ಸಾರಾಂಶ
- ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾಗೃತಿ ಉದ್ದೇಶ । ಜಿಲ್ಲೆ ವಿವಿಧೆಡೆ ರಥಯಾತ್ರೆ ಮೆರವಣಿಗೆ, ಸಭೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ನೀಡಿದರೆ ಉನ್ನತ ಹುದ್ದೆಗಳ ಭರ್ತಿ, ಮಾದಿಗ ಸಮುದಾಯಕ್ಕೆ ಸರ್ಕಾರದ ಸೌಲಭ್ಯ ಪಡೆಯಲು ಅನುಕೂಲವಾಗುವ ಹಿನ್ನೆಲೆ ಒಳಮೀಸಲಾತಿ ಜಾಗೃತಿಗಾಗಿ ರಾಜ್ಯಾದ್ಯಂತ ಕೈಗೊಂಡ ಕ್ರಾಂತಿಕಾರಿ ರಥಯಾತ್ರೆ ಮೇ 17ರಂದು ದಾವಣಗೆರೆಗೆ ಬರಲಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸಿ.ಬಸವರಾಜ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 17ರಂದು ದಾವಣಗೆರೆಗೆ ಬರುವ ಕ್ರಾಂತಿಕಾರಿ ರಥಯಾತ್ರೆ ಮೇ 18ರ ಬೆಳಗ್ಗೆ 10.30ರಿಂದ ಗಾಂಧಿ ನಗರದ ಡಾ.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ರಾಜಬೀದಿಗಳಲ್ಲಿ ಮೆರವಣಿಗೆ ಸಾಗಲಿದೆ. ನಂತರ ಗಾಂಧಿ ನಗರ ವೃತ್ತದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.ಅದೇ ಮಧ್ಯಾಹ್ನ 1.30ಕ್ಕೆ ಹದಡಿ ರಸ್ತೆಯ ಡಾ.ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಮಧ್ಯಾಹ್ನ 2.30ಕ್ಕೆ ಶಿರಮಗೊಂಡನಹಳ್ಳಿಗೆ ಮೆರವಣಿಗೆಯಲ್ಲಿ ಸಾಗಿ ಬಹಿರಂಗ ಸಭೆ, 3 ಗಂಟೆಗೆ ಹರಿಹರ ನಗರ, ಸಂಜೆ 5.30ಕ್ಕೆ ಮಲೆಬೆನ್ನೂರಿನಲ್ಲಿ ಮೆರವಣಿಗೆ, ಸಭೆ ನಡೆಯಲಿದೆ. ರಾತ್ರಿ ಹೊನ್ನಾಳಿಗೆ ತೆರಳಿ ಮೇ 19ರಂದು ಬೆಳಗ್ಗೆ 10.30ಕ್ಕೆ ಹೊನ್ನಾಳಿ ಟಿ.ಬಿ. ವೃತ್ತದಲ್ಲಿ ಮೆರವಣಿಗೆ, ಎ.ಕೆ.ಕಾಲನಿ, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಭೆ ನಡೆಸಲಿದೆ. ಮಧ್ಯಾಹ್ನ 1 ಗಂಟೆಗೆ ನ್ಯಾಮತಿ-ಸುರಹೊನ್ನೆ ಮೆರವಣಿಗೆ, ಸಂಜೆ 5.30ಕ್ಕೆ ಚನ್ನಗಿರಿಯಲ್ಲಿ ಮೆರವಣಿಗೆ, ಎ.ಕೆ. ಕಾಲನಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.
20ರಂದು ಬೆಳಗ್ಗೆ 10.30ಕ್ಕೆ ಸಂತೇಬೆನ್ನೂರಲ್ಲಿ ಮೆರವಣಿಗೆ ಸಭೆ, ಮಧ್ಯಾಹ್ನ 2.30ಕ್ಕೆ ಎಲೆಬೇತೂರು, ಬಿಳಿಚೋಡು ಮಾರ್ಗ, ಸಂಜೆ 4.30ಕ್ಕೆ ಜಗಳೂರಿಗೆ ತೆರಳಿ, ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಸಭೆ ನಡೆಸಲಾಗುವುದು. ಬಳಿಕ ಚಿತ್ರದುರ್ಗ ಜಿಲ್ಲೆ ಕಡೆಗೆ ರಥಯಾತ್ರೆ ಪಯಣ ಬೆಳಸಲಿದೆ. ಜೂ.9ರಂದು ಬೆಂಗಳೂರಿನಲ್ಲಿ ರಾಜ್ಯ ಸಂಚಾಲಕ ಬಿ.ಆರ್. ಭಾಸ್ಕರ ಪ್ರಸಾದ್ ನೇತೃತ್ವದಲ್ಲಿ ಸಂಘರ್ಷ ಸಮಾವೇಶ ನಡೆಸಲಾಗುವುದು ಎಂದು ವಿವರಿಸಿದರು.ಸಮಿತಿ ಜಿಲ್ಲಾ ಸಂಚಾಲಕ ಹೆಗ್ಗೆರೆ ರಂಗಪ್ಪ ಮಾತನಾಡಿ, ಸದಾಶಿವ ಆಯೋಗದ ವರದಿ ನೆಪ ಹೇಳಿ, ಸರ್ಕಾರ ಪರಿಶಿಷ್ಟ ಜಾತಿಗೆ ಮೀಸಲಾತಿ ನೀಡುವ ಬದಲು ನುಣುಚಿಕೊಳ್ಳುತ್ತಿದೆ. ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸಲು ನ್ಯಾ.ನಾಗಮೋಹನ ದಾಸ್ ಆಯೋಗ ಕೈಗೊಂಡ ಸಮೀಕ್ಷೆಯಲ್ಲಿ ತ್ವರಿತ, ನಿಖರ ದತ್ತಾಂಶ ಸಂಗ್ರಹಿಸುವ ಕೆಲಸ ಆಗಬೇಕು. ಕೆಳಹಂತದಲ್ಲಿ ಸಮೀಕ್ಷೆಯಲ್ಲಿ ಸಮಸ್ಯೆ ಇದ್ದು, ಮಾದಿಗ ಸಮುದಾಯವನ್ನು ಆದಿ ಕರ್ನಾಟಕ, ಹರಿಜನ ಅಂತಾ ಹೇಳುತ್ತಿದ್ದಾರೆ. ಇದರಿಂದಲೂ ಸಮಾಜಕ್ಕೆ ಅನ್ಯಾಯವಾಗುತ್ತಿದೆ. ಹೊನ್ನಾಳಿ ತಾಲೂಕಿನ ಕುಳಘಟ್ಟೆಯದಲ್ಲಿ ಆದಿ ಕರ್ನಾಟಕವೆಂದು ದಾಖಲಿಸಿದ್ದು, ಸಮೀಕ್ಷೆ ಕಾಲಾವಧಿಯನ್ನು ಸರ್ಕಾರ ಮತ್ತಷ್ಟು ದಿನಗಳ ಕಾಲ ವಿಸ್ತರಿಸಬೇಕು. ಜಾತಿಗಣತಿ ಅಧಿಕಾರಿ, ಸಿಬ್ಬಂದಿಗೆ ಆಯೋಗ, ಜಿಲ್ಲಾಡಳಿತ ಸೂಕ್ತ ತರಬೇತಿ ನೀಡಬೇಕು ಎಂದು ಆಗ್ರಹಿಸಿದರು.
ಮುಖಂಡ ಡಿ.ಹನುಮಂತಪ್ಪ ಮಾತನಾಡಿ, ಹರಿಹರದ ಎಸ್‌ಸಿ ಕಾಲನಿಯಲ್ಲಿ ಬೂತ್‌ಗೊಬ್ಬ ಗಣತಿದಾರರಿದ್ದರೂ, 300-400 ಮನೆಗಳನ್ನು ಗಣತಿಯಿಂದ ಬಿಡಲಾಗಿದೆ. ಪ್ರತಿ ಮನೆಗೆ ಕನಿಷ್ಠ 30 ನಿಮಿಷ ಬೇಕು. ಆದರೆ, ಗಣತಿದಾರರು ಸರ್ವರ್ ಸಮಸ್ಯೆ ನೆಪ ಹೇಳುತ್ತಿದ್ದಾರೆ. ಹರಿಹರದಲ್ಲಿ ನಿನ್ನೆವರೆಗೆ ಶೇ.60ರಷ್ಟು ಗಣತಿಯಾಗಿದ್ದು, ಉಳಿದ ಶೇ.40ರಷ್ಟು ಕುಟುಂಬಗಳನ್ನು 3 ದಿನದಲ್ಲಿ ಸಮೀಕ್ಷೆ ಕೈಗೊಳ್ಳಲು ಸಾಧ್ಯವೇ? ಇನ್ನಾದರೂ ಹೆಚ್ಚುವರಿ ಅಧಿಕಾರಿ, ಸಿಬ್ಬಂದಿಯನ್ನು ಗಣತಿ ಕಾರ್ಯಕ್ಕೆ ನೇಮಿಸಬೇಕು ಎಂದರು.ಸಮಾಜದ ಮುಖಂಡರಾದ ಎಚ್.ಸಿ. ಮಲ್ಲಪ್ಪ, ಎಸ್.ಎಚ್. ದೊಡ್ಡೇಶ, ಎಚ್.ಸಿ. ಸಿದ್ದೇಶ ಬಾತಿ, ಮಲ್ಲೇಶ ಚಿಕ್ಕನಹಳ್ಳಿ, ನಾಗರಾಜ ಚಿಕ್ಕನಹಳ್ಳಿ, ನವಿಲೇಹಾಳು ಮಹಾಂತೇಶ, ಗಣೇಶ, ದುಗ್ಗಪ್ಪ ಇತರರು ಇದ್ದರು.
- - -(ಬಾಕ್ಸ್) * ಎಸ್‌ಸಿ ಮೀಸಲಾತಿ ಕಸಿಯಬೇಡಿ: ಹೆಗ್ಗೆರೆ ರಂಗಪ್ಪ ಪರಿಶಿಷ್ಟ ಜಾತಿಯ ನೈಜ ಬೇಡ ಜಂಗಮರಲ್ಲದಿದ್ದರೂ, ವೀರಶೈವ ಜಂಗಮರು ಪರಿಶಿಷ್ಟ ಜಾತಿಯ ಜಾತಿಗಣತಿಯಲ್ಲಿ ಬೇಡ ಅಂತಾ ಬರೆಸುತ್ತಿದ್ದಾರೆ. ವೀರಶೈವ ಜಂಗಮರು ಬೇಡ ಜಂಗಮರೆಂದು ಹೇಳಿಕೊಂಡರೂ, ಅಂತರ್ಜಾತಿ ವಿವಾಹ ಇಲ್ಲ. ದೇವದಾಸಿ ಆಚರಣೆಯೂ ಆ ಸಮುದಾಯದಲ್ಲಿಲ್ಲ, ಮಾಂಸಾಹಾರಿಗಳಲ್ಲ. ವಾಸ್ತವ ಹೀಗಿದ್ದರೂ, ಪರಿಶಿಷ್ಟ ಜಾತಿ ಮೀಸಲಾತಿ ಕಸಿಯಲು ಯತ್ನಿಸುತ್ತಿದ್ದಾರೆ. ಒಂದುವೇಳೆ ಹೀಗಾದರೆ, ನಿಜವಾದ ಪರಿಶಿಷ್ಟ ಜಾತಿ ಜನರು ಗ್ರಾಪಂ ಚುನಾವಣೆಯಲ್ಲೂ ಗೆಲ್ಲುವುದಕ್ಕೆ ಸಾಧ್ಯವಿಲ್ಲ.
- ಹೆಗ್ಗೆರೆ ರಂಗಪ್ಪ, ಸಂಚಾಲಕ, ಡಿಎಸ್‌ಎಸ್- - -
-15ಕೆಡಿವಿಜಿ4, 5.ಜೆಪಿಜಿ:ದಾವಣಗೆರೆಯಲ್ಲಿ ಗುರುವಾರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸಿ.ಬಸವರಾಜ, ಸಂಚಾಲಕ ಹೆಗ್ಗೆರೆ ರಂಗಪ್ಪ ಸುದ್ದಿಗೋಷ್ಢಿಯಲ್ಲಿ ಮಾತನಾಡಿದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))