ಕನ್ನಡಪ್ರಭ ವಾರ್ತೆ ಮದ್ದೂರು

ಕರ್ನಾಟಕದಲ್ಲಿ ಒಂದು ಹವಾ ಪ್ರಾರಂಭವಾಗಿದೆ. 2028ಕ್ಕೆ ಹಿಂದೂ ಹೋರಾಟಗಾರರಿಗೆ ಅಧಿಕಾರ ಸಿಕ್ಕರೆ ಇಡೀ ಕರ್ನಾಟಕದಲ್ಲಿ ಕ್ರಾಂತಿಯಾಗುವ ಸಾಧ್ಯತೆ ಇದೆ ಎಂದು ಹಿಂದೂ ಫೈರ್ ಬ್ರಾಂಡ್ , ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದರು.

ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ಹಿಂದೂಪರ ಸಂಘಟನೆಗಳಿಂದ ಆಯೋಜಿಸಿದ್ದ ಬಲಿದಾನ್ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ ಯತ್ನಾಳ್, ಅನಂತ್ ಕುಮಾರ್ ಹೆಗ್ಡೆ, ಪ್ರತಾಪ್ ಸಿಂಹ ಹಾಗೂ ಸಿಟಿ ರವಿಯಿಂದ ಹವಾ ಶುರುವಾಗಿದೆ. ಇವರಿಗೆ ಅಧಿಕಾರ ಸಿಕ್ಕರೆ ರಾಜ್ಯದಲ್ಲಿ ಕ್ರಾಂತಿ ಆಗುತ್ತದೆ ಎಂಬುದು ಹಿಂದೂ ಕಾರ್ಯಕರ್ತರ ಭಾವನೆಯಾಗಿದೆ ಎಂದರು.

ತಾಜ್ ಮಹಲ್ ಕಟ್ಟಿದವರು ನಮಗೆ ಹೀರೋಗಳು ಆಗಿದ್ದಾರೆ. ಕಳ್ಳನ ಮಕ್ಳು ಕಮ್ಯನಿಷ್ಠರು ತಮಗೆ ಬೇಕಾದಂತೆ ಇತಿಹಾಸ ಬರೆದುಕೊಂಡಿದ್ದಾರೆ. ದೇಶಕ್ಕಾಗಿ ಹೋರಾಡಿದ ಚಂದ್ರಶೇಖರ್ ಅಜಾದ್ , ಭಗತ್ ಸಿಂಗ್ , ವೀರರಾಣಿ ಕಿತ್ತೂರು ಚನ್ನಮ್ಮ, ಜಾನ್ಸಿರಾಣಿ ಲಕ್ಷ್ಮಿಬಾಯಿ, ಸ್ವಾತಂತ್ರ್ಯ ವೀರ ಸಾರ್ವಕರ್ , ಛತ್ರಪತಿ ಶಿವಾಜಿ ಮಹಾರಾಜ್, ಮಹಾ ರಾಣಾ ಪ್ರತಾಪ್ ಇವರು ತಮ್ಮ ಜೀವನವನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಮುಡಿಪಿಟ್ಟರು. ಆದರೆ, ಇವರಿಗೆ ಪುಸ್ತಕವೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ ಗಾಂಧಿ, ನೆಹರು ಯುಗ ಮುಗೀತು. ಗಾಂಧೀಜಿ ದೇಶಕ್ಕಾಗಿ ಏನು ಮಾಡಿಲ್ಲ. ಅರಾಮಾವಾಗಿ ಜೈಲಲ್ಲಿದ್ದರು. ಗಾಂಧಿಗೆ ಮಹಾತ್ಮ ಅನ್ನೋ ಯಾವ ಗುಣಗಳು ನನಗೆ ಕಾಣಲಿಲ್ಲ ಅಂತ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ದೇಶಕ್ಕೆ ಉತ್ತಮ ಸಂವಿಧಾನ ಬರೆದ ಡಾ.ಬಿ.ಆರ್.ಅಂಬೇಡ್ಕರ್ ಪ್ರಧಾನಿ ಆಗಬೇಕಿತ್ತು ಅಥವಾ ಸರ್ದಾರ್ ವಲ್ಲಭಬಾಯಿ ಪಟೇಲ್, ನೇತಾಜಿ ಸುಭಾಷ್ ಚಂದ್ರಬೋಸ್ ಆಗಬೇಕಿತ್ತು, ಆದರೆ ಇವರ್ಯಾರಿಗೂ ಅಧಿಕಾರ ಸಿಕ್ಕಿಲ್ಲ ಎಂದರು.


ಇಂದು ದೇಶಾದ್ಯಂತ ಹಿಂದೂಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಹಿಂದೂಗಳ ಸಜೀವ ದಹನದಂತಹ ಪ್ರಕರಣಗಳು ನಡೆಯುತ್ತಿವೆ. ಇದಕ್ಕೆ ತಕ್ಕ ಪಾಠ ಕಲಿಸಲು 2028ಕ್ಕೆ ನಮ್ಮ ಹಿಂದೂ ಸರ್ಕಾರ ಬಂದರೆ ಗಣಪತಿ ಮೆರವಣಿಗೆಗೆ ಕಲ್ಲು ಹೊಡೆದವರ ಮನೆಗೆ ಬುಲ್ಡೋಜರ್ ಹತ್ತಿಸಿ, ಪೊಲೀಸರಿಗೆ ಎಕೆ- 47 ಕೊಟ್ಟು ಜೈಲಿಗೆ ಕಳುಹಿಸುತ್ತೇವೆ. ಪಾಕಿಸ್ತಾನ್ ಜಿಂದಾಬಾದ್ ಅಂದ್ರೆ ಬಾಯಿಗೆ ಇಟ್ಟು ಹೊಡಿತೀವಿ ಎಂದು ಎಚ್ಚರಿಸಿದರು.

ನನ್ನ ಜೈಲಿಗೆ ಹಾಕಬೇಕು ಅಂತ ಕಾಂಗ್ರೆಸ್ ನವರು ಕಾಯ್ತಿದ್ದಾರೆ. ನಾನು ಮಾತನಾಡಿದನ್ನು ರೆಕಾರ್ಡ್ ಮಾಡಿ ಪ್ರಕರಣ ದಾಖಲು ಮಾಡುತ್ತಾರೆ. ಇದುವರೆಗೂ 80 ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯದಲ್ಲಿ ಜಾಮೀನು ಪಡೆದು ಹೊರಗೆ ಬರುತ್ತೇವೆ. ಇದ್ಯಾವುದಕ್ಕೂ ನಾನು ಅಂಜುವುದಿಲ್ಲ. ನನ್ನ ಕ್ಷೇತ್ರದಲ್ಲಿ ಮುಸ್ಲಿಮರ ಓಟು ಬೇಡ ಅಂತ ಹೇಳಿದ್ದೀನೆ. ಆದರೂ ಅಲ್ಲಿ ಗೆದ್ದು ಬರ್ತಿದ್ದೇನೆ ಎಂದರು.

ದಲಿತರಿಗೆ ರಕ್ಷಣೆ ಇರೋದು ಹಿಂದೂಗಳಿಂದ ಮಾತ್ರ ಮುಸ್ಲಿಮರಿಂದಲ್ಲ ಎಂಬುದು ತಿಳಿಯಬೇಕು. ಮದ್ದೂರಿನಿಂದ ಕರ್ನಾಟಕದಲ್ಲಿ ಹೊಸ ಕ್ರಾಂತಿ ಪ್ರಾರಂಭವಾಗಿದೆ. ಚಾಮರಾಜನಗರದಿಂದ - ಬೀದರ್ - ಬಸವ ಕಲ್ಯಾಣದವರೆಗೂ ಪ್ರತಿ ತಾಲೂಕಿನಲ್ಲೂ ಮುಂದೆ ಪ್ರವಾಸ ಮಾಡ್ತೀನಿ. ಹಿಂದೂಗಳ ಸಮಾಗಮಕ್ಕಾಗಿ, ಹಿಂದೂ ಸರ್ಕಾರಕ್ಕಾಗಿ ಬೀದರ್ ನಲ್ಲಿ ಲಕ್ಷಾಂತರ ಜನ ಸೇರಿಸಿ ಕಾರ್ಯಕ್ರಮ ಮಾಡುತ್ತೇನೆ. ಹಿಂದೂಗಳ ಭವಿಷ್ಯದ ದೃಷ್ಟಿಯಿಂದ ಎಲ್ಲರೂ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಕೆಂಕೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ, ಮೈಸೂರು ವಿವೇಕವಂಶಿ ಫೌಂಡೇಷನ್ ಸ್ಥಾಪಕ ಎಸ್.ಬಿ.ನಿತ್ಯಾನಂದ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿಂದೂಪರ ಸಂಘಟನೆಗಳ ಒಕ್ಕೂಟದ ಕದಲೂರು ನವೀನ, ಕೆ.ಯೋಗಾನಂದ, ಮಲ್ಲಿಕಾರ್ಜುನ, ಎಂ.ಎಸ್.ಜಗನ್ನಾಥ್ , ಎಂ.ಜೆ.ಅನಿಲ್ ಕುಮಾರ್ , ಸುನೀಲ್ , ವೀರಭದ್ರಸ್ವಾಮಿ ಹಲವರು ಇದ್ದರು.