ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಎರಡು ತಿಂಗಳಲ್ಲಿ ಸೋನಾಮಸೂರಿ 25 ಚೀಲ ಅಕ್ಕಿ ದರ ಕನಿಷ್ಠ 390 ರು.ನಿಂದ 400 ರು.ವರೆಗೆ ಏರಿಕೆ ಕಂಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಎರಡು ತಿಂಗಳಲ್ಲಿ ಸೋನಾಮಸೂರಿ 25 ಚೀಲ ಅಕ್ಕಿ ದರ ಕನಿಷ್ಠ 390 ರು.ನಿಂದ 400 ರು.ವರೆಗೆ ಏರಿಕೆ ಕಂಡಿದೆ.

ಎರಡು ತಿಂಗಳ ಹಿಂದೆ ಯಶವಂತಪುರ ಮಾರುಕಟ್ಟೆಯಲ್ಲಿ 1,430(25 ಕೆ.ಜಿ.ಗೆ) ರುಪಾಯಿ ಇದ್ದ ಅಕ್ಕಿ ಸಗಟು ದರ ಪ್ರಸ್ತುತ 1,820 ರು.ಗೆ ಏರಿಕೆಯಾಗಿದೆ. ಇದೇ ರೀತಿ ಎಲ್ಲಾ ಬಗೆಯ ಅಕ್ಕಿಯ ದರವೂ ವಾರದಿಂದ ಪ್ರತಿನಿತ್ಯ ಏರಿಕೆಯಾಗುತ್ತಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.

ಯಶವಂತಪುರ ಮಾರುಕಟ್ಟೆಗೆ ಪ್ರಮಖ ಮಾರುಕಟ್ಟೆಯಾದ ಆಂಧ್ರಪ್ರದೇಶ, ತಮಿಳುನಾಡು, ರಾಜ್ಯದ ರಾಯಚೂರು, ಸಿಂಧನೂರು, ಸಿರಗುಪ್ಪ ಅಕ್ಕಿ ಗಿರಣಿಗಳಿಂದ ಸಾಮಾನ್ಯವಾಗಿ ಹೆಚ್ಚಿನ ಅಕ್ಕಿ ಆವಕವಾಗುತ್ತದೆ. ಆದರೆ ಈ ಬಾರಿ ಅಕ್ಕಿ ಆವಕ ಕಡಿಮೆಯಾಗುತ್ತಿರುವುದೂ ಬೆಲೆ ಏರಿಕೆಗೆ ಕಾರಣ ಎಂದು ವ್ಯಾಪಾರಿಗಳು ವಿವರಿಸಿದರು.

ರಾಜ್ಯದ ಬಹುತೇಕ ಭಾಗಗಳಿಗೆ ಅಕ್ಕಿ ಪೂರೈಕೆ ಮಾಡುವ ಅಕ್ಕಿಗಿರಣಿಗಳಲ್ಲಿ ದಾಸ್ತಾನು ಕಡಿಮೆಯಾಗುತ್ತಿದೆ. ಈ ಕಾರಣಕ್ಕೆ ಇರುವ ದಾಸ್ತಾನು ದರ ಏರಿಕೆಯಾಗುತ್ತಿದೆ.

ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದ್ದಲ್ಲದೆ, ಪ್ರಮುಖ ಭತ್ತ ಬೆಳೆಯುವ ನೀರಾವರಿ ಭೂಮಿ ಹೊಂದಿರುವ ತುಂಗಭದ್ರಾ ಅಣೆಕಟ್ಟೆಯಿಂದ ಈ ಬಾರಿ ನೀರು ಬಿಡದ ಕಾರಣ ರಾಯಚೂರು, ಸಿಂಧನೂರು, ಸಿರಗುಪ್ಪಗಳಲ್ಲಿ ಭತ್ತ ಬೆಳೆಯಲು ಸಾಧ್ಯವಾಗಿಲ್ಲ. ಈ ಪ್ರದೇಶಗಳಲ್ಲಿ ನವೆಂಬರ್ ತಿಂಗಳಿಗೆ ಭತ್ತ ಕಟಾವಿಗೆ ಬರುತ್ತಿತ್ತು. ಆದರೆ, ಸೆಪ್ಟೆಂಬರ್ ತಿಂಗಳು ಮುಗಿಯುತ್ತಿದ್ದಂತೆ ಭತ್ತಕ್ಕೆ ನೀರು ಕೊಡುವುದಿಲ್ಲ ಎಂಬ ಹೇಳಿಕೆ ಹೊರಬಿದ್ದ ಹಿನ್ನೆಲೆಯಲ್ಲಿ ಅಕ್ಕಿಗಿರಣಿಗಳು ಇರುವ ಅಕ್ಕಿ ದಾಸ್ತಾನು ದರ ಏರಿಸಲು ಆರಂಭಿಸಿವೆ. ವಿಷಯ ತಿಳಿದ ಕೂಡಲೇ ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿಯೂ ಅಕ್ಕಿ ದರ ಏರಿಕೆಯಾಗುತ್ತಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡರು.

ಕಳೆದ 4 ತಿಂಗಳಲ್ಲಿ ನಾಲ್ಕನೇ ಬಾರಿ ಏರಿಕೆ ಕಂಡು ಚಿಲ್ಲರೆ ಮಾರಾಟವಾಗುತ್ತಿರುವ ಅಕ್ಕಿ ಬೆಲೆ ಪ್ರತಿ ಕೆ.ಜಿ.ಗೆ 5 ರಿಂದ 10 ರು. ಹೆಚ್ಚಳವಾಗಿದ್ದು, ಒಂದು ಕೆ.ಜಿ. ಸೋನಾ ಮಸೂರಿ ದರ 88 ರು.ತಲುಪಿದೆ.

-ಬಾಕ್ಸ್-

ತೊಗರಿ ಬೇಳೆ ಬೆಲೆಯೂ ಏರಿಕೆ

ಮಾರುಕಟ್ಟೆಯಲ್ಲಿ ತೊಗರಿ ಬೇಳೆ ಬೆಲೆಯೂ ಏರಿಕೆ ಕಂಡಿದ್ದು, ಕೆ.ಜಿ. ತೊಗರಿ ಬೇಳೆ 110 ರಿಂದ 150 ರು.ಗೆ ಹೆಚ್ಚಾಗಿದೆ. ಕೈಕೊಟ್ಟ ಮುಂಗಾರಿನಿಂದಾಗಿ ಬೇಳೆ ಬೆಲೆಯಲ್ಲೂ ಏರಿಕೆ ಕಂಡು ಗ್ರಾಹಕರು ಪರದಾಡುವಂತಾಗಿದೆ.

-ಬಾಕ್ಸ್-

ಅಕ್ಕಿ ದರ ವಿವರ

ಅಕ್ಕಿಹಿಂದಿನದರ(ಕೆ.ಜಿ)ಈಗಿನ ದರ

ಬಾಸುಮತಿ-105ರು.120 ರು.

ಜೀರಾ ರೈಸ್‌-115ರು.125 ರು.

ರಾಜಮುಡಿ ಅಕ್ಕಿ-125ರು.150 ರು.

-------------

ಸೋನಾ ಮಸೂರಿ ಅಕ್ಕಿ

ತಿಂಗಳುದರ(ಕೆ.ಜಿ.ಗೆ)

ಜುಲೈ55-60

ಆಗಸ್ಟ್‌63 ಸೆಪ್ಟೆಂಬರ್68 ರು.

ಅಕ್ಟೋಬರ್76 ರು.