ರೇವಾ ವಿವಿಯ ಹೊಸ ಬ್ಯಾಚ್‌ ವಿದ್ಯಾರ್ಥಿಗಳಿಗೆ ಸ್ವಾಗತ ಸಂಭ್ರಮ

| Published : Jul 26 2025, 01:30 AM IST

ಸಾರಾಂಶ

ಕಾರ್ಯಕ್ರಮದಲ್ಲಿ ಉಪಕುಲಪತಿ ಡಾ.ಸಂಜಯ್‌ ಆರ್‌.ಚಿಟ್ನಿಸ್‌, ಕುಲಸಚಿವ ಡಾ.ಕೆ.ಎಸ್‌.ನಾರಾಯಣಸ್ವಾಮಿ ಸೇರಿ ವಿವಿಯ ಅಧಿಕಾರಿಗಳು, ಬೋಧಕರು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರತಿಷ್ಠಿತ ರೇವಾ ವಿಶ್ವವಿದ್ಯಾಲಯದಲ್ಲಿ ತಾಂತ್ರಿಕೇತರ ಕೋರ್ಸುಗಳಿಗೆ 2025-26ನೇ ಸಾಲಿನಲ್ಲಿ ಪ್ರವೇಶ ಪಡೆದಿರುವ ಹೊಸ ಬ್ಯಾಚ್‌ ವಿದ್ಯಾರ್ಥಿಗಳನ್ನು ಸ್ವಾಗತ ಕಾರ್ಯಕ್ರಮದ ಮೂಲಕ ಬರಮಾಡಿಕೊಳ್ಳಲಾಯಿತು.

ವಿವಿಯ ಸೌಗಂಧಿಕಾ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ವಾತಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಬ್ಲ್ಯುಎಲ್‌ಡಿಡಿ ಪ್ರೈ.ಲಿ.ನ ಸಿಇಒ ಅರಿಹಂತ್‌ ಜೈನ್‌, ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯ ಮತ್ತು ಮರೆಯಲು ಅಸಾಧ್ಯವಾದದ್ದು. ಈ ಅವಧಿಯಲ್ಲಿ ತಮಗೆ ಬರುವ ಪ್ರತಿಯೊಂದು ಅವಕಾಶವನ್ನೂ ಸಮರ್ಥವಾಗಿ ಬಳಸಿಕೊಳ್ಳಬೇಕು. ತರಗತಿ ಪಾಠಗಳು ಮಾತ್ರವಲ್ಲದೆ, ಆಸಕ್ತಿದಾಯಕ ಕ್ರೀಡೆ, ಕ್ಷೇತ್ರದಲ್ಲಿನ ಸ್ಪರ್ಧೆ, ತರಬೇತಿ, ಸಂಶೋಧನೆಯಲ್ಲೂ ತೊಡಗಿಸಿಕೊಳ್ಳಬೇಕು. ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡಾಗ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಸಲಹೆ ನೀಡಿದರು.

ಪದವಿ ಪಡೆದಾಕ್ಷಣ ಓದು ನಿಲ್ಲುವುದಿಲ್ಲ. ಕಲಿಕೆ ನಿರಂತರವಾಗಿದ್ದಾಗ ಮಾತ್ರ ಜಾಗತಿಕ ಬದಲಾವಣೆ ಹಾಗೂ ಸ್ಪರ್ಧೆಗಳನ್ನು ಎದುರಿಸುತ್ತಾ ಸಾಗಲು ಸಾಧ್ಯ. ಉದ್ಯೋಗಾವಕಾಶಗಳಿಗೆ ಇನ್ನು ಮುಂದೆ ನಿಮ್ಮ ರೆಸ್ಯೂಮ್‌ಗಳು ಸಾಲುವುದಿಲ್ಲ. ಜ್ಞಾನ, ಮನಸ್ಥಿತಿ ಮತ್ತು ಅನುಭವಗಳು ಅಗತ್ಯ. ಕೃತಕ ಬುದ್ಧಿಮತ್ತೆ(ಎಐ) ಕಾಲದಲ್ಲಿ ನೀವಿದ್ದು ವೈಯಕ್ತಿಕ ಬ್ರಾಂಡ್‌ ಕಟ್ಟುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಮಾರ್ವಾಡಿ ವಿಶ್ವವಿದ್ಯಾಲಯದ ಟ್ರಸ್ಟಿ ಜೀತ್‌ ಮಾರ್ವಾಡಿ ಮಾತನಾಡಿ, ಹಿಂದೆ ಗುರು ಮತ್ತು ಮುಂದೆ ಗುರಿ ಇದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ. ಮನಸ್ಸು ಎನ್ನುವುದು ಮರ್ಕಟ ಇದ್ದಂತೆ. ವ್ಯಾಸಂಗ, ವೃತ್ತಿ, ಸಾಧನೆ, ಗುರಿ ವಿಚಾರಗಳಲ್ಲಿ ಗೊಂದಲ ಬೇಡ. ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸ್ಪಷ್ಟತೆ ಇಟ್ಟುಕೊಂಡು ಸಾಗಿದರೆ ಉತ್ತಮ ಸಾಧನೆ ಮಾಡಲು ಸಾಧ್ಯವಿದೆ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ರೇವಾ ವಿವಿ ಕುಲಪತಿ ಡಾ.ಪಿ.ಶಾಮರಾಜು ಮಾತನಾಡಿ, ರೇವಾ ವಿವಿಯು ವಿದ್ಯಾರ್ಥಿಗಳಲ್ಲಿ ಚಿಂತನಾಶೀಲತೆ ಬೆಳೆಸುವ, ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತದೆ. ಎಜುಕೇಟ್‌ ಟು ಎಂಟರ್‌ಪ್ರೈಸ್‌ ತತ್ವದ ಮೂಲಕ ಪ್ರತಿ ವಿದ್ಯಾರ್ಥಿಯೂ ವ್ಯಾಸಂಗದ ಬಳಿಕ ಉತ್ತಮ ಉದ್ಯೋಗಾವಕಾಶ ಪಡೆಯುವ ಅಥವಾ ತಾನೇ ಉದ್ಯಮಿಯಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ತಯಾರಿಸುತ್ತದೆ. ಅವರ ಗುರಿ ಸಾಧನೆಗೆ ಸದಾ ಅಗತ್ಯ ಸಹಕಾರ ನೀಡಲಿದೆ ಎಂದರು.