ಕಾಂಗ್ರೆಸ್‌ ಪಕ್ಷದಲ್ಲಿ ನವೆಂಬರ್‌ನಲ್ಲಿ ಕ್ರಾಂತಿ

| Published : Aug 25 2025, 01:00 AM IST

ಸಾರಾಂಶ

ರಾಜ್ಯ ಕಾಂಗ್ರೆಸ್‌ನಲ್ಲಿ ಬದಲಾವಣೆಯಾಗಿದ್ದು, ನವೆಂಬರ್‌ನಲ್ಲಿ ಕ್ರಾಂತಿಯಾಗಲಿದೆ. ಡಿಸಿಎಂ ಡಿ.ಕೆ.ಶಿವಕುಮಾರ ನಿಲುವು ಬದಲಾವಣೆಯಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜ್ಯ ಕಾಂಗ್ರೆಸ್‌ನಲ್ಲಿ ಬದಲಾವಣೆಯಾಗಿದ್ದು, ನವೆಂಬರ್‌ನಲ್ಲಿ ಕ್ರಾಂತಿಯಾಗಲಿದೆ. ಡಿಸಿಎಂ ಡಿ.ಕೆ.ಶಿವಕುಮಾರ ನಿಲುವು ಬದಲಾವಣೆಯಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ನಲ್ಲಿ ಬದಲಾವಣೆಗಳಾಗುತ್ತಿವೆ. ವಿಧಾನಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ ಅವರು ಆರ್‌ಎಸ್‌ಎಸ್‌ ಗೀತೆ ಹಾಡಿದರು. ಪ್ರಯಾಗರಾಜ್‌ನ ಕುಂಭಮೇಳಕ್ಕೆ ಹೋಗಿ, ಹೊಗಳಿ ಬಂದರು. ಡಿ.ಕೆ.ಶಿವಕುಮಾರ ಮೃದುಧೋರಣೆ ತೋರಿದ್ದಾರೆ. ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗುತ್ತದೆ ಎಂದು ಹೇಳಿದ್ದ ಮಾಜಿ ಸಚಿವ ರಾಜಣ್ಣ ಮನೆ ಸೇರಿದ್ದಾಗಿದೆ. ಕಾಂಗ್ರೆಸ್‌ನಲ್ಲಿನ ಈ ಬೆಳವಣಿಗೆ ನೋಡಿದರೆ, ನವೆಂಬರ್‌ನಲ್ಲಿ ಕ್ರಾಂತಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂದರು.

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಬೆಳಗಾವಿ ಜಿಲ್ಲೆಯ ಕೃಷ್ಣಾ ಸೇರಿದಂತೆ ಇತರೆ ನದಿಗಳು ಉಕ್ಕಿ ಹರಿಯುತ್ತಿವೆ. ನದಿತೀರದ ಗ್ರಾಮಗಳಿಗೆ, ಹೊಲಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಸರ್ಕಾರ ರೈತರ ನೆರವಿಗೆ ಕ್ರಮ ಕೈಗೊಳ್ಳಬೇಕು. ರೈತರ ಸಂಕಷ್ಟ ಪರಿಹರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.

ಪ್ರವಾಹಕ್ಕಿಂತ ಮೊದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಆದರೆ, ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದರಿಂದ ಸಂತ್ರಸ್ತರು ತೀವ್ರ ತೊಂದರೆ ಎದುರಿಸುವಂತಾಗಿದೆ. ಜಿಲ್ಲೆಯ 9 ಕಾಳಜಿ ಕೇಂದ್ರದಲ್ಲಿ 420 ಅಧಿಕ ಕುಟುಂಬಗಳ 1840ಕ್ಕೂ ಅಧಿಕ ಸಂತ್ರಸ್ತರು ಆಶ್ರಯ ಪಡೆದಿದದ್ದಾರೆ. ಮತ್ತೆ ಕೆಲವರು ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಸರ್ಕಾರಿ ಶಾಲಾ ಕಟ್ಟಡಗಳು, ಮನೆಗಳು ಹಾನಿಗೀಡಾಗಿವೆ. ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟುಹೋಗಿವೆ. ಅಪಾರ ಪ್ರಮಾಣದ ಬೆಳೆಹಾನಿಗೀಡಾಗಿದೆ. ಮನೆಯಿಂದಾಗಿ ಬಿದ್ದ ಮನೆಗಳಿಗೆ ಸರ್ಕಾರ ಪರಿಹಾರ ನೀಡಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿದ್ದ ಮನೆಗಳಿಗೆ ₹5 ಲಕ್ಷ ಪರಿಹಾರ ನೀಡಲಾಗಿತ್ತು. ತಾತ್ಕಾಲಿಕ ನಿರಾಶ್ರಿತರಿಗೆ ನಿತ್ಯದ ವೆಚ್ಚಕ್ಕಾಗಿ ₹10 ಸಾವಿರ ಮುಂಗಡ ಪರಿಹಾರವನ್ನು ನೀಡಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ತಾತ್ಕಾಲಿಕ ನಿರಾಶ್ರಿತರಿಗೆ ದಿನನಿತ್ಯದ ವೆಚ್ಚಕ್ಕಾಗಿ ₹2500 ನೀಡುತ್ತಿದೆ ಎಂದರು.

ವ್ಯಾಪಕ ಮಳೆಯಿಂದಾಗಿ ಬೆಳಗಾವಿ ನಗರದ ಪ್ರಮುಖ ರಸ್ತೆಗಳು ಹದಗೆಟ್ಟುಹೋಗಿವೆ. ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ರಾಜ್ಯದ ಹವಾಮಾನ ಇಲಾಖೆ ಸಮರ್ಪಕವಾಗಿ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಎಫ್‌.ಎಸ್‌.ಸಿದ್ದನಗೌಡರ, ಈರಯ್ಯ ಖೋತ ಉಪಸ್ಥಿತರಿದ್ದರು.