ಗದಗ: ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಸಾಮಾನ್ಯ ಜನರಿಗಾಗಿ ಯಾವುದೇ ಸಮಗ್ರ ಆರೋಗ್ಯ ಯೋಜನೆಗಳು ಇರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಆರೋಗ್ಯ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಶುಕ್ರವಾರ ನಗರದಲ್ಲಿನ ಕೆಎಲ್‌ಇ ಸಂಸ್ಥೆ ಹಮ್ಮಿಕೊಂಡಿದ್ದ ಉಚಿತ ಬೃಹತ್ ಆರೋಗ್ಯ ತಪಾಸಣಾ ಮತ್ತು ಜಾಗೃತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಬಡ ಜನರಿಗಾಗಿ ತಲಾ ₹5 ಲಕ್ಷಗಳವರೆಗಿನ ಉಚಿತ ಚಿಕಿತ್ಸೆ ನೀಡುವ ಈ ಯೋಜನೆಯನ್ನು ಈಗ ವಯೋವೃದ್ಧರಿಗಾಗಿ 7 ಲಕ್ಷಗಳವರೆಗೆ ಹೆಚ್ಚಿಸಲಾಗಿದೆ. ಇದರಲ್ಲಿ ಕ್ಯಾನ್ಸರ್ ಸೇರಿದಂತೆ ಪ್ರಮುಖ ಕಾಯಿಲೆಗಳ ಚಿಕಿತ್ಸೆಯನ್ನು ಸೇರಿಸಲಾಗಿದೆ ಎಂದರು.

ಕರ್ನಾಟಕ ಒಂದರಲ್ಲೇ ಸುಮಾರು 4 ಕೋಟಿಗೂ ಅಧಿಕ ಆಯುಷ್ಮಾನ್ ಕಾರ್ಡ್‌ಗಳನ್ನು ವಿತರಿಸಲಾಗಿದ್ದು, 2 ಕೋಟಿಗೂ ಹೆಚ್ಚು ಜನರು ಇದರ ಲಾಭ ಪಡೆದಿದ್ದಾರೆ. ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳೆರಡರಲ್ಲೂ ಈ ಸೌಲಭ್ಯ ದೊರೆಯುತ್ತಿದೆ. ಬಡವರಿಗೆ ಔಷಧಿಯ ವೆಚ್ಚ ದೊಡ್ಡ ಸಮಸ್ಯೆಯಾಗಿದ್ದು, ಅದನ್ನು ನೀಗಿಸಲು ಜನೌಷಧಿ ಯೋಜನೆಯನ್ನು ತರಲಾಗಿದೆ. ಇದರೊಂದಿಗೆ ಎರಡು ವಿಮಾ ಯೋಜನೆಗಳನ್ನೂ ಜಾರಿಗೆ ತರಲಾಗಿದೆ. ​ಬಡ ಜನರಿಗೆ ಕೈಗೆಟುಕದಂತಿದ್ದ ಆರೋಗ್ಯ ಚಿಕಿತ್ಸೆ, ಔಷಧಿ ಹಾಗೂ ಆರೈಕೆಯನ್ನು ಸರ್ಕಾರವೇ ಭರಿಸಿ ಅವರ ಜೀವನಕ್ಕೆ ಶಾಶ್ವತ ಭದ್ರತೆ ನೀಡುವ ಬೃಹತ್ ಕೆಲಸ ಪ್ರಸ್ತುತ ದೇಶದಲ್ಲಿ ನಡೆಯುತ್ತಿದೆ ಎಂದರು.

ಆರೋಗ್ಯ ಎಷ್ಟು ಮುಖ್ಯ ಎಂಬುದನ್ನು ಕೋವಿಡ್ ಸಾಂಕ್ರಾಮಿಕ ನಮಗೆ ಮನವರಿಕೆ ಮಾಡಿಕೊಟ್ಟಿದೆ. ಎಂತಹ ಗಟ್ಟಿಮುಟ್ಟಾದ ಮನುಷ್ಯನೂ ಮನೆಯೊಳಗೆ ಕೂರುವ ಪರಿಸ್ಥಿತಿ ತಂದಿಟ್ಟಿತ್ತು. ಈ ಸಂದರ್ಭದಲ್ಲಿ ಸಾಕಷ್ಟು ವೈದ್ಯರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಕೋವಿಡ್ ಸಮಯದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡಾಗ ಅವರಿಗೆ ಸರಿಯಾದ ವಿದಾಯ ಹೇಳಲು ಸಾಧ್ಯವಾಗದ ಕ್ಷಣಗಳನ್ನು ನೆನಪಿಸಿಕೊಂಡರೆ, ಇಂತಹ ಸವಾಲುಗಳು ಬದುಕಿನಲ್ಲಿ ಮತ್ತೊಮ್ಮೆ ಬಾರದಿರಲಿ ಎನಿಸುತ್ತದೆ ಎಂದರು.

​ಹುಬ್ಬಳ್ಳಿಯಲ್ಲಿ ಕೆಎಲ್‌ಇ ವೈದ್ಯಕೀಯ ಕಾಲೇಜು ಸ್ಥಾಪನೆಯಾದ ದಿನಗಳನ್ನು ನೆನಪಿಸಿಕೊಂಡ ಬೊಮ್ಮಾಯಿ ಅವರು, ನಾನು ಬೆಳಗಾವಿಗೆ ಹೋದಾಗಲೆಲ್ಲಾ ಪ್ರಭಾಕರ ಕೋರೆ ಅವರಿಗೆ ಹುಬ್ಬಳ್ಳಿಯಲ್ಲೂ ವೈದ್ಯಕೀಯ ಕಾಲೇಜು ಆರಂಭಿಸಲು ಒತ್ತಾಯಿಸುತ್ತಿದ್ದೆ. ಬಿವಿಬಿ ಆವರಣದಲ್ಲಿ ಕಾಲೇಜು ಮಾಡಲು ಜಮೀನು ಕೊಡಿಸುವಲ್ಲಿ ನಮ್ಮ ತಂದೆಯವರಾದ ಎಸ್.ಆರ್. ಬೊಮ್ಮಾಯಿ ಪಾತ್ರವೂ ಇತ್ತು. ತಡವಾದರೂ ಬೆಳಗಾವಿಗಿಂತಲೂ ಅತ್ಯುತ್ತಮವಾದ ಹಾಗೂ ಇತ್ತೀಚಿನ ತಂತ್ರಜ್ಞಾನ ಒಳಗೊಂಡ ವೈದ್ಯಕೀಯ ಸಂಸ್ಥೆಯನ್ನು ಹುಬ್ಬಳ್ಳಿಯಲ್ಲಿ ಕೆಎಲ್‌ಇ ಆರಂಭಿಸಿದೆ. ಇದು ಕೇವಲ ಹುಬ್ಬಳ್ಳಿಗೆ ಸೀಮಿತವಾಗಿರದೆ ಸುತ್ತಮುತ್ತಲಿನ 3- 4 ಜಿಲ್ಲೆಗಳ ಗ್ರಾಮೀಣ ಭಾಗದ ಜನರಿಗೆ ಆಸರೆಯಾಗಿದೆ ಎಂದರು.


ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೆಎಲ್‌ಇ ವತಿಯಿಂದ ಆಯೋಜಿಸಲಾಗಿರುವ ಬೃಹತ್ ಆರೋಗ್ಯ ಶಿಬಿರದಲ್ಲಿ 8 ಸಾವಿರಕ್ಕೂ ಹೆಚ್ಚು ಜನರು ಶಿಬಿರದಲ್ಲಿ ನೋಂದಣಿ ಮಾಡಿಕೊಂಡಿರುವುದು ಸಾರ್ವಜನಿಕರ ಸ್ಪಂದನೆಗೆ ಸಾಕ್ಷಿಯಾಗಿದೆ ಎಂದರು.