ಹೈಕಮಾಂಡ್‌ನಿಂದ ಸಚಿವರ ಕಾರ್ಯವೈಖರಿ ಪರಿಶೀಲನೆ: ಎಚ್‌.ಕೆ. ಪಾಟೀಲ

| Published : Nov 30 2024, 12:46 AM IST

ಹೈಕಮಾಂಡ್‌ನಿಂದ ಸಚಿವರ ಕಾರ್ಯವೈಖರಿ ಪರಿಶೀಲನೆ: ಎಚ್‌.ಕೆ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಸಚಿವ ಸಂಪುಟ ಪುನಾರಚನೆ ಕುರಿತು ಮಾಹಿತಿಯಿಲ್ಲ. ಆದರೆ, ಸಚಿವರ ಕಾರ್ಯವೈಖರಿಯ ವರದಿ ಕುರಿತು ಪಕ್ಷದ ಹೈಕಮಾಂಡ್‌ನ ನಾಯಕರು ಕೇಳಿರುವುದಾಗಿ ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

ಹುಬ್ಬಳ್ಳಿ: ಸಚಿವ ಸಂಪುಟ ಪುನಾರಚನೆ ಕುರಿತು ಮಾಹಿತಿಯಿಲ್ಲ. ಆದರೆ, ಸಚಿವರ ಕಾರ್ಯವೈಖರಿಯ ವರದಿ ಕುರಿತು ಪಕ್ಷದ ಹೈಕಮಾಂಡ್‌ನ ನಾಯಕರು ಕೇಳಿರುವುದಾಗಿ ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವರು ತಮ್ಮ ಇಲಾಖೆಯಲ್ಲಿ ಯಾವೆಲ್ಲ ಅಭಿವೃದ್ಧಿ ಕೆಲಸ ಮಾಡಿದ್ದಾರೆ?, ಅವರ ಕಾರ್ಯವೈಖರಿ ಹೇಗಿದೆ ಎಂಬುದರ ಕುರಿತು ಸಂಪೂರ್ಣ ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸೂಚನೆ ನೀಡಿದೆ. ಈ ರೀತಿಯ ಸಚಿವರ ಕಾರ್ಯವೈಖರಿಯ ಪರಿಶೀಲನೆ ಮಾಡುವುದು ಕಾಂಗ್ರೆಸ್‌ನಲ್ಲಿ ಈ ಹಿಂದಿನಿಂದಲೂ ಪಾಲಿಸುತ್ತಾ ಬಂದಿರುವ ಪದ್ಧತಿ. ಇದರಲ್ಲಿ ಯಾವುದೇ ರೀತಿಯ ವಿಶೇಷತೆಯಿಲ್ಲ ಎಂದರು.

ಸಿಎಂ ಬದಲಾವಣೆ ಇಲ್ಲ

ಮುಖ್ಯಮಂತ್ರಿ ಬದಲಾವಣೆ ಸುದ್ದಿ ಕೇವಲ ಮಾಧ್ಯಮಗಳ ಸೃಷ್ಟಿ..ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾವನೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದರು.

ತನಿಖೆಗೆ ಆಗ್ರಹ

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕುಟುಂಬ ಭ್ರಷ್ಟಾಚಾರ ನಡೆಸಿದ್ದು, ಅವರ ವಿರುದ್ಧ ಕ್ರಮ ಜರುಗಿಸುವಂತೆ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಎನ್ನುವವರು ಈ ಹಿಂದೆ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು. ಆದರೆ, ರಾಜ್ಯಪಾಲರು ಆ ದೂರನ್ನು ತಿರಸ್ಕರಿಸಿದ್ದರು. ಅವು ಅತ್ಯಂತ ಗಂಭೀರ ದೂರುಗಳಾಗಿವೆ. ರಾಜ್ಯಪಾಲರು ದೂರು ತಿರಸ್ಕರಿಸಿರುವುದು ಸರಿಯಲ್ಲ. ಈ ನಿರ್ಣಯವನ್ನು ಪುನರ್‌ ಪರಿಶೀಲಿಸಿ ತನಿಖೆಗೆ ಪೂರ್ವಾನುಮತಿ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ ಎಂದರು.

ಬಿಜೆಪಿಯದು ಈಗ ಒಡೆದ ಮನೆ: ಸಚಿವ ಜಾರಕಿಹೊಳಿ

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದ ಬಗ್ಗೆ ಸುಮ್ಮನೆ ಆರೋಪ ಮಾಡುತ್ತಿದ್ದ ಬಿಜೆಪಿಯದ್ದೇ ಈಗ ಒಡೆದ ಮನೆಯಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್‌ ಕುರಿತು ಬಿಜೆಪಿಯವರು ಜನಜಾಗೃತಿ ಮಾಡುತ್ತಿದ್ದಾರೆ. ಆದರೆ, ಅವರಲ್ಲಿಯೇ ಎರಡು ಗುಂಪುಗಳಾಗಿದ್ದು, ವಕ್ಫ್‌ ವಿರುದ್ಧದ ಹೋರಾಟಕ್ಕೆ ಒಂದು ಗುಂಪು ಒಪ್ಪಿದರೆ ಮತ್ತೊಂದು ಒಪ್ಪುವುದಿಲ್ಲ ಎನ್ನುತ್ತಿದ್ದಾರೆ. ಬಿಜೆಪಿಯವರ ಹೋರಾಟಗಳು ಏನೇ ಇದ್ದರೂ ಅವುಗಳು ಚುನಾವಣೆಗೆ ಮಾತ್ರ ಸೀಮಿತವಾಗಿರುತ್ತವೆ. ಪೂರ್ಣಪ್ರಮಾಣದ ಹೋರಾಟಗಳೇ ಇರುವುದಿಲ್ಲ ಎಂದು ವ್ಯಂಗ್ಯವಾಡಿದರು.ಅಧಿಕಾರ ನನಗಿಲ್ಲ

ಕಾಂಗ್ರೆಸ್ ಯಾವುದೇ ಸಮಾವೇಶ, ಏನೇ ಕಾರ್ಯ ಮಾಡಿದರೂ ಜನಹಿತಕ್ಕಾಗಿ ಮಾಡುತ್ತದೆ. ಮುಖ್ಯಮಂತ್ರಿಗಳ ಅವಧಿ, ಸಚಿವ ಸಂಪುಟದ ಬಗ್ಗೆ ಮಾತನಾಡುವ ಅಧಿಕಾರ ನಮಗಿಲ್ಲ. ಅದೆಲ್ಲದಕ್ಕೂ ಮುದ್ರೆ ಹಾಕಲು ಪಕ್ಷದ ಹೈ ಕಮಾಂಡ್ ಇದೆ ಎಂದು ಸ್ಪಷ್ಟಪಡಿಸಿದರು.ಎಲ್ಲೆಡೆಯೂ ಅಹಿಂದ ಸಮಾವೇಶ

ಹಾಸನದಲ್ಲಿ ಮಾತ್ರವಲ್ಲದೆ ರಾಜ್ಯದ ವಿವಿಧ ಮೂಲೆಗಳಲ್ಲಿಯೂ ಅಹಿಂದ ಸಮಾವೇಶ ಮಾಡಲಾಗುತ್ತದೆ. ಇದು ಯಾವುದೇ ಒಬ್ಬ ವ್ಯಕ್ತಿಗತವಾದಂತಹ ಸಮಾವೇಶವಲ್ಲ. ಕಾಂಗ್ರೆಸ್ ಬ್ಯಾನರ್ ಅಡಿಯಲ್ಲಿ ಪಕ್ಷವೇ ಮಾಡುವ ಸಮಾವೇಶವಾಗಿದೆ. ಎಲ್ಲಿಯೇ ಆಗಲಿ ಯಾರೇ ಮಾಡಿದರೂ ಕಾಂಗ್ರೆಸ್‌ ನವರೆ ಮಾಡುತ್ತಿದ್ದಾರೆ. ಹಾಗಾಗಿ ಈ ಸಮಾವೇಶದಿಂದ ಕಾಂಗ್ರೆಸ್‌ಗೆ ಹೆಚ್ಚಿನ ಅನಕೂಲವಾಗಲಿದೆ ಎಂದರು.ಸಿಎಂ ಕುರ್ಚಿ ಖಾಲಿ ಇಲ್ಲ

ಮುಖ್ಯಮಂತ್ರಿಗಳ ಅವಧಿಯ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವೈಯಕ್ತಿಕ ಹೇಳಿಕೆ ನೀಡಿದ್ದಾರೆ. ಈ ಐದು ವರ್ಷವೋ..? ಮುಂದಿನ ಐದು ವರ್ಷವೂ ಗೊತ್ತಿಲ್ಲ. ಆದರೆ, ಸಿಎಂ ಬದಲಾವಣೆಗೆ ಸಿಎಂ ಖುರ್ಚಿ ಖಾಲಿ ಇಲ್ಲ. ಅಲ್ಲದೆ ಜೆಡಿಎಸ್, ಬಿಜೆಪಿ ಪಕ್ಷದಲ್ಲಿಯೂ ಸಿಎಂ ಬದಲಾವಣೆ ಆಗಿವೆ. ಆದರೆ ನಮ್ಮ ಪಕ್ಷದ ನಿರ್ಧಾರದ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.ಸಚಿವ ಸಂಪುಟ ಪುನಾರಚನೆ ಕುರಿತ ಚರ್ಚೆ ನಡೆದಿಲ್ಲ: ಸಚಿವ ಜಮೀರ್

ಹುಬ್ಬಳ್ಳಿ: ರಾಜ್ಯ ಸಚಿವ ಸಂಪುಟದ ಪುನಾರಚನೆ ಕುರಿತು ಯಾವುದೇ ರೀತಿಯ ಚರ್ಚೆಗಳು ನಡೆದಿಲ್ಲ. ಈ ಕುರಿತು ನನಗೆ ಮಾಹಿತಿಯಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಪುನಾರಚನೆ ಮಾಡುವುದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಸಚಿವರೊಂದಿಗೆ ಚರ್ಚಿಸುತ್ತಿದ್ದರು. ಆದರೆ, ಆ ರೀತಿಯ ಯಾವುದೇ ಚರ್ಚೆಗಳು ನಡೆದಿಲ್ಲ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ಸಿಡಬ್ಲ್ಯೂಸಿ ಸಭೆಗಾಗಿ ದೆಹಲಿಗೆ ಹೋಗಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ

ಮುಸ್ಲಿಂ ಸಮುದಾಯಕ್ಕೆ ಮತದಾನದ ಹಕ್ಕು ರದ್ದುಪಡಿಸಲು ಕಾನೂನು ಜಾರಿಗೆ ತರಬೇಕು ಎಂಬ ವಿಶ್ವ ಒಕ್ಕಲಿಗ ಸಂಸ್ಥಾನ ಮಠದ ಚಂದ್ರಶೇಖರನಾಥ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಜಮೀರ್, ದೇಶದ ಪ್ರತಿಯೊಬ್ಬ ನಾಗರಿಕರಿಗೆ ಮತದಾನದ ಹಕ್ಕು ನೀಡಿದ್ದು ನಮ್ಮ ದೇಶದ ಸಂವಿಧಾನ. ಎಲ್ಲರಿಗೂ ಮತ ಚಲಾಯಿಸುವ ಹಕ್ಕಿದೆ. ಶ್ರೀಗಳು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅವರು ದೊಡ್ಡವರು. ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಹಾಗೂ ಬೇಡಿಕೆಗಳ ಚರ್ಚೆಗಾಗಿಯೇ ಬೆಳಗಾವಿಯಲ್ಲಿ ಅಧಿವೇಶನ ನಡೆಸುತ್ತಿರುವುದು. ಈ ಕುರಿತಾದ ವಿಸ್ತೃತ ಚರ್ಚೆಗೆ ವಿಪಕ್ಷಗಳು ಸಹಕಾರ ನೀಡಬೇಕು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.