ಲಾರಿಗೆ ವಿದ್ಯುತ್ ತಂತಿ ತಗುಲಿ ಭತ್ತದ ಹುಲ್ಲು ಭಸ್ಮ..!

| Published : Mar 07 2025, 12:50 AM IST

ಸಾರಾಂಶ

ನಾಗಮಂಗಲ ತಾಲೂಕಿನ ಜಿ.ಬೊಮ್ಮನಹಳ್ಳಿ ಗ್ರಾಮದ ರೈತರೊಬ್ಬರಿಂದ ಖರೀದಿಸಿದ್ದ ಭತ್ತದ ಹುಲ್ಲನ್ನು ಮಾರಾಟ ಮಾಡಲು ಕೇರಳಕ್ಕೆ ಸಾಗಿಸಲು ಜೈ ಮಾರುತಿ ಹೆಸರಿನ ಮಿನಿ ಲಾರಿಯಲ್ಲಿ ಭರ್ತಿಯಾಗಿ ತುಂಬಿಕೊಂಡು ಬರುತ್ತಿದ್ದ ವೇಳೆ ಹುಳ್ಳೇನಹಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಈ ಅವಘಡ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಹುಲ್ಲು ತುಂಬಿದ ಲಾರಿಗೆ ವಿದ್ಯುತ್ ತಂತಿ ತಗುಲಿ ಅಪಾರ ಪ್ರಮಾಣದ ಭತ್ತದ ಹುಲ್ಲು ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಹುಳ್ಳೇನಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.

ತಾಲೂಕಿನ ಜಿ.ಬೊಮ್ಮನಹಳ್ಳಿ ಗ್ರಾಮದ ರೈತರೊಬ್ಬರಿಂದ ಖರೀದಿಸಿದ್ದ ಭತ್ತದ ಹುಲ್ಲನ್ನು ಮಾರಾಟ ಮಾಡಲು ಕೇರಳಕ್ಕೆ ಸಾಗಿಸಲು ಜೈ ಮಾರುತಿ ಹೆಸರಿನ ಮಿನಿ ಲಾರಿಯಲ್ಲಿ ಭರ್ತಿಯಾಗಿ ತುಂಬಿಕೊಂಡು ಬರುತ್ತಿದ್ದ ವೇಳೆ ಹುಳ್ಳೇನಹಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಈ ಅವಘಡ ಸಂಭವಿಸಿದೆ.

ಹುಲ್ಲು ತುಂಬಿದ ಲಾರಿಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಸಮಯ ಪ್ರಜ್ಞೆ ಮೆರೆದ ಚಾಲಕ ಹೊತ್ತಿ ಉರಿಯುತ್ತಿದ್ದ ಲಾರಿಯನ್ನು ಗ್ರಾಮದ ಹೊರವಲಯಕ್ಕೆ ತಂದು ನಿಲ್ಲಿಸಿದ್ದಾನೆ.

ತಕ್ಷಣ ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ಕೊಳವೆ ಬಾವಿಯಿಂದ ಪೈಪ್ ಮೂಲಕ ನೀರು ಹಾಕಿದರೂ ಕೂಡ ಬೆಂಕಿಯ ಜ್ವಾಲೆ ಕಡಿಮೆಯಾಗಲಿಲ್ಲ. ನಂತರ ನಾಗಮಂಗಲ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದರಾದರೂ ಭತ್ತದ ಹುಲ್ಲು ಸಂಪೂರ್ಣ ಸುಟ್ಟು ಭಸ್ಮವಾಯಿತು. ಹುಲ್ಲು ತುಂಬಿದ ಮಿನಿ ಲಾರಿಗೆ ಹೆಚ್ಚಿನ ಹಾನಿಯಾಗಿಲ್ಲ.

ಅಗ್ನಿಶಾಮಕ ಠಾಣಾಧಿಕಾರಿ ಮಂಜುನಾಥ್ ನೇತೃತ್ವದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿ ಹೆಚ್ಚಿನ ಅನಾಹುತ ತಪ್ಪಿಸಿದರು.