ಪ್ರೊಕಬಡ್ಡಿ ಆವೃತ್ತಿಗಳಿಂದ ದೇಶದ ಕಬಡ್ಡಿಯಲ್ಲಿ ಕ್ರಾಂತಿಕಾರಿ ಬದಲಾವಣೆ: ಡಾ. ನಿಡಗುಂದಿ

| Published : Oct 28 2024, 01:09 AM IST / Updated: Oct 28 2024, 01:10 AM IST

ಪ್ರೊಕಬಡ್ಡಿ ಆವೃತ್ತಿಗಳಿಂದ ದೇಶದ ಕಬಡ್ಡಿಯಲ್ಲಿ ಕ್ರಾಂತಿಕಾರಿ ಬದಲಾವಣೆ: ಡಾ. ನಿಡಗುಂದಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಪ್ರೊಕಬಡ್ಡಿ ಆವೃತ್ತಿಗಳ ಆಯೋಜನೆ ಬಳಿಕ ಕಬಡ್ಡಿ ಕ್ರೀಡೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಕಂಡಿದೆ. ಕ್ರೀಡೆಗಳಲ್ಲಿ ಜಯ ಸಾಧಿಸಿದಂತೆ ಕಬಡ್ಡಿ ಕ್ರೀಡಾಪಟುಗಳೂ ಸಹ ತಮ್ಮ ವೈಯಕ್ತಿಕ ಬದುಕಿನಲ್ಲಿಯೂ ಸಹ ಗೆಲ್ಲಬೇಕು, ಇಲ್ಲದಿದ್ದರೇ ಅವರ ಬದುಕು ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿಯಲಿದೆ ಎಂದು ಬಿಇಎಸ್ ಕಾಲೇಜು ಆಡಳಿತ ಮಂಡಳಿ ನಿರ್ದೇಶಕ ಡಾ.ಎಸ್.ಎನ್. ನಿಡಗುಂದಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ: ದೇಶದಲ್ಲಿ ಪ್ರೊಕಬಡ್ಡಿ ಆವೃತ್ತಿಗಳ ಆಯೋಜನೆ ಬಳಿಕ ಕಬಡ್ಡಿ ಕ್ರೀಡೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಕಂಡಿದೆ. ಕ್ರೀಡೆಗಳಲ್ಲಿ ಜಯ ಸಾಧಿಸಿದಂತೆ ಕಬಡ್ಡಿ ಕ್ರೀಡಾಪಟುಗಳೂ ಸಹ ತಮ್ಮ ವೈಯಕ್ತಿಕ ಬದುಕಿನಲ್ಲಿಯೂ ಸಹ ಗೆಲ್ಲಬೇಕು, ಇಲ್ಲದಿದ್ದರೇ ಅವರ ಬದುಕು ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿಯಲಿದೆ ಎಂದು ಬಿಇಎಸ್ ಕಾಲೇಜು ಆಡಳಿತ ಮಂಡಳಿ ನಿರ್ದೇಶಕ ಡಾ.ಎಸ್.ಎನ್. ನಿಡಗುಂದಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಬಿಇಎಸ್ ಬಿಇಎಸ್ ಕಾಲೇಜು ಆವರಣದಲ್ಲಿ ತಮಿಳುನಾಡಿನ ಕೊತ್ತನಕುಳತ್ತೂರ ಎಸ್‌ಆರ್‌ಎಂ ಕ್ರೀಡಾಂಗಣ ದಲ್ಲಿ ಅ. 30ರಿಂದ ಆರಂಭವಾಗಲಿರುವ ದಕ್ಷಿಣ ವಲಯ (ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಪಾಂಡಿಚೇರಿ) ಅಂತರ ವಿಶ್ವವಿದ್ಯಾಲಯಗಳ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ಹಾವೇರಿ ವಿಶ್ವವಿದ್ಯಾಲಯ ತಂಡದ ತರಬೇತಿ ಶಿಬಿರದ ಮುಕ್ತಾಯ ಸಮಾರಂಭ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಕ್ರೀಡೆ ಮತ್ತು ಶಿಕ್ಷಣ ನಾಣ್ಯದ ಎರಡು ಮುಖ:ಭಾರತದ ಮಟ್ಟಿಗೆ ಕ್ರೀಡೆ ಮತ್ತು ಶಿಕ್ಷಣ ನಾಣ್ಯದ ಎರಡು ಮುಖಗಳಿದ್ದಂತೆ, ವಿಶ್ವವಿದ್ಯಾಲಯವು ಪ್ರತಿಭಾನ್ವಿತರನ್ನು ಗುರ್ತಿಸಿ ವಿಶೇಷ ತರಬೇತಿ ನೀಡುವ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸುವ ಸದಿಚ್ಚೆಯನ್ನು ಹೊಂದಿದೆ. ಕಬಡ್ಡಿ ಕ್ರೀಡಾ ಜಗತ್ತಿಗೆ ಕಾಲಿಡುವ ಬಹುತೇಕ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದುಳಿದವರಾಗಿದ್ದು ಕ್ರೀಡಾ ಜಗತ್ತಿಗೆ ಅಪಖ್ಯಾತಿ ಬರದಂತೆ ಅವರ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.

ಪ್ರತಿಭೆಗಳಿಗೆ ಕೊರತೆಯಿಲ್ಲ:ಹಾವೇರಿ ವಿಶ್ವವಿದ್ಯಾಲಯದ ಕ್ರೀಡಾವಿಭಾಗದ ನಿರ್ದೇಶಕ ಸಿ.ಎನ್.ಸೊರಟೂರ ಮಾತನಾಡಿ, ಜಿಲ್ಲೆಯಲ್ಲಿ ಕಬಡ್ಡಿ ಕ್ರೀಡಾ ಪ್ರತಿಭೆಗಳಿಗೆ ಕೊರತೆಯಿಲ್ಲ. ಶಾಲಾ, ಕಾಲೇಜು ಸೇರಿದಂತೆ ಕಬಡ್ಡಿ ಅಸೋಸಿಯೇಶನ್ ಸಹಕಾರದಿಂದ ಕಳೆದ 25 ವರ್ಷಗಳಲ್ಲಿ ಜಿಲ್ಲೆಯ ನೂರಾರು ಕ್ರೀಡಾಪಟುಗಳು ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ್ದು, ಅದರಲ್ಲಿನ ಮೂವರು ಕಬಡ್ಡಿ ಕ್ರೀಡೆಯ ಮೇಲೆ ಡಾಕ್ಟರೇಟ್ ಮಾಡುವ ಮೂಲಕ ಅಭೂತಪೂರ್ವ ಸಾಧನೆ ತೋರಿದ್ಧಾರೆ, ಹೀಗಿರುವಾಗ ಜಿಲ್ಲೆಯ ಕ್ರೀಡಾಪಟುಗಳಿಗೆ ಸೂಕ್ತ ಮಾರ್ಗದರ್ಶನದ ಅವಶ್ಯಕತೆಯಿದ್ದು, ಹಾವೇರಿ ವಿಶ್ವವಿದ್ಯಾಲಯ ಸೇರಿದಂತೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕ್ರೀಡಾಪಟುಗಳು ಭವಿಷ್ಯಕ್ಕಾಗಿ ಸಹಾಯ ಸಹಕಾರ ನೀಡಲು ಬದ್ಧರಾಗಿದ್ದೇವೆ ಎಂದರು. ಇದೇ ಸಂದರ್ಭದಲ್ಲಿ ತಂಡದ ಕ್ರೀಡಾಪಟುಗಳಿಗೆ ಹಾವೇರಿ ವಿವಿಯಿಂದ ಸಮವಸ್ತ್ರ ನೀಡುವ ಮೂಲಕ ಬೀಳ್ಕೊಡಲಾಯಿತು, ತಂಡವು ಅ.28 ರಂದು ಪ್ರಯಾಣ ಬೆಳಸಲಿದೆ.

ಸಾಗರದಾಚೆಗೂ ಬ್ಯಾಡಗಿ ಹೆಸರು: ಪ್ರಾಚಾರ್ಯ ಡಾ.ಎಸ್.ಜಿ. ವೈದ್ಯ ಮಾತನಾಡಿ, ಬ್ಯಾಡಗಿಯ ಮಣ್ಣಿನಲ್ಲಿ ಕಬಡ್ಡಿ ಸೇರ್ಪ ಡೆಗೊಂಡಿದೆ ಎಂದರೆ ತಪ್ಪಾಗಲಾರದು ಇಲ್ಲಿನ ರವೀಂದ್ರ ಶೆಟ್ಟಿ ಥೈಲ್ಯಾಂಡ್ ಕಬಡ್ಡಿ ತಂಡಗಳಿಗೆ ತರಬೇತಿ ನೀಡುತ್ತಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದ್ದು ಬ್ಯಾಡಗಿಯ ಹೆಸರನ್ನು ಸಾಗರದಾಚೆಗೂ ತಲುಪಿಸಿದ್ದಾರೆ ಎಂದರು.

ಹಾವೇರಿ ವಿವಿ ತಂಡದ ಕಬಡ್ಡಿ ಕೋಚ್ ಡಾ.ಬಸನಗೌಡ ಲಕ್ಷ್ಮೇಶ್ವರ, ವ್ಯವಸ್ಥಾಪಕ ಶಶಿಧರ ಮಾಗೋಡ, ಉಪನ್ಯಾಸಕರಾದ, ಎನ್.ಎಸ್. ಪ್ರಶಾಂತ, ಸುರೇಶಕುಮಾರ ಪಾಂಗಿ, ಪ್ರಭುಲಿಂಗ ದೊಡ್ಮನಿ, ಎಂ.ಆರ್.ಕೋಡಿಹಳ್ಳಿ, ಮಹಿಳಾ ಕಬಡ್ಡಿ ಕೋಚ್ ಮಂಜುಳ ಭಜಂತ್ರಿ, ಸಂತೋಷ ಉದ್ಯೋಗಣ್ಣನವರ, ಪ್ರಕಾಶ ತಾವರಗಿ ಸೇರಿದಂತೆ ಇನ್ನಿತರರಿದ್ದರು.