6ನೇ ಗ್ಯಾರಂಟಿಯಾಗಿ ಶೈಕ್ಷಣಿಕ ಕ್ಷೇತ್ರವನ್ನು ಪುನಶ್ಚೇತಗೊಳಿಸಿ: ನಾರಾಯಣಸ್ವಾಮಿ ಆಗ್ರಹ

| Published : Jan 15 2024, 01:45 AM IST

ಸಾರಾಂಶ

ರಾಜ್ಯ ಸರ್ಕಾರ ಶೈಕ್ಷಣಿಕ ಕ್ಷೇತ್ರವನ್ನು ಸಂಪೂರ್ಣ ಕಡೆಗಣಿಸಿದೆ. ಯಾವುದೇ ಅನುದಾನವನ್ನೂ ನೀಡುತ್ತಿಲ್ಲ. ಅನುದಾನಿತ ಖಾಸಗಿ ಶಾಲಾ ಶಿಕ್ಷಕರು ಸಂಕಷ್ಟದಲ್ಲಿ ಸಿಲುಕ್ಕಿದ್ದಾರೆ, ಅನುದಾನಿತ ಶಾಲೆಗಳಲ್ಲಿ 2015 ರಿಂದ ಇಲ್ಲಿಯವರೆಗೆ ಖಾಲಿ ಇರುವ ಹುದ್ದೆಗಳು ಭರ್ತಿಯಾಗದೆ ಶಿಕ್ಷಕರ ಕೊರತೆಯಿಂದ ಶಿಕ್ಷಣ ಭೋದನೆ ಕುಂಟಿತವಾಗಿದೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ರಾಜ್ಯ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳಿಂದ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಕಡೆಗಣಿಸಿದ್ದು, ಸರ್ಕಾರ 6ನೇ ಗ್ಯಾರಂಟಿ ಜಾರಿಗೊಳಿಸಿ ಗುಣಾತ್ಮಕ, ಉಚಿತ, ಶಿಕ್ಷಣ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಆಗ್ರಹಿಸಿದರು.

ಕೊರಟಗೆರೆ ಪಟ್ಟಣದ ಶಾಲೆಗಳಿಗೆ ಭೇಟಿ ನೀಡಿ, ಶಿಕ್ಷಣ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಕಾಳಿದಾಸ ಪ್ರೌಢಶಾಲೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಶೈಕ್ಷಣಿಕ ಕ್ಷೇತ್ರವನ್ನು ಸಂಪೂರ್ಣ ಕಡೆಗಣಿಸಿದೆ. ಯಾವುದೇ ಅನುದಾನವನ್ನೂ ನೀಡುತ್ತಿಲ್ಲ. ಅನುದಾನಿತ ಖಾಸಗಿ ಶಾಲಾ ಶಿಕ್ಷಕರು ಸಂಕಷ್ಟದಲ್ಲಿ ಸಿಲುಕ್ಕಿದ್ದಾರೆ, ಅನುದಾನಿತ ಶಾಲೆಗಳಲ್ಲಿ 2015 ರಿಂದ ಇಲ್ಲಿಯವರೆಗೆ ಖಾಲಿ ಇರುವ ಹುದ್ದೆಗಳು ಭರ್ತಿಯಾಗದೆ ಶಿಕ್ಷಕರ ಕೊರತೆಯಿಂದ ಶಿಕ್ಷಣ ಭೋದನೆ ಕುಂಟಿತವಾಗಿದೆ.ಆದ್ದರಿಂದ ಶಿಕ್ಷಕರ ನೇಮಕಾತಿಗೆ ಆದೇಶ ನೀಡಬೇಕು ಎಂದು ಆಗ್ರಹಿಸಿದ ಅವರು, ಖಾಸಗಿ ಶಾಲಾ ಶಿಕ್ಷಕರಿಗೆ ನೂತನ ಪಿಂಚಣಿ ಹಾಗೂ ಹಳೆಯ ಪಿಂಚಣಿ ಪದ್ದತಿ (ಎನ್.ಪಿ.ಎಸ್ ಹಾಗೂ ಓಪಿಎಸ್)ಯೂ ಇಲ್ಲವಾಗಿದ್ದು, ಸರ್ಕಾರ ಅನುದಾನಿತ ಖಾಸಗಿ ಶಾಲಾ ಶಿಕ್ಷಕರಿಗೆ ನೂತನ ಪಿಂಚಣಿ ಪದ್ದತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಕಳೆದ 18 ವರ್ಷಗಳಲ್ಲಿ ಶಿಕ್ಷಕರ ಪ್ರತಿನಿಧಿಯಾಗಿ 3 ಬಾರಿ ಆಯ್ಕೆಯಾಗಿದ್ದೇನೆ. ಶಿಕ್ಷಕರ ಸಮಸ್ಯೆಗಳ ಬಗ್ಗೆ ಸರ್ಕಾರದ ಜೊತೆ ಚರ್ಚಿಸುತ್ತಿದ್ದು, ಅನೇಕ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಮುಂದಿನ ಚುನಾವಣೆಯಲ್ಲಿ 4ನೇ ಬಾರಿ ಆಯ್ಕೆಯಾಗಲು ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಶಿಕ್ಷಕರು ಮತ್ತೆ ಹೆಚ್ಚಿನ ಮತ ನೀಡುವ ಮೂಲಕ ಆಯ್ಕೆ ಮಾಡಿ ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ಶ್ರಮಿಸಲು ಅವಕಾಶ ಕೊಡಬೇಕೆಂದು ವಿನಂತಿಸಿಕೊಂಡರು.

ಪದವಿಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ ಮಾತನಾಡಿ, ಉಚಿತ ಭಾಗ್ಯಗಳಿಂದ ಸರ್ಕಾರವು ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿದೆ. ಶಕ್ತಿ ಯೋಜನೆಯಿಂದ ಶಾಲಾ ಕಾಲೇಜುಗಳಿಗೆ ಹೋಗಲು ಸರಿಯಾದ ಸಮಯಕ್ಕೆ ಬಸ್ ಬಾರದಿರುವುದರಿಂದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕ್ಕಿದ್ದು, ಸರ್ಕಾರವು ಅವರಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಮಾಡಬಾಕಿದೆ. ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಸಮರ್ಪಕ ಅನುದಾನ ನೀಡದೆ ಶಾಲಾ ಕಟ್ಟಡಗಳು ಕುಸಿಯುವ ಹಂತಕ್ಕೆ ತಲುಪಿದ್ದು, ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಖಾಸಗಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಲು ಸರ್ಕಾರ ಆದೇಶ ನೀಡಬೇಕು. ಶಿಕ್ಷಕರಿಗೆ 7ನೇ ವೇತನ ಆಯೋಗ ಜಾರಿಗೊಳಿಸಬೇಕು ಎಂದು ಆಗ್ರಹಿಸಿ, ಶಿಕ್ಷಕರ ಪರವಾಗಿ ಕಳೆದ 18 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ವೈ.ಎ.ನಾರಾಯಣಸ್ವಾಮಿಯವರನ್ನು ಮತ್ತೊಮ್ಮೆ ಆಯ್ಕೆಮಾಡಬೇಕಾಗಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಿವೃತ್ತ ಹಿರಿಯ ಶಿಕ್ಷಕರಾದ ಹನುಮಂತರೆಡ್ಡಿ, ವೈ.ಸಿ.ವಿ.ಸ್ವಾಮಿ, ಶ್ರೀನಿವಾಸರೆಡ್ಡಿ, ಯತಿಕುಮಾರ್, ಕೋಟೆಕಲ್ಲಯ್ಯ, ಚಿಕ್ಕಪ್ಪಯ್ಯ, ಧರ್ಮೇಂದ್ರ ಪ್ರಸಾದ್, ಕಾಳಿದಾಸ ಪ್ರೌಢಶಾಲೆಯ ಶಿಕ್ಷಕರಾದ ಸೀತಾದೇವಿ, ಚಂದ್ರಕಲಾ, ವಂದನಾ, ದೇವರಾಜು, ಸುತ್ತಾರ್, ನವೀನ್ ಕುಮಾರ, ಶ್ರೀನಿವಾಸ್, ನಂದಕಿಶೋರ್ ಸೇರಿ ಇನ್ನಿತರರಿದ್ದರು.