ಸಾರಾಂಶ
ಬಿಜೆಪಿ ನಗರ ಘಟಕದ ವತಿಯಿಂದ ಬೃಹತ್ ಪ್ರತಿಭಟನೆ । ತನಿಖಾ ತಂಡವನ್ನು ಕೂಡಲೇ ವಜಾಗೊಳಿಸಲು ಒತ್ತಾಯಕನ್ನಡಪ್ರಭ ವಾರ್ತೆ ಶಹಾಪುರ
6077 ಕ್ವಿಂಟಲ್ ಅಕ್ಕಿ ನಾಪತ್ತೆ ಪ್ರಕರಣವನ್ನು ಸಿಐಡಿ ಅಥವಾ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಉಮಾಕಾಂತ್ ಹಳ್ಳೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಬಿಜೆಪಿ ಕಾರ್ಯಕರ್ತರು ಸಿ.ಬಿ. ಕಮಾನದಿಂದ ಬಸವೇಶ್ವರ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಮೆರವಣಿಗೆಯುದ್ದಕ್ಕೂ ಸರ್ಕಾರದ ವಿರುದ್ಧ ಹಾಗೂ ಅಕ್ಕಿ ಆರೋಪಿಗಳನ್ನು ರಕ್ಷಿಸುತ್ತಿರುವ ಸಚಿವ ದರ್ಶನಾಪೂರ್ ರಾಜೀನಾಮೆ ನೀಡಬೇಕೆಂದು ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಎನ್. ರವಿಕುಮಾರ್ ಮಾತನಾಡಿ, ಶಹಾಪುರದಲ್ಲಿ ಇಂತಹ ದೊಡ್ಡಮಟ್ಟದ ಅಕ್ಕಿ ನಾಪತ್ತೆ ಒಂದೇ ಅಲ್ಲ. ಅಕ್ರಮ ಮರಳು ಸಾಗಾಣಿಕೆ, ರಸಗೊಬ್ಬರ ಕಳ್ಳ ಸಾಗಾಣಿಕೆ ಸೇರಿದಂತೆ ಹಲವು ಪ್ರಕರಣಗಳನ್ನು ಸೂಕ್ಷ್ಮತೆಯಿಂದ ನೋಡಿದಾಗ ಇದರಲ್ಲಿ ಈ ಕ್ಷೇತ್ರದ ಪ್ರಮುಖ ನಾಯಕರ ಕೈವಾಡವಿದೆ ಎಂಬ ಅನುಮಾನಗಳು ಬಲವಾಗುತ್ತಿವೆ ಎಂದರು.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕಾರು ತಿಂಗಳಲ್ಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರಾಜ್ಯದಲ್ಲಿ ಹೆಚ್ಚಿರುವ ಭ್ರೂಣಹತ್ಯೆ, ಬೆಳಗಾವಿಯಲ್ಲಿ ನಡೆದ ಅಧಿವೇಶನ ಸಮಯದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿದ ಪ್ರಕರಣ ಇಡೀ ರಾಜ್ಯ ತಲೆತಗ್ಗಿಸುವಂತೆ ಮಾಡಿದೆ. ಈ ಘಟನೆಯನ್ನು ನೋಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹೇಗಿದೆ ಎನ್ನುವುದು ಸಾಮಾನ್ಯ ಜನರಿಗೂ ಅರ್ಥವಾಗುತ್ತದೆ. ಶಹಾಪುರ ಹಲವು ಅಕ್ರಮ ದಂಧೆಯ ಅಡ್ಡೆಯಾಗಿದೆ ಎನ್ನುವುದು ಕಂಡು ಬರುತ್ತಿದೆ.
ಈ ಪ್ರಕರಣದಲ್ಲಿ ಕಳ್ಳನನ್ನು ಹಿಡಿಯಲು ಇನ್ನೊಬ್ಬ ಕಳ್ಳನನ್ನು ನೇಮಿಸಿದಂತಾಗಿದೆ. ದೋ ನಂಬರ್ ವ್ಯಕ್ತಿಗೆ ಪೊಲೀಸರು ಸಮವಸ್ತ್ರದಲ್ಲಿ ಸನ್ಮಾನಿಸಿರುವುದನ್ನು ನೋಡಿದರೆ ನಮಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ. ಪೊಲೀಸರು ಪ್ರಭಾವಿ ವ್ಯಕ್ತಿಗಳ ಗುಲಾಮರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.ಈ ಪ್ರಕರಣದ ಸೂತ್ರಧಾರಿ ಗುರುನಾಥ್ ರೆಡ್ಡಿ ಹಾಗೂ ಮಲ್ಲಿಕ್ ಚಾಮನಾಳ ಇವರನ್ನು ಬಂಧಿಸಬೇಕು. ಈ ಪ್ರಕರಣವನ್ನು ನಾವು ಇಲ್ಲಿಗೆ ಬಿಡುವುದಿಲ್ಲ. ಆಹಾರ ಸಚಿವ ಹಾಗೂ ಉನ್ನತ ಅಧಿಕಾರಿಗೆ ಭೇಟಿ ಮಾಡುತ್ತೇವೆ ಎಂದರು. ಇದನ್ನು ನಿಷ್ಪಕ್ಷಪಾತ ತನಿಖೆಗೆ ಸಿಐಡಿ ಇಲ್ಲವೇ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು.
ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಲಲಿತಾ ಅನಪೂರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ಶರಣಭೂಪಾಲ್ ರೆಡ್ಡಿ, ಕಾರ್ಯದರ್ಶಿ ಗುರುಕಾಮಾ, ವೆಂಕಟರೆಡ್ಡಿ ಅಬ್ಬೆತುಮಕೂರ, ಹಿರಿಯ ಮುಖಂಡ ಡಾ. ಚಂದ್ರಶೇಖರ್ ಸುಬೇದಾರ್, ಬಸವರಾಜ ವಿಭೂತಿಹಳ್ಳಿ, ಮಂಡಲ ಅಧ್ಯಕ್ಷ ರಾಜುಗೌಡ ಉಕ್ಕಿನಾಳ, ನಗರ ಮಂಡಲ ಅಧ್ಯಕ್ಷ ದೇವೇಂದ್ರ ಕೊನೇರ ಮಾತನಾಡಿದರು.ವೀಣಾ ಮೋದಿ, ಭಾರತಿ ಜಮಖಂಡಿ, ಬಸವರಾಜ ಅರುಣಿ, ಮಲ್ಲಿಕಾರ್ಜುನ ಚಿಲ್ಲಾಳ, ಚಂದ್ರಶೇಖರ್, ರಾಘವೇಂದ್ರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
- - -ಬಾಕ್ಸ್ - - -ಸಚಿವ ದರ್ಶನಾಪೂರ ರಾಜೀನಾಮೆಗೆ ಒತ್ತಾಯಬಡವರಿಗೆ ವಿತರಿಸಬೇಕಾದ ಅಕ್ಕಿಯನ್ನು ಸಚಿವ ದರ್ಶನಾಪೂರ ಹಾಗೂ ಅವರ ಆಪ್ತರ ಕೈವಾಡದಿಂದಾಗಿ ಇಷ್ಟೊಂದು ದೊಡ್ಡ ಪ್ರಮಾಣದ 6077 ಕ್ವಿಂಟಲ್ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗಿದೆ. ಕೇಸ್ ಮುಚ್ಚಿ ಹಾಕುವ ಹುನ್ನಾರ ನಡೆದಿರುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
ತಾಲೂಕಿನಲ್ಲಿ ಕಳಪೆ ಕಟ್ಟಡ ಕಾಮಗಾರಿ, ರಸ್ತೆ ರಿಪೇರಿ, ಅಕ್ರಮ ಮರಳು ಸಾಗಾಣಿಕೆ, ಅಕ್ಕಿ ಕಳ್ಳತನ, ರಸಗೊಬ್ಬರ ಹೀಗೆ ಹಲವಾರು ಅಕ್ರಮಗಳಿಗೆ ದರ್ಶನಾಪೂರ ಕುಟುಂಬದ ಸಂಪೂರ್ಣ ಕೈವಾಡವಿದೆ. ಅಕ್ಕಿ ನಾಪತ್ತೆ ಪ್ರಕರಣದಲ್ಲಿ ಒಂದು ಕಡೆ ತನಿಖೆ ಆದೇಶಿಸುವ ನಾಟಕವಾಡಿ ಇನ್ನೊಂದು ಕಡೆ ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ. ಪೊಲೀಸರ ಮೂಲಕ ಅಮಾಯಕರ ಮೇಲೆ ಕೇಸ್ ದಾಖಲಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ತಮ್ಮ ಕೈವಾಡವಿಲ್ಲ ಎನ್ನುವುದು ದರ್ಶನಾಪೂರ್‌ರವರು ಸಾಬೀತುಪಡಿಸಬೇಕು ಹಾಗೂ ಟಿಎಪಿಸಿಎಂಎಸ್ ಅನ್ನು ಸೂಪರ್ ಸೀಡ್ ಮಾಡಿಸಲಿ ಎಂದು ಬಿಜೆಪಿ ಮುಖಂಡ ಅಮೀನ್ ರೆಡ್ಡಿ ಯಾಳಗಿ ಒತ್ತಾಯಿಸಿದರು.-
16ವೈಡಿಆರ್10: ಶಹಾಪುರ ನಗರದಲ್ಲಿ 6077 ಕ್ವಿಂಟಲ್ ಅಕ್ಕಿ ನಾಪತ್ತೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿ ಬಿಜೆಪಿ ನಗರ ಘಟಕದಿಂದ ಪ್ರತಿಭಟನೆ ನಡೆಯಿತು.-
16ವೈಡಿಆರ್11: ಶಹಾಪುರ ನಗರದಲ್ಲಿ 6077 ಕ್ವಿಂಟಲ್ ಅಕ್ಕಿ ನಾಪತ್ತೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿ ಬಿಜೆಪಿ ನಗರ ಘಟಕದಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.-
16ವೈಡಿಆರ್ : ಶಹಾಪುರ ನಗರದಲ್ಲಿ 6077 ಕ್ವಿಂಟಲ್ ಅಕ್ಕಿ ನಾಪತ್ತೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿ ಬಿಜೆಪಿ ನಗರ ಘಟಕದಿಂದ ನಡೆದ ಪ್ರತಿಭಟನೆಯಲ್ಲಿ ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಎನ್. ರವಿಕುಮಾರ್ ಮಾತನಾಡಿದರು.---000---