ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ನಗರಸಭೆಯಲ್ಲಿ ಗುರುವಾರ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ಕಂದಾಯ ಅಧಿಕಾರಿ ಮತ್ತು ಓರ್ವ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಜಿ. ಬೊಮ್ಮಸಂದ್ರ ಗ್ರಾಪಂ ವ್ಯಾಪ್ತಿಯ ವೇದಲವೇಣಿ ಗ್ರಾಮಕ್ಕೆ ಹೊಂದಿಕೊಂಡಿರುವ ಸಕ್ಕರೆ ಕಾರ್ಖಾನೆ ಮುಂಭಾಗದ ನಿವಾಸಿ ಜುಲ್ಪೆಕಾರ್ ಅಲಿ ಬುಟ್ಟೋ ರವರು ತಮ್ಮ ಪಿತ್ರಾರ್ಜಿತ ಆಸ್ತಿಯ ಒಂದು ಎಕರೆ ಸ್ಥಳವನ್ನು ಸೈಟುಗಳಾಗಿ ಪರಿವರ್ತಸಿ, ತಮ್ಮ ತಾಯಿ ಮತ್ತು ಸಹೋದರಿಯ ಹೆಸರಿಗೆ ಇ- ಖಾತೆ ಮಾಡಿಕೊಡುವಂತೆ ಕೇಳಿದಾಗ ನಗರಸಭೆ ಕಂದಾಯ ಅಧಿಕಾರಿ ನಾರಾಯಣ್ ಮತ್ತು ಸಿಬ್ಬಂದಿ ಕೃಷ್ಣಮೂರ್ತಿ 50 ಸಾವಿರ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಗುರುವಾರ ಕಚೇರಿಯಲ್ಲಿ ಫಲಾನುಭವಿಯಿಂದ 15 ಸಾವಿರ ರು. ಲಂಚ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ರಾತ್ರಿಯಾದರೂ ಮುಂದುವರೆದಿದ್ದ ಪರಿಶೀಲನೆ:ಗುರುವಾರ ಮಧ್ಯಾಹ್ನ ನಗರಸಭೆಗೆ ಆಗಮಿಸಿದ ಲೋಕಾಯುಕ್ತ ಪೊಲೀಸರ ತಂಡ ಕಡತಗಳ ದಾಖಲೆಗಳ ಪರಿಶೀಲನೆ ನಡೆಸಿತು. ಪೌರಾಯುಕ್ತ ಗೀತಾ ಡಿ.ಎಂ. ಕೊಠಡಿಯಲ್ಲಿ ಕುಳಿತ ಡಿವೈಎಸ್ಪಿಗಳು ಹಾಗೂ ಅಧಿಕಾರಿಗಳ ತಂಡ, ಕಡತಗಳ ಪರಿಶೀಲನೆ ನಡೆಸುವ ಜತೆಗೆ ಪೌರಾಯುಕ್ತರಿಂದ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿತು. ಲೋಕಾಯುಕ್ತ ಪೊಲೀಸರು ಪೌರಾಯುಕ್ತರಿಂದ ಮಾಹಿತಿ ಪಡೆದುಕೊಂಡರು. ರಾತ್ರಿಯಾದರೂ ನಗರಸಭೆಯಲ್ಲಿ ಕಡತಗಳ ಪರಿಶೀಲನೆ ಕಾರ್ಯ ಮುಂದುವರೆದಿತ್ತು.
ಲೋಕಾಯುಕ್ತ ಎಸ್ ಪಿ ಆಂಪೋನಿ ಜಾನ್ ಜೆ.ಕೆ. ಮತ್ತು ಡಿವೈಎಸ್ಪಿ ವೀರೇಂದ್ರ ಕುಮಾರ್ ರವರ ನೇತೃತ್ವದಲ್ಲಿ ಸುಮಾರು 10 ಮಂದಿ ಲೋಕಾಯುಕ್ತ ಪೊಲೀಸರಿಂದ ನಡೆದ ಈ ಕಾರ್ಯಾಚರಣೆಯು ನಗರಸಭೆಯಲ್ಲಿನ ಭ್ರಷ್ಟ ಅಧಿಕಾರಿಗಳನ್ನು ಸೆರೆ ಹಿಡಿಯಲು ಸಹಕಾರಿಯಾಗಿದೆ.ನಗರಸಭೆ ವ್ಯಾಪ್ತಿಯಲ್ಲಿ ಮಧ್ಯವರ್ತಿಗಳ ದಂಧೆ ಜೋರಾಗಿ ನಡೆಯುತ್ತಿದೆ. ಸಾಮಾನ್ಯ ಜನ ತಮ್ಮ ನಿವೇಶನಗಳಿಗೆ ಸಂಬಂಧಿಸಿದ ಖಾತೆಗಳನ್ನು ಪಡೆಯಲು ಅಧಿಕಾರಿಗಳ ಕಚೇರಿಗಳಿಗಿಂತ ಮಧ್ಯವರ್ತಿಗಳ ಸುತ್ತ ಅಲೆಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ವ್ಯವಸ್ಥೆ ಬದಲಾಗಬೇಕಿದೆ.
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪಿಐರವರಾದ ಮೋಹನ್ ಹೆಡ್ಡನ್, ಜಿ. ಶಿವಪ್ರಸಾದ್, ಲೋಕಾಯುಕ್ತ ಪೊಲೀಸರಾದ ಕೆ.ಪಿ.ನಾಗರಾಜ್, ಚೌಡರೆಡ್ಡಿ, ಸತೀಶ್, ಅರುಣ್ ಕುಮಾರ್, ಸಂತೋಷ್ ಕುಮಾರ್, ದಿಲೀಪ್, ರಮೇಶ್, ಮೂರ್ತಿ,ಮಂಜುಳಾ ಸೇರಿದಂತೆ ಇತರರು ಭಾಗವಹಿಸಿದ್ದರು.