ರೈತರ ಮೇಲೆ ಕೇಸ್‌ ಹಾಕಿಸಿರುವ ಶ್ರೀಮಂತ ಪಾಟೀಲ: ಶಾಸಕ ಕಾಗೆ ಆಕ್ರೋಶ

| Published : Jan 24 2024, 02:02 AM IST

ರೈತರ ಮೇಲೆ ಕೇಸ್‌ ಹಾಕಿಸಿರುವ ಶ್ರೀಮಂತ ಪಾಟೀಲ: ಶಾಸಕ ಕಾಗೆ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಗೂಂಡಾಗಿರಿ ಆರೋಪ ಸಾಬೀತು ಮಾಡಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ರಾಜು ಕಾಗೆ ಹೇಳಿದ್ದು, ಮಾಜಿ ಶಾಸಕ ಶ್ರೀಮಂತ ಪಾಟೀಲ ವಿರುದ್ಧ ಹರಿಹಾಯ್ದಿದ್ದಾರೆ.

ಕನ್ನಡಪ್ರಭ ವಾರ್ತೆ ಕಾಗವಾಡ

ಶ್ರೀಮಂತ ಪಾಟೀಲ ಕೂಡ ಶಾಸಕರಾಗಿದ್ದವರು. ಅವರ ಆಡಳಿತಾವಧಿಯಲ್ಲಿ ಏನೇನು ಮಾಡಿದ್ದಾರೋ ಗೊತ್ತಿದೆ. ಅವರ ಕಾಲದಲ್ಲಿ ನೀರಾವರಿ ಯೋಜನೆಗಳನ್ನು ಮಾಡಿ ರೈತರಿಗೆ ಕೊಟ್ಟು, ನಾನು ಸರ್ಕಾರದಿಂದ ಮಾಡಿಸಿ ಕೊಡುತ್ತೇನೆ ಎಂದು ಹೇಳಿ ಈಗ ಮುನ್ನೂರು ನಾಲ್ಕನೂರು ರೈತರ ಮೇಲೆ ಕೇಸ್ ಹಾಕಿದ್ದಾರೆ ಎಂದು ಶಾಸಕ ರಾಜು ಕಾಗೆ ಗಂಭೀರ ಆರೋಪ ಮಾಡಿದರು.

ಉಗಾರ ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು ನಾಲ್ಕು ನೂರು ಕುಟುಂಬಗಳ 2 ರಿಂದ ಮೂರು ಸಾವಿರ ರೈತರು ಬೀದಿಗೆ ಬಿದ್ದಿದ್ದಾರೆ. ಶ್ರೀಮಂತ ಪಾಟೀಲರು ಈ ಬಗ್ಗೆ ಉತ್ತರ ಕೊಡಲಿ ಎಂದು ಆಗ್ರಹಿಸಿದರು.

ಹೋಗಲಿ, ತಮ್ಮ ಕಾರ್ಖಾನೆಯಲ್ಲಿ ಕಬ್ಬು ತೂಕದಲ್ಲಿ ಏನೂ ವ್ಯತ್ಯಾಸ ಮಾಡಿಲ್ಲ. ಕಾಟಾ ಹೊಡೆದಿಲ್ಲ ಎಂದು ಎಂದು ಮೊಮ್ಮಕ್ಕಳು, ಮರಿಮಕ್ಕಳ ಮೇಲೆ ಆಣೆ ಮಾಡಿದ್ದರು. ಆದರೆ, ತೂಕದಲ್ಲಿ ವ್ಯತ್ಯಾಸ ಮಾಡಿದ್ದನ್ನು ಪ್ರಶ್ನಿಸಿದ ಟ್ರ್ಯಾಕ್ಟರ್ ಚಾಲಕ, ಮಾಲೀಕರ ಮೇಲೆ ಹಲ್ಲೆ ಮಾಡಿ ಮೋಸ ಮಾಡುವುದನ್ನು ಇನ್ನೂ ಮುಂದುವರಿಸಿದ್ದು ನಾಚಿಕೆಯಾಗಬೇಕು ಎಂದು ಶ್ರೀಮಂತ ಪಾಟೀಲ ವಿರುದ್ಧ ಆಕ್ರೋಶ ಹೊರಹಾಕಿದರು.

ಶ್ರೀಮಂತ ಪಾಟೀಲ, ತಮ್ಮ ಕಾರ್ಖಾನೆಗಾಗಿ ಎಷ್ಟು ಜಾಗ ಖರೀದಿಸಿದ್ದಾರೆ? ಅಧಿಕೃತವಾಗಿ ಎಷ್ಟು ಪಡೆದಿದ್ದಾರೆ ಎಂಬುದನ್ನು ಮೊದಲು ಬಹಿರಂಗಪಡಿಸಬೇಕು. ಅಲ್ಲದೇ, ಕೆಂಪವಾಡ, ನವಲಿಹಾಳ, ಕೌಲಗುಡ್ಡ ಮತ್ತು ನವಲಿಹಾಳ ಗ್ರಾಮಗಳಲ್ಲಿ ಕಾರ್ಖಾನೆಯ ಕಲುಷಿತ ನೀರು ಬಿಟ್ಟು ರೈತರು ಮತ್ತು ಗ್ರಾಮಸ್ಥರ ಪರಿಸ್ಥಿತಿ ಕೆಟ್ಟು ಹೋಗುವಂತೆ ಮಾಡಿದ್ದಾರೆ. ಆದರೆ, ಅವರಿಗೆ ಏನು ಪರಿಹಾರ ಕೊಡುತ್ತೀರಿ? ಮತ್ತು ಕೆಂಪವಾಡ ಕೆನಾಲ್‌ನಲ್ಲಿ ಕಲುಷಿತ ನೀರನ್ನು ಬಿಟ್ಟು ನಾಲ್ಕು ಹಳ್ಳಿಗಳ ರೈತರು ತಮ್ಮ ಹೊಲದಲ್ಲಿ ಬೆಳೆದ ಬೆಳೆಯನ್ನು ಕಳೆದುಕೊಂಡಿದ್ದಾರೆ. ಅವರಿಗೆ ಏನು ಪರಿಹಾರ ಕೊಡುತ್ತೀರಿ ಎಂಬುದನ್ನು ಮೊದಲು ಹೇಳಬೇಕು ಎಂದು ಹೇಳಿದರು.

ಅಲ್ಲದೇ, ನಾನು ಗೂಂಡಾಗಿರಿ ಮಾಡಿದ್ದೇನೆ ಎನ್ನುತ್ತಾರೆ. ಯಾರ ಮೇಲೆ ಗೂಂಡಾಗಿರಿ ಮಾಡಿದ್ದೇನೆ ಎಂಬುದನ್ನು ಮೊದಲು ತೋರಿಸಬೇಕು. ರಾಜಕಾರಣದಲ್ಲಿ ಯಾರ ಮೇಲೆ ಗೂಂಡಾಗಿರಿ ಮಾಡಿದ್ದೇನೆ ಎಂಬುದನ್ನು ತೋರಿಸಬೇಕು. 2018ರ ಚುನಾವಣೆಯಲ್ಲಿ ನಾಲ್ವತ್ತು ಐವತ್ತು ಗಾಡಿಯಲ್ಲಿ ಜನರನ್ನು ಕರೆಸಿಕೊಂಡು ಗೂಂಡಾಗಿರಿ ಮಾಡಿದ್ದು ಯಾರು? ತೂಕದಲ್ಲಿ ವ್ಯತ್ಯಾಸವನ್ನು ಪ್ರಶ್ನಿಸಿದ ಟ್ರ್ಯಾಕ್ಟರ್ ಮತ್ತು ಮಾಲೀಕರ ಮೇಲೆ ಹಲ್ಲೆ ಮಾಡಿದವರು ಯಾರು ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಗೂಂಡಾಗಿರಿ ಸಾಬೀತಾದರೆ ರಾಜಕೀಯ ನಿವೃತ್ತಿ:

ಮಾಜಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಶ್ರೀಮಂತ ಪಾಟೀಲ ನನ್ನ ಮೇಲೆ ಮಾಡಿರುವ ಭ್ರಷ್ಟಾಚಾರ ಮತ್ತು ಗೂಂಡಾಗಿರಿ ಆರೋಪ ಸಾಬೀತು ಮಾಡಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಹಾಕಿದರು.

ನಾಲ್ಕು ಜನರನ್ನು ಕರೆದುಕೊಂಡು ಪ್ರತಿಭಟನೆ ಮಾಡಿ, ಯಾವುದೇ ದಾಖಲೆ ಇಲ್ಲದೇ ಗಂಭೀರ ಆರೋಪ ಮಾಡಿದರೆ ದೊಡ್ಡ ನಾಯಕರಾಗುವುದಿಲ್ಲ. ತಾಕತ್ತಿದ್ದರೆ, ಧೈರ್ಯ ಇದ್ದರೆ ದಾಖಲೆ ಸಹಿತ ಮಾತನಾಡಿ. ನಿಮ್ಮ ತಾಟಿನಲ್ಲಿ ಕತ್ತೆ ಬಿದ್ದಿದೆ ಮೊದಲು ಅದನ್ನು ನೋಡಿಕೊಳ್ಳಿ. ಇನ್ನೊಬ್ಬರ ತಾಟಿನಲ್ಲಿಯ ನೊಣ ನೋಡಬೇಡಿ ಎಂದು ತಿರುಗೇಟು ನೀಡಿದರು.

ಪ್ರತಿಭಟನೆ ಏತಕ್ಕಾಗಿ ಮಾಡಿದ್ದಾರೆ ಅವರಿಗೇ ಗೊತ್ತು. ನನಗೂ ಗೊತ್ತಿಲ್ಲ, ಜನರಿಗೂ ಗೊತ್ತಿಲ್ಲ. ವಿಷಯ ಇಲ್ಲದೇ ಪ್ರತಿಭಟನೆ ಮಡಿದ್ದಾರೆ. ಕೆಲಸ ಇಲ್ಲ. ಅದಕ್ಕೆ ಪ್ರತಿಭಟನೆ ಮಾಡಿದ್ದಾರೆ. ಸುಖಾಸುಮ್ಮನೆ ನನ್ನ ಹೆಸರು ತೆಗೆದುಕೊಂಡು ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಅವರು ಪ್ರಾಮಾಣಿಕರಾಗಿದ್ದರೆ ನನ್ನ ಮೇಲೆ ಮಾಡಿರುವ ಆರೋಪಗಳನ್ನು ಸಿದ್ಧ ಮಾಡಿ ತೋರಿಸಲಿ ಎಂದು ಸವಾಲೆಸೆದರು.

ಶ್ರೀಮಂತ ಪಾಟೀಲ ಚುನಾವಣೆ ಸಂದರ್ಭದಲ್ಲಿ ಭ್ರಷ್ಟಾಚಾರ ಮುಕ್ತ ಕಾಗವಾಡ ಮತಕ್ಷೇತ್ರ ಮಾಡುತ್ತೇನೆ. ಹಳ್ಳಿಗೆ ಹೋಗಿ ಪಂಚಾಯಿತಿ ಮುಂದೆ ಬೋರ್ಡ್‌ ಹಾಕುತ್ತೇನೆ ಎಂದು ಹೇಳಿದ್ದರು. ಆದರೆ, ಶಾಸಕರಾದ ಮೇಲೆ ಅವರ ಇಪ್ಪತ್ತು ಪಿಎಗಳು ಎಷ್ಟು ಅಧಿಕಾರಿಗಳಿಗೆ ಕಿರುಕುಳ ಕೊಟ್ಟಿದ್ದಾರೆ, ಗುತ್ತಿಗೆದಾರರ ಕಡೆಯಿಂದ ಎಷ್ಟು ಭ್ರಷ್ಟಾಚಾರ ಮಾಡಿದ್ದೀರಿ ಎಲ್ಲವೂ ಜಗಜ್ಜಾಹೀರವಿದೆ ಎಂದರು.

ನಾನು ಬಹಿರಂಗ ಸವಾಲು ಹಾಕುತ್ತೇನೆ, ನಾನು ಗೂಂಡಾಗಿರಿ ಭ್ರಷ್ಟಾಚಾರ ಮಾಡಿದ್ದರೆ ಸಾಬೀತು ಮಾಡಬೇಕು. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಆದರೆ, ಭೂತದ ಬಾಯಲ್ಲಿ ಭಗವದ್ಗೀತೆ ಪಠಿಸಿದಂತೆ, ಕಾಗವಾಡ ಮತಕ್ಷೇತ್ರ ಹಾಳು ಮಾಡಿದವರು ಈಗ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಮೊದಲು ತಮ್ಮ ಚಾರಿತ್ರ್ಯವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮಾತಿನಲ್ಲೇ ತಿವಿದರು.

ಪ್ರತಿಭಟನೆ ವೇದಿಕೆಯಲ್ಲಿ ಮಹಾದೇವ ಕೋರೆ ಮತ್ತು ಯಾರ್‍ಯಾರೋ ಮಾತನಾಡಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಮಹಾದೇವ ಕೋರೆ ಪಂಚಾಯಿತಿಯನ್ನು ಲೂಟಿ ಮಾಡಿದಾತ. ಎಷ್ಟು ಮನೆಯಿಂದ ದುಡ್ಡು ತಿಂದಿದ್ದಾನೆ. ಎಷ್ಟು ಭ್ರಷ್ಟಾಚಾರ ಮಾಡಿದ್ದಾನೆ ಎಂಬುದರ ಬಗ್ಗೆ ತಮ್ಮ ಚಾರಿತ್ರ್ಯವನ್ನೊಮ್ಮೆ ತಾವೇ ನೋಡಿಕೊಳ್ಳಲಿ ಎಂದು ಕಿಡಿಕಾರಿದರು.

ನಿಮ್ಮ ಕಾಲದಲ್ಲಿ ಪಿ.ಎಗಳಿಂದ ಎಷ್ಟು ಅಧಿಕಾರಿಗಳಿಗೆ ಅನ್ಯಾಯವಾಯಿತು, ಎಷ್ಟು ಗುತ್ತಿಗೆದಾರರಿಗೆ ಅನ್ಯಾಯ ಮಾಡಿದ್ದಿರಿ ಎಂಬುದು ಇಡೀ ಕ್ಷೇತ್ರದ ಜನರಿಗೇ ಗೊತ್ತಿದೆ. ಹರಿಶ್ಚಂದ್ರನಂತೆ ಮಾಡನಾಡುವುದನ್ನು ಬಿಟ್ಟು ಬಿಡಿ. ಒಂದೇ ವೇದಿಕೆಯಲ್ಲಿ ಬಾ, ಅಕ್ಕ ಪಕ್ಕ ಕುಳಿತುಕೊಳ್ಳೋಣ. ನನ್ನ ಪ್ರಶ್ನೆಗಳಿಗೆ ನೀನು ಉತ್ತರ ಕೊಡು. ನಿನ್ನ ಪ್ರಶ್ನೆಗಳಿಗೆ ನಾನು ಕೊಡುತ್ತೇನೆ. ಆವಾಗ ನೀನು ನಿಜವಾದ ನಾಯಕ ಎಂದು ರಾಜು ಕಾಗೆ ಏಕವಚನದಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದರು.

-----------

ಕೋಟ್‌....

ಜೀವನಪೂರ್ತಿ ಶ್ರೀಮಂತ ಪಾಟೀಲ ಮಾಜಿ ಆಗಿಯೇ ಇರುತ್ತಾರೆ. ರಮೇಶ ಜಾರಕಿಹೊಳಿಗೆ ಹೇಳಲು ಬಯಸುತ್ತೇನೆ. ಕುಡಚಿ, ಕಾಗವಾಡ, ಅಥಣಿಯಲ್ಲಿ ಬಿಜೆಪಿ ಗೆಲ್ಲಿಸುವಂತೆ ಹೇಳಿದ್ದೀರಿ. ಇಂತಹ ಹಗಲುಗನಸು ಕಾಣುವುದನ್ನು ಬಿಡಬೇಕು. ಹಾಗೇ ರಮೇಶ ಜಾರಕಿಹೊಳಿ ತಮ್ಮ ಕ್ಷೇತ್ರ ಮೊದಲು ನೋಡಿಕೊಳ್ಳಲಿ. ಗೋಕಾಕ ನೋಂದಣಿ ಕಚೇರಿಯಲ್ಲಿ ಅವರ ಚೀಟಿ ತೆಗೆದುಕೊಂಡು ಹೋದರೆ ಮಾತ್ರ ಖರೀದಿ ಮಾಡಲಾಗುತ್ತದೆ. ಹೀಗಾಗಿ, ನೀವು ಎಷ್ಟು ಪವಿತ್ರ, ಪ್ರಾಮಾಣಿಕ ಇದ್ದೀರಿ ಎಂಬುದನ್ನು ನೀವು ಮೊದಲು ನೋಡಿಕೊಳ್ಳಿ.

-ರಾಜು ಕಾಗೆ, ಶಾಸಕರು, ಕಾಗವಾಡ