ಮಾನವೀಯತೆಗಿಂತ ದೊಡ್ಡ ತತ್ವ ಬೇರೊಂದಿಲ್ಲ: ವಿನಯ್ ಗುರೂಜಿ

| Published : Jan 02 2025, 12:32 AM IST

ಮಾನವೀಯತೆಗಿಂತ ದೊಡ್ಡ ತತ್ವ ಬೇರೊಂದಿಲ್ಲ: ವಿನಯ್ ಗುರೂಜಿ
Share this Article
  • FB
  • TW
  • Linkdin
  • Email

ಸಾರಾಂಶ

ಜೀವನದಲ್ಲಿ ನಮ್ಮ ಮಾತುಗಳು ಕೃತಿಯಾಗಬೇಕು. ಭಾಷಣಗಳು ಪರಿವರ್ತನೆಗೆ ಕಾರಣವಾಗಬೇಕು. ಪ್ರಪಂಚದಲ್ಲಿ ಮಾನವೀಯತೆಗಿಂತ ದೊಡ್ಡ ತತ್ವ ಬೇರೊಂದಿಲ್ಲ ಎಂದು ಗೌರಿಗದ್ದೆ ದತ್ತಾಶ್ರಮದ ದತ್ತಾವಧೂತ ವಿನಯ್ ಗುರೂಜಿ ಹೇಳಿದರು. ಬಾಳೆಹೊನ್ನೂರಿನಲ್ಲಿ ಸೌಹಾರ್ದ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕ್ರೈಸ್ತ ಜಯತಿ, ಹೊಸ ವರ್ಷದ ಅಂಗವಾಗಿ ಸೌಹಾರ್ದ ಮಹೋತ್ಸವ । ಸಾಧಕರಿಗೆ ಸನ್ಮಾನ

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಜೀವನದಲ್ಲಿ ನಮ್ಮ ಮಾತುಗಳು ಕೃತಿಯಾಗಬೇಕು. ಭಾಷಣಗಳು ಪರಿವರ್ತನೆಗೆ ಕಾರಣವಾಗಬೇಕು. ಪ್ರಪಂಚದಲ್ಲಿ ಮಾನವೀಯತೆಗಿಂತ ದೊಡ್ಡ ತತ್ವ ಬೇರೊಂದಿಲ್ಲ ಎಂದು ಗೌರಿಗದ್ದೆ ದತ್ತಾಶ್ರಮದ ದತ್ತಾವಧೂತ ವಿನಯ್ ಗುರೂಜಿ ಹೇಳಿದರು.

ಪಟ್ಟಣದ ವಿಜಯಮಾತೆ ಚರ್ಚ್ ವತಿಯಿಂದ ಕ್ರೈಸ್ತ ಜಯಂತಿ ಹಾಗೂ ಹೊಸ ವರ್ಷದ ಅಂಗವಾಗಿ ಆಯೋಜಿಸಿದ್ದ ಸೌಹಾರ್ದ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೈಬಲ್, ಕುರಾನ್, ಭಗವದ್ಗೀತೆಗಳು ಪ್ರಪಂಚದಲ್ಲಿಯೇ ಶ್ರೇಷ್ಠ ಗ್ರಂಥಗಳಾಗಿದ್ದು, ಇವುಗಳನ್ನು ಓದಿದವರು ಜೀವನದಲ್ಲಿ ಬದಲಾಗಲಿದ್ದಾರೆ. ಈ ಮೂರೂ ಗ್ರಂಥಗಳು ಮನುಷ್ಯತ್ವವನ್ನೇ ಹೇಳಿವೆ. ಕಲಿಯುಗದಲ್ಲಿ ಸಂಘ, ಸಂಘಟನೆ ಮುಖ್ಯವಾಗಿದ್ದು, ನಾವುಗಳು ಮಸೀದಿ, ಮಂದಿರ, ಚರ್ಚ್ಗಳಲ್ಲಿ ಸಾಮೂಹಿಕವಾಗಿ ಮಾಡುವ ಪ್ರಾರ್ಥನೆಗಳು ಇಡೀ ಊರನ್ನೇ ಬದಲು ಮಾಡಲಿದೆ ಎಂದು ಹೇಳಿದರು.

ಇಂದು ವ್ಯತ್ಯಾಸಗಳು ಇರುವುದು ನಮ್ಮ ಮನಸ್ಸಿನಲ್ಲಾಗಿದ್ದು, ಮನಸ್ಸಿನಲ್ಲಿನ ಆಧ್ಯಾತ್ಮಿಕತೆಯು ಕಡಿಮೆಯಾಗುತ್ತಿರುವುದು ವಿಷಾದನೀಯವಾಗಿದೆ. ಸಮಾಜದಲ್ಲಿ ಕಣ್ಣೀರು ಹಾಕುವವರಲ್ಲಿ ದೇವರ ಸೇವೆಯನ್ನು ನೋಡಬೇಕಿದೆ. ಹೊಟ್ಟೆಯ ಹಸಿವಿಗೆ ಧರ್ಮವಿಲ್ಲವಾಗಿದ್ದು, ಒಂದೇ ಮನಃಸ್ಥಿತಿಯವರು ಒಗ್ಗೂಡಿದಾಗ ಮಾತ್ರ ಮನಸ್ಸಿಗೆ ಸಂತೋಷ ದೊರೆಯಲಿದೆ. ನಮ್ಮ ಬದುಕು, ನಡತೆ ನಮಗೆ ಅರ್ಥವಾಗಬೇಕಿದೆ. ಸಮಾಜದಲ್ಲಿ ಸರ್ಕಾರ ಬರುವ ಮೊದಲು ಧರ್ಮಪೀಠಗಳು ಕೆಲಸ ಮಾಡಿದ್ದು, ಶಿಷ್ಯಂದಿರಿಗಿಂತ ಗುರುಗಳ ಜವಾಬ್ದಾರಿ ಸಮಾಜದಲ್ಲಿ ಹೆಚ್ಚಿದೆ. ಧರ್ಮಗುರುಗಳು ಮೊದಲು ಧರ್ಮವನ್ನು ತಿಳಿಯಬೇಕಿದೆ. ಧರ್ಮಕ್ಕೆ ಯಾವುದೇ ಅವಧಿ ಇಲ್ಲ ಎಂದು ತಿಳಿಸಿದರು.

ಜಯಪುರ ಬದ್ರಿಯಾ ಜುಮಾ ಮಸೀದಿಯ ಧರ್ಮಗುರು ಮೌಲಾನ ಡಿ.ಎ.ಹಸನ್ ಸಖಾಫಿ ಮಾತನಾಡಿ, ಆಧುನೀಕರಣ ಜಗತ್ತು ಹಲವು ಸಮಸ್ಯೆಗಳ ನಡುವೆ ಸಿಲುಕಿದ್ದು, ಧರ್ಮಗಳು ಸುಂದರ ನಾಡನ್ನು ಕಟ್ಟಬೇಕಾದ ಸಂದರ್ಭದಲ್ಲಿ ಕಚ್ಚಾಟದಲ್ಲಿ ತೊಡಗಿರುವುದು ವಿಷಾದಕರ. ಸಮಾಜದಲ್ಲಿ ಜ್ಞಾನ, ವಿಜ್ಞಾನ ಅರಿತವರು ವಿನಯವಚಿತರಾಗಿರುತ್ತಾರೆ. ಆದರೆ ಅರ್ಧಂಬರ್ದ ಕಲಿತವರು ಹಾರಾಟ, ಹೋರಾಟ ಮಾಡುತ್ತಾರೆ. ಭಾಷಣಕ್ಕಿಂತ ಬದಲಾಗಿ ಜೀವನದಲ್ಲಿ ಸೌಹಾರ್ದತೆಯನ್ನು ಕಾಣಬೇಕಿದೆ ಎಂದು ಸಲಹೆ ನೀಡಿದರು.

ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ಎಂದಿಗೂ ಜಾತಿ, ಮತ, ಪಂಥ ಬೇಧವನ್ನು ಹೇಳಿಕೊಟ್ಟಿಲ್ಲ. ಸೌಹಾರ್ದತೆ ಎಂದರೆ ಅವರ ಧರ್ಮವನ್ನು ಆರಾಧಿಸುವುದರೊಂದಿಗೆ ಪರ ಧರ್ಮವನ್ನು ಗೌರವಿಸುವುದಾಗಿದೆ. ಭಾರತವು ಎಲ್ಲ ಧರ್ಮದವರದ್ದಾಗಿದ್ದು, ಇದನ್ನು ಉಳಿಸಿಕೊಳ್ಳಲು ಎಲ್ಲರೂ ಒಗ್ಗೂಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಎನ್.ಆರ್.ಪುರ ಸಂತ ಅಂತೋನಿ ಚರ್ಚಿನ ಧರ್ಮಗುರು ವಿನ್ಸೆಂಟ್ ಡಿಸೋಜಾ ಮಾತನಾಡಿ, ಯಾವ ಧರ್ಮ ಎಲ್ಲ ಧರ್ಮವನ್ನು ಗೌರವಿಸುವುದಿಲ್ಲವೋ ಅದು ನೈಜ ಧರ್ಮವಲ್ಲ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಎಲ್ಲ ಧರ್ಮದ ಗ್ರಂಥಗಳು ಶಾಂತಿ, ಸಹಬಾಳ್ವೆಯನ್ನು ಸಾರಿದ್ದು, ಯಾವುದೇ ದ್ವೇಷ, ಅಸೂಯೆಯನ್ನು ಸಾರಿಲ್ಲ. ಇತಿಹಾಸ ಪರಂಪರೆಯ ದೇಶ ಭಾರತವಾಗಿದ್ದು, ಇಲ್ಲಿ ಕುವೆಂಪುರವರ ನಾಡಗೀತೆಯನ್ನು ಅರ್ಥ ಮಾಡಿಕೊಂಡು ಜೀವನ ಸಾಗಿಸಿದರೆ ಜೀವನ ಸಾರ್ಥಕವಾಗಲಿದೆ. ಕ್ರೈಸ್ತ ಧರ್ಮೀಯರು ಭಾರತದಲ್ಲಿ ಆಸ್ಪತ್ರೆ, ಶಿಕ್ಷಣ ಸಂಸ್ಥೆ, ದೇವಾಲಯ, ಚರ್ಚ್, ವೃದ್ಧಾಶ್ರಮ ಮುಂತಾದವನ್ನು ನಿರ್ಮಿಸಿ ಸಮಾಜಕ್ಕೆ ನೀಡಿದೆ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರವಿ, ಅಣ್ಣಪ್ಪ, ಕ್ಲಿಫರ್ಡ್ ಲಾರೆನ್ಸ್ ಸಿಕ್ವೇರಾ, ಡಾ.ನವೀನ್ ಮಿಸ್ಕಿತ್, ಸಾಲೀಮ್, ಆತೀಫ್, ಸಲೀತ್, ಶರಣಜಿತ್, ಸಣ್ಣೇಗೌಡ, ವಿಶ್ವನಾಥ್, ಸಚಿನ್ ಕುಮಾರ್, ಬಿ.ಎಸ್.ನಾಗರಾಜ್‌ಭಟ್, ಮಹಮ್ಮದ್ ಇಲಿಯಾಸ್, ಫಿಲೋಮಿನಾ ಸೆರಾವೋ, ದುಲ್ಸಿನ್ ತಾವ್ರೋ ಅವರನ್ನು ಸನ್ಮಾನಿಸಲಾಯಿತು.

ವಿಜಯಮಾತೆ ಚರ್ಚ್ ಧರ್ಮಗುರು ಪೌಲ್ ಡಿಸೋಜಾ, ಕಿರಿಯ ಧರ್ಮಗುರು ಕೀರ್ತಿ ಕಿರಣ್, ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ, ಮುಖ್ಯ ಶಿಕ್ಷಕಿ ಸಿಸ್ಟರ್ ಡಯಾನ, ಉದ್ಯಮಿ ಕ್ಲಿಫರ್ಡ್ ಲಾರೆನ್ಸ್ ಸಿಕ್ವೇರಾ, ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ಪ್ರಕಾಶ್ ಪಿಂಟೋ, ಓ.ಡಿ.ಸ್ಟೀಫನ್, ಪ್ರಿನ್ಸಿ, ಅನಿತಾ ಮತ್ತಿತರರು ಹಾಜರಿದ್ದರು.೩೦ಬಿಹೆಚ್‌ಆರ್ ೧:

ಬಾಳೆಹೊನ್ನೂರಿನಲ್ಲಿ ಸೌಹಾರ್ದ ಮಹೋತ್ಸವವನ್ನು ಸರ್ವಧರ್ಮದ ಗುರುಗಳು ಒಗ್ಗೂಡಿ ಉದ್ಘಾಟಿಸಿದರು. ದತ್ತಾವಧೂತ ವಿನಯ್ ಗುರೂಜಿ, ಡಿ.ಎ.ಹಸನ್ ಸಖಾಫಿ, ಇತರರು ಇದ್ದರು.