ಸಾರಾಂಶ
ತೀರ್ಥಹಳ್ಳಿ: ರಾಷ್ಟ್ರೀಯ ಪಕ್ಷವಾಗಿ ಹಿಂದೂ ಧಾರ್ಮಿಕ ಭಾವನೆಗಳ ಮೇಲೆ ನಡೆದಿರುವ ದೌರ್ಜನ್ಯವನ್ನು ಸಹಿಸಲಾಗದು. ಧರ್ಮಸ್ಥಳ ಚಲೋ ಕರೆಗೆ ರಾಜ್ಯವ್ಯಾಪಿ ಸಹಸ್ರಾರು ಜನರು ಬಂದಿದ್ದು ನಮ್ಮ ಹೋರಾಟ ಯಶಸ್ವಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.ಮಂಗಳವಾರ ಧರ್ಮಸ್ಥಳದಿಂದ ಶಿಕಾರಿಪುರಕ್ಕೆ ಹೋಗುವ ಮಾರ್ಗದಲ್ಲಿ ತೀರ್ಥಹಳ್ಳಿ ಪಟ್ಟಣ ಸಮೀಪದ ಮೇಲಿನಕುರುವಳ್ಳಿ ವಿದ್ಯಾಗಣಪತಿ ದೇವರಿಗೆ ಪೂಜೆ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿ, ಅಸಂಖ್ಯಾತ ಭಕ್ತರನ್ನು ಹೊಂದಿರುವ ಧರ್ಮಸ್ಥಳದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದವರೆಗೂ ನಡೆದಿರುವ ಅಪಪ್ರಚಾರವನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇದನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದರು.ಶ್ರೀ ಕ್ಷೇತ್ರದ ವಿರುದ್ಧ ನಡೆದಿರುವ ಷಡ್ಯಂತ್ರವನ್ನು ತಡೆಯುವಲ್ಲಿ ವಿಫಲವಾಗಿರುವ ಸರ್ಕಾರಕ್ಕೆ ಎಚ್ಚರ ನೀಡುವ ಕೆಲಸ ಮಾಡಿದ್ದೇವೆ. ಮತ್ತು ಒಂದು ರಾಷ್ಟ್ರೀಯ ಪಕ್ಷವಾಗಿ ಇದನ್ನು ನೋಡಿ ಕಣ್ಣು ಮುಚ್ಚಿ ಕೂರಲು ಸಾಧ್ಯವಿಲ್ಲ. ಹಿಂದೂಗಳನ್ನು ಕೆಣಕದೇ ದುಷ್ಟ ಷಡ್ಯಂತರವನ್ನು ನಿಯಂತ್ರಿಸುವಂತೆ ಆಡಳಿತದ ಚುಕ್ಕಾಣಿ ಹಿಡಿದವರಿಗೆ ಮಂಜುನಾಥ ಸ್ವಾಮಿ ಸಧ್ಬುದ್ದಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ನುಡಿದರು.ಸೌಜನ್ಯ ಹತ್ಯೆ ನಡೆದು ಹನ್ನೆರಡು ವರ್ಷಗಳೇ ಸಂದಿದ್ದರೂ ಆ ಕುಟುಂಬಕ್ಕೆ ನ್ಯಾಯ ದೊರಕದಿರುವುದು ವಿಷಾದನೀಯ ಸಂಗತಿಯಾಗಿದೆ. ಆ ಕುಟುಂಬದ ನೋವಿನೊಂದಿಗೆ ನಾವುಗಳೂ ಭಾಗಿಯಾಗಿದ್ದೇವೆ. ಸೋಮವಾರ ಸೌಜನ್ಯ ಕುಟುಂಬಕ್ಕೆ ತೆರಳಿ ಸಾಂತ್ವನ ಹೇಳಿರುವುದಾಗಿಯೂ ತಿಳಿಸಿದರು.ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ಕುಕ್ಕೆ ಪ್ರಶಾಂತ್ ಮುಂತಾದ ಬಿಜೆಪಿ ಕಾರ್ಯಕರ್ತರು ಇದ್ದರು.