ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಕಂದಾಯ ಮಾಸಾಚರಣೆ ಮೂಲಕ ಸಾರ್ವಜನಿಕರ ಮನವೊಲಿಸಿ ಗ್ರಾಮ ಪಂಚಾಯ್ತಿ ಅಧಿಕಾರಿ, ಸಿಬ್ಬಂದಿ ಕಳೆದ ಮೂರು ದಿನಗಳಲ್ಲಿ ತಾಲೂಕಿನ ಎಲ್ಲಾ ಗ್ರಾಪಂಗಳಿಂದ ಅಂದಾಜು 13.99 ಲಕ್ಷ ರು. ಕಂದಾಯ ವಸೂಲಾತಿ ಮಾಡಿದೆ.ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿನ ಮನೆ ಹಾಗೂ ನೀರಿನ ಕಂದಾಯ ಸಾಕಷ್ಟು ಬಾಕಿ ಉಳಿದಿರುವುದರಿಂದ ಗ್ರಾಪಂ ಅಭಿವೃದ್ಧಿಗೆ ಕುಂಠಿತವಾಗುತ್ತಿರುವ ಹಿನ್ನೆಲೆಯಲ್ಲಿ, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್ ಹಾಗೂ ತಾಪಂ ಇಒ ಲೋಕೇಶ್‌ಮೂರ್ತಿ ಅವರ ಸೂಚನೆಯಂತೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಹಣ ಹಾಗೂ ಪ್ರಸ್ತುತ ವರ್ಷದಲ್ಲಿ ಕಂದಾಯದ ಹಣವನ್ನು ಜನರಿಂದ ವಸೂಲಿ ಮಾಡಲು ಮುಂದಾಗಿದ್ದಾರೆ.
ತಾಪಂ ಇಒ ಲೋಕೇಶ್‌ಮೂರ್ತಿ ಅವರು ಗ್ರಾಪಂ ವ್ಯಾಪ್ತಿಯ ಎಲ್ಲಾ ಪಿಡಿಒಗಳ ಸಭೆ ನಡೆಸಿ ಗ್ರಾಪಂಗಳಲ್ಲಿ ಬಾಕಿ ಉಳಿದಿರುವಂತಹ ಕಂದಾಯವನ್ನು ವಸೂಲಾತಿ ಮಾಡಿ, ಪಂಚಾಯಿತಿ ಅಭಿವೃದ್ಧಿಗೆ ಸಹಕರಿಸಬೇಕೆಂದು ಗ್ರಾಪಂ ಪಿಡಿಒಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.ಅಲ್ಲದೇ, ಗ್ರಾಪಂಗಳಿಗೆ ವಾರದೊಳಗೆ ಇಂತಿಷ್ಟು ವಸೂಲಾತಿ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದು, ಆದಾಯ ಮೂಲ ಹೊಂದಿರುವಂತಹ ಗ್ರಾಪಂಗಳಿಗೆ ಹೆಚ್ಚಿನ ಟಾರ್ಗೆಟ್ ನೀಡಿದ್ದಾರೆ. ಆದಾಯ ಕಡಿಮೆ ಹೊಂದಿರುವಂತಹ ಪಂಚಾಯ್ತಿ ಕಡಿಮೆ ಟಾರ್ಗೆಟ್ ನೀಡುವ ಮೂಲಕ ಕಂದಾಯ ವಸೂಲಾತಿಗೆ ಕ್ರಮವಹಿಸಿದ್ದಾರೆ.
ಮೇಲಾಧಿಕಾರಿಗಳು ಕಂದಾಯ ವಸೂಲಾತಿಗೆ ಗುರಿ ನೀಡಿರುವ ಹಿನ್ನೆಲೆಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಕಾರ್‍ಯದರ್ಶಿ, ಬಿಲ್‌ಕೆಲೆಕ್ಟರ್ ಹಾಗೂ ಸಿಬ್ಬಂದಿ ಮನೆಮನೆಗೆ ತೆರಳಿ ಜನರಿಗೆ ಕಂದಾಯ ಪಾವತಿಯ ಬಗ್ಗೆ ಅರಿವು ಮೂಡಿಸಿ ಇದರಿಂದ ಸಾರ್ವಜನಿಕರಿ ಆಗುವ ಅನುಕೂಲಗಳ ಬಗ್ಗೆ ಅರಿವು ಮೂಡಿಸಿ ಕಂದಾಯ ವಸೂಲಾತಿಗೆ ಮುಂದಾಗಿದ್ದಾರೆ.ಡಿ.2ರಿಂದ ಕಂದಾಯ ವಸೂಲಾತಿ ಆಂದೋಲನ ಆರಂಭಿಸಿರುವ ಪಿಡಿಒಗಳು ಕರಪತ್ರಗಳು, ಜಾಥಾಗಳ ಮೂಲಕ ಜನರಿಗೆ ಅರಿವು ಮೂಡಿಸುವ ಜತೆಗೆ ಕಂದಾಯ ವಸೂಲಾತಿ ಮಾಡಲು ಮುಂದಾಗಿದ್ದಾರೆ. ಡಿ.2ರಿಂದ 4ರವರೆಗೆ ಕೇವಲ ಎರಡು ದಿನಗಳಲ್ಲಿ ತಾಲೂಕಿನ 24 ಗ್ರಾಪಂಗಳಿಂದ 13,99,154 ರು ಕಂದಾಯ ವಸೂಲಾತಿ ಮಾಡಿದ್ದಾರೆ.
ಗ್ರಾಪಂಗಳ ಅಧಿಕಾರಿಗಳ ಕಂದಾಯ ವಸೂಲಾತಿ ಮಾಸಾಚರಣೆಗೆ ಇಒ ಲೋಕೇಶ್‌ಮೂರ್ತಿ ಸೇರಿದಂತೆ ತಾಪಂ ಹಲವು ಅಧಿಕಾರಿಗಳು ಸಹ ಸಾಥ್ ನೀಡಿದ್ದಾರೆ. ತಾಲೂಕಿನಲ್ಲಿ ಚಿನಕುರಳಿ ಹಾಗೂ ಕೆನ್ನಾಳು ಗ್ರಾಪಂಗಳು ಆದಾಯ ಹೊಂದಿರುವ ಪಂಚಾಯ್ತಿಗಳಾಗಿದ್ದು ಇವುಗಳಿಗೆ ತಲಾ 4 ಲಕ್ಷ ರು. ಟಾರ್ಗೇಟ್ ನೀಡಿದ್ದಾರೆ.ಉಳಿದಂತೆ ಕೆಲವು ಪಂಚಾಯ್ತಿಗಳು 2 ಲಕ್ಷ ಹಾಗೂ ಆದಾಯ ಕಡಿಮೆ ಹೊಂದಿರುವ ಹಲವು ಗ್ರಾಪಂಗೆ ತಲಾ 1.50 ಲಕ್ಷ ಕಂದಾಯ ವಸೂಲಾತಿಗೆ ಟಾರ್ಗೆಟ್ ನೀಡಿದ್ದಾರೆ. ಕಂದಾಯ ಮಾಸಾಚರಣೆ ಆಂದೋಲನ ಡಿ.8ರವರೆಗೂ ನಡೆಯಲಿದೆ. ಸಾರ್ವಜನಿಕರು ಬಾಕಿ ಉಳಿಸಿಕೊಂಡಿರುವ ಕಂದಾಯವನ್ನು ಪಾವತಿಸುವ ಮೂಲಕ ಗ್ರಾಪಂ ಅಭಿವೃದ್ಧಿಗೆ ಶ್ರಮಿಸಬೇಕೆಂದು ತಾಪಂ ಇಒ ಹಾಗೂ ಗ್ರಾಪಂ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಕಂದಾಯ ಮಾಸಾಚರಣೆ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳ ಸೂಚನೆಯಂತೆ ಗ್ರಾಪಂ ವ್ಯಾಪ್ತಿ ಸಾರ್ವಜನಿಕರಿಂದ ಮನೆ ಹಾಗೂ ನೀರಿನ ಕಂದಾಯ ವಸೂಲಾತಿ ಮಾಡುತ್ತಿದ್ದೇವೆ. ಪಂಚಾಯ್ತಿ ಅಭಿವೃದ್ಧಿ ದೃಷ್ಟಿಯಿಂದ ಸಾರ್ವಜನಿಕರು ಸಕಾಲಕ್ಕೆ ಗ್ರಾಪಂಗಳಿಗೆ ಕಂದಾಯ ಪಾವತಿ ಮಾಡುವ ಮೂಲಕ ಸಹಕಾರ ಮಾಡಬೇಕು. ಪಂಚಾಯ್ತಿ ಅಧಿಕಾರಿಗಳು, ಸಿಬ್ಬಂದಿ ಮನೆಗಳ ಬಳಿ ಬಂದಾಗ ಸಹಕರಿಸಬೇಕು.- ಪುರುಷೋತ್ತಮ್, ಪಿಡಿಒ ಕನಗನಮರಡಿ ಗ್ರಾಪಂ, ಪಾಂಡವಪುರ
ಸಾರ್ವಜನಿಕರು ಸಕಾಲಕ್ಕೆ ತಮ್ಮ ಆಸ್ತಿ ಬಾಕಿ ತೆರಿಗೆ ಪಾವತಿಸುವ ಮೂಲಕ ಸದೃಢ ಗ್ರಾಮ ಪಂಚಾಯ್ತಿ ನಿರ್ಮಾಣ ಮಾಡಬೇಕು. ಜತೆಗೆ ಆಸ್ತಿ ದಾಖಲೆಗಳನ್ನು ಭದ್ರಪಡಿಸಿಕೊಳ್ಳಲು ಗ್ರಾಪಂಗಳಲ್ಲಿ ಇ-ಸ್ವತ್ತುಗಳನ್ನು ಮಾಡಿಸಿಕೊಳ್ಳುವ ಮೂಲಕ ತಮ್ಮ ಆಸ್ತಿ ದಾಖಲಾತಿಯನ್ನು ಸಂರಕ್ಷಣೆ ಮಾಡಿಕೊಳ್ಳಬೇಕು.-ಲೋಕೇಶ್‌ಮೂರ್ತಿ ಇಓ, ತಾಪಂ ಪಾಂಡವಪುರ