ಕೆರೆ ಪುನಶ್ಚೇತನಗೊಳಿಸುವುದು ಪುಣ್ಯದ ಕೆಲಸ

| Published : Mar 06 2025, 12:31 AM IST

ಸಾರಾಂಶ

ಕೆರೆಕಟ್ಟೆಗಳ ಸಂರಕ್ಷಣೆಯಿಂದ ಅಂತರ್ಜಲ ವೃದ್ಧಿಯಾಗುವ ಜೊತೆಗೆ ಕೃಷಿ, ಜನ-ಜಾನುವಾರುಗಳಿಗೂ ಅನುಕೂಲವಾಗಲಿದ್ದು ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೆರೆಗಳನ್ನು ಪುನಶ್ಚೇತನಗೊಳಿಸುವ ಮೂಲಕ ಪುಣ್ಯದ ಕೆಲಸವನ್ನು ಕೈಗೊಂಡಿದೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾದ ಮಾದಿಹಳ್ಳಿ ಪ್ರಕಾಶ್ ತಿಳಿಸಿದರು.

ಕೆರೆ ಪುನಶ್ಚೇತನಗೊಳಿಸುವುದು ಪುಣ್ಯದ ಕೆಲಸ

ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾದ ಮಾದಿಹಳ್ಳಿ ಪ್ರಕಾಶ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮತ್ತಿಹಳ್ಳಿ ಕೆರೆ ಕಾಮಗಾರಿ

ಕನ್ನಡಪ್ರಭ ವಾರ್ತೆ ತಿಪಟೂರು

ಕೆರೆಕಟ್ಟೆಗಳ ಸಂರಕ್ಷಣೆಯಿಂದ ಅಂತರ್ಜಲ ವೃದ್ಧಿಯಾಗುವ ಜೊತೆಗೆ ಕೃಷಿ, ಜನ-ಜಾನುವಾರುಗಳಿಗೂ ಅನುಕೂಲವಾಗಲಿದ್ದು ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೆರೆಗಳನ್ನು ಪುನಶ್ಚೇತನಗೊಳಿಸುವ ಮೂಲಕ ಪುಣ್ಯದ ಕೆಲಸವನ್ನು ಕೈಗೊಂಡಿದೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾದ ಮಾದಿಹಳ್ಳಿ ಪ್ರಕಾಶ್ ತಿಳಿಸಿದರು.

ತಾಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಬುಧವಾರ ಆಯೋಜಿಸಿದ್ದ ಮತ್ತಿಹಳ್ಳಿ ಕೆರೆ ಕಾಮಗಾರಿಯ ಗುದ್ದಲಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೆರೆಗಳ ಪುನಶ್ಚೇತನ ಸೇರಿದಂತೆ ಹತ್ತಾರು ಯೋಜನೆಗಳನ್ನು ಹಾಕಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಅದರಲ್ಲೂ ಕೆರೆಕಟ್ಟೆಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯ ಅತ್ಯಂತ ಪವಿತ್ರ ಕಾರ್ಯವಾಗಿದ್ದು ಕೆರೆಯಲ್ಲಿ ನೀರು ಶೇಖರಣೆಯಾದರೆ ಅಂತರ್ಜಲ ವೃದ್ಧಿಯಾಗಿ ಸಾವಿರಾರು ರೈತರು, ಜಾನುವಾರುಗಳು, ಪಶುಪಕ್ಷಿಗಳು, ಮರಗಿಡಗಳು ಬದುಕುವ ಮೂಲಕ ಉತ್ತಮ ಪರಿಸರ ಸೃಷ್ಟಿಯಾಗಲಿದೆ. ತಾಲೂಕಿನಲ್ಲಿ ಯೋಜನೆಯ ವತಿಯಿಂದ ಇದುವರೆಗೂ 9 ಕೆರೆ ಕಾಮಗಾರಿಗಳನ್ನು ಪುನಶ್ಚೇತನಗೊಳಿಸಿದ್ದು ಪ್ರಸ್ತುತ ಮತ್ತಿಹಳ್ಳಿ ಕೆರೆಯು 10ನೇ ಕೆರೆಯಾಗಿದ್ದು ಎಲ್ಲಾ ಕೆರೆಗಳು ಮಾದರಿ ಕೆರೆಗಳಾಗಿವೆ. ಇಂತಹ ನಿಸ್ವಾರ್ಥ ಸೇವೆ ನಿಜಕ್ಕೂ ಶ್ಲಾಘನೀಯ ಎಂದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಈ.ಜಿ. ಶಿವರಾಜ್ ಮಾತನಾಡಿ ಜಲಮೂಲವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೆರೆಕಟ್ಟೆಗಳ ಅಭಿವೃದ್ಧಿಯಾಗಬೇಕೆಂಬ ದೃಷ್ಟಿಯಿಂದ ಕೆರೆಗಳ ಪುನಶ್ಚೇತನ ಕಾರ್ಯಕ್ರಮ ರೂಪಿಸಿ ರೈತರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಮತ್ತಿಹಳ್ಳಿ ಕೆರೆಯ ಪುನಶ್ಚೇತನ ಮಾಡುತ್ತಿದ್ದು ಇಲ್ಲಿನ ಗ್ರಾಮಸ್ಥರು ಯಾವುದೇ ರಾಜಕೀಯಕ್ಕೆ ಆಸ್ಪದ ಕೊಡದೆ ಸಹಕಾರ ನೀಡುವ ಮೂಲಕ ಗ್ರಾಮಾಭಿವೃದ್ಧಿ ಸಹಕರಿಸಬೇಕೆಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಯೋಜನೆಯ ಕೆರೆ ಕಾಮಗಾರಿಯ ಕಾರ್ಯವೈಖರಿ ಹಾಗೂ ಕೆರೆ ಸ್ವಚ್ಛತೆಯ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ತಾ. ಯೋಜನಾಧಿಕಾರಿ ಕೆ.ಉದಯ್, ಮತ್ತಿಹಳ್ಳಿ ಗ್ರಾ.ಪ. ಅಧ್ಯಕ್ಷೆ ಜ್ಯೋತಿ, ಸದಸ್ಯರಾದ ಹರೀಶ್ ಗೌಡ, ರೇಣುಕಮ್ಮ, ಹರೀಶ್, ರೂಪ, ಕೆರೆ ಸಮಿತಿ ಅಧ್ಯಕ್ಷ ಹರೀಶ್, ಪಟೇಲ್ ಜಯಣ್ಣ, ಕೃಷಿ ಮೇಲ್ವಿಚಾರಕ ಪ್ರಮೋದ್, ಮೇಲ್ವಿಚಾರಕಿ ಅನಿತ, ಜನಜಾಗೃತಿ ವೇದಿಕೆ ಸದಸ್ಯರಾದ ಶ್ಯಾಮ್ ಸುಂದರ್, ಮಲ್ಲಿಗಪ್ಪಾಚಾರ್, ಸೇವಾಪ್ರತಿನಿಧಿ ಕಮಲಮ್ಮ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.