವರುದ್ರಪ್ಪ ಮೇಟಿ ಹಾಗೂ ಸಿಬ್ಬಂದಿಗಳಾದ ಆಲಂಪಾಷ, ನಾಗರಾಜು.ಪಿ, ಯತೀಗೌಡ, ರಾಘವೇಂದ್ರ, ಗಿರೀಶ್ ಕುಮಾರ್.ಟಿ.ಎಸ್, ಭಾಸ್ಕರ್, ಯಶೋಧ, ನಳಿನಾಕ್ಷಿ, ಬಸವರಾಜು, ಸಂತೋಷ್, ಕರಿಯಪ್ಪ ಮತ್ತು ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.