ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಆರ್‌ಎಫ್‌ಒ ಕಾಂತರಾಜ್

| Published : Oct 25 2024, 12:46 AM IST

ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಆರ್‌ಎಫ್‌ಒ ಕಾಂತರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಕೆರೆ ಅಭಿವೃದ್ಧಿ ಕಾಮಗಾರಿ ಸಂಬಂಧ ಲಂಚ ಸ್ವೀಕರಿಸುವಾಗ ವಲಯ ಅರಣ್ಯಾಧಿಕಾರಿಯೊಬ್ಬರು ಲೋಕಾಯುಕ್ತರ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ಹನೂರು ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ಜರುಗಿದೆ.

ಕನ್ನಡಪ್ರಭ ವಾರ್ತೆ ಹನೂರು

ಕೆರೆ ಅಭಿವೃದ್ಧಿ ಕಾಮಗಾರಿ ಸಂಬಂಧ ಲಂಚ ಸ್ವೀಕರಿಸುವಾಗ ವಲಯ ಅರಣ್ಯಾಧಿಕಾರಿಯೊಬ್ಬರು ಲೋಕಾಯುಕ್ತರ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ಹನೂರು ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ಜರುಗಿದೆ.ತಾಲೂಕಿನ ಕೌದಳ್ಳಿಯ ವಲಯ ಅರಣ್ಯಾಧಿಕಾರಿ ಕಾಂತರಾಜ್ ಚೌಹಾಣ್ ಲೋಕಾಯುಕ್ತರ ದಾಳಿಗೆ ಸಿಕ್ಕಿ ಬಿದ್ದಿರುವ ಅಧಿಕಾರಿಯಾಗಿದ್ದಾರೆ. ಮಾರ್ಟಳ್ಳಿ ಗ್ರಾಪಂ ಸದಸ್ಯ ಜೋಸೆಫ್ ಅನ್ಬಳಗನ್ ಅವರು ಮಹತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಾಲ್ ರೋಡ್ ಅರಣ್ಯ ವ್ಯಾಪ್ತಿಯಲ್ಲಿ ಮೋರನೂರು ಕೆರೆ ಅಭಿವೃದ್ಧಿಪಡಿಸಲು ಅನುಮತಿ ನೀಡುವಂತೆ ವಲಯ ಅರಣ್ಯಾಧಿಕಾರಿ ಕಾಂತರಾಜ್ ಅವರಿಗೆ ಮನವಿ ಮಾಡಿದ್ದರು. ಕೆರೆ ಅಭಿವೃದ್ಧಿಗೆ ಅನುಮತಿ ನೀಡಲು 60 ಸಾವಿರ ರು. ಲಂಚಕ್ಕೆ ವಲಯ ಅರಣ್ಯಾಧಿಕಾರಿ ಕಾಂತರಾಜು ಚೌಹಾಣ್ ಒತ್ತಾಯಿಸಿದ್ದರಿಂದ ಬೇಸತ್ತ ಗ್ರಾಪಂ ಸದಸ್ಯ ಜೋಸೆಫ್ ಅನ್ಬಳಗನ್ ಲೋಕಾಯುಕ್ತರ ಮೊರೆ ಹೋದರು.

ಲೋಕಾಯುಕ್ತ ಡಿವೈಎಸ್ಪಿ ಮ್ಯಾಥ್ಯೂ ಥಾಮಸ್ ಮಾರ್ಗದರ್ಶನದಲ್ಲಿ‌ ಇನ್ಸ್‌ಪೆಕ್ಟರ್ ಶಶಿಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ಕೌದಳ್ಳಿಯಲ್ಲಿ ಅರಣ್ಯ ಇಲಾಖೆ ಕಚೇರಿಯಲ್ಲಿ ಮಾರ್ಟಳ್ಳಿ ಗ್ರಾಪಂ ಸದಸ್ಯ ಜೋಸೇಫ್ ಅನ್ಬಳಗನ್ ಅವರಿಂದ ನರೇಗಾ ಯೋಜನೆಯಡಿ ಮೋರನೂರು ಕೆರೆ ಅಭಿವೃದ್ಧಿ ಕಾಮಗಾರಿ ಮಾಡುವ ಸಂಬಂಧ ಅನುಮತಿ ನೀಡಲು 60 ಸಾವಿರ ರು.ಗಳ ಲಂಚವನ್ನು ಬೇಡಿಕೆಯಾಗಿ ವಲಯ ಅರಣ್ಯಾಧಿಕಾರಿ ಕಾಂತರಾಜ್ ಚೌಹಾಣ್ ( ಪ್ರಭಾರ RFO ಕೌದಳ್ಳಿ ವಲಯ) ಅವರು ಸ್ವೀಕರಿಸುತ್ತಿದ್ದಾಗ ದಾಳಿ ನಡೆಸಿ ಹಣ ಮತ್ತು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಮುಖ್ಯಪೇದೆಗಳಾದ ಮಹಾಲಿಂಗಸ್ವಾಮಿ, ಕುಮಾರ್ ಆರಾದ್ಯ, ಮನೋರಂಜನ್, ಪೇದೆಗಳಾದ ಗೌತಮ್, ಗುರುಪ್ರಸಾದ್, ಮಹದೇವಸ್ವಾಮಿ, ಶ್ರೀನಿವಾಸ್ ಭಾಗವಹಿಸಿದ್ದರು.

ಮಲೆಮಹದೇಶ್ವರ ಬೆಟ್ಟದ ಪಾಲಾರ್ ಡಿಆರ್‌ಎಫ್ ಗ್ರಾಮಸ್ಥರಿಂದ ಹಣಕ್ಕೆ ಪೀಡಿಸುತ್ತಿದ್ದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿ ಕಳೆದ ತಿಂಗಳು ಓರ್ವ ಡಿಆರ್‌ಎಫ್ ಸಹ ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ಬೆನ್ನಲ್ಲೇ ಮತ್ತೊಂದು ಪ್ರಕರಣ ದಾಖಲಾಗಿದೆ.