ಚನ್ನಪಟ್ಟಣ: ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ದೇಶದ ವಿವಿಧ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ, ಅದರಂತೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಶೆಟ್ಟಿಹಳ್ಳಿಯಲ್ಲಿ ಬೆಂಗಳೂರು-ಮೈಸೂರು ರೈಲ್ವೆ ಮಾರ್ಗದಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಕುಮಾರಸ್ವಾಮಿ ತಿಳಿಸಿದರು.ಬೆಂಗಳೂರು-ಮೈಸೂರು ನಡುವಿನ ರೈಲು ಮಾರ್ಗದ ವಿಂಡೋ ಟ್ರೈಲಿಂಗ್ ತಪಾಸಣೆ ನಡೆಸಿ, ಮಾರ್ಗ ಮಧ್ಯೆ ತಾಲೂಕಿನ ಶೆಟ್ಟಿಹಳ್ಳಿ ರೈಲು ನಿಲ್ದಾಣ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು - ಮೈಸೂರು ರೈಲ್ವೆ ಮಾರ್ಗದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸಾರ್ವಜನಿಕರು ಸಲ್ಲಿಸಿರುವ ಅರ್ಜಿ ಸಂಬಂಧ ರೈಲ್ವೆ ಕಾಮಗಾರಿಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿ, ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಹೆಚ್ಚಿನ ಆದ್ಯತೆ ನೀಡಲು ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಿ, ಅಗತ್ಯ ಮೂಲ ಸೌಕರ್ಯ ಒದಗಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎಂದರು.

ಮೇಲ್ಸೆತುವೆ, ಕೆಳಸೇತುವೆ ಕಾಮಗಾರಿ, ನಿಲ್ದಾಣಗಳಲ್ಲಿನ ಸ್ವಚ್ಛತೆ, ಪ್ರಯಾಣಿಕರಿಗೆ ಆಗುವ ತೊಂದರೆಗಳು, ಇತರೆ ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸಲಾಗುತ್ತಿದೆ. ರೈಲ್ವೆ ಇಲಾಖೆಯ ಸೇವೆಗಳು ಬಡವರಿಗೆ ತಲುಪಬೇಕೆನ್ನುವ ನಿಟ್ಟಿನಲ್ಲಿ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.

ರಾಜ್ಯದ ಹಲವೆಡೆ ಸಂಚಾರ ಮಾಡಿ ರೈಲ್ವೆಯಲ್ಲಿನ ನ್ಯೂನತೆ ಪರಿಶೀಲಿಸುತ್ತಿದ್ದೇನೆ. ರೈಲ್ವೆ ಸಂಚಾರವನ್ನ ಮತ್ತಷ್ಟು ಸುಲಭ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಪ್ರಯಾಣಿಕರು ಹಾಗೂ ಸಾರ್ವಜನಿಕರ ಸಮಸ್ಯೆ ಆಲಿಸಿ ಬಗೆಹರಿಸಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.

ಇಂದು ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಸಂಸದ ಯದುವೀರ್ ಒಡೆಯರ್‌ ಜತೆ ಬೆಂ-ಮೈ ರೈಲ್ವೆ ಮಾರ್ಗ ಪರಿಶೀಲಿಸ್ತಿದ್ದೇವೆ. ರಾಮನಗರ, ಚನ್ನಪಟ್ಟಣದ ರೈಲ್ವೆ ನಿಲ್ದಾಣ ಆಧುನೀಕರಣ ಆಗುತ್ತಿದ್ದು, ಶೀಘ್ರದಲ್ಲೇ ಅವುಗಳನ್ನ ಉದ್ಘಾಟಿಸಲಾಗುವುದು ಎಂದರು.


ಪೊಟೋ೯ಸಿಪಿಟಿ೧:

ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಮತ್ತು ವಿ.ಸೋಮಣ್ಣ ಬೆಂಗಳೂರು-ಮೈಸೂರು ನಡುವಿನ ರೈಲು ಮಾರ್ಗದ ವಿಂಡೋ ಟ್ರೈಲಿಂಗ್ ನಡೆಸಿದರು.