ಸಾರಾಂಶ
ದ.ಕ. ಜಿಲ್ಲಾ ಆಟೋರಿಕ್ಷಾ ಚಾಲಕ ಮಾಲೀಕರ ಸಂಘಗಳ ಒಕ್ಕೂಟ ನೇತೃತ್ವದಲ್ಲಿ ಮಂಗಳವಾರ ಬಂದ್ ಪ್ರತಿಭಟನೆ ಆಯೋಜಿಸಲಾಗಿತ್ತು. ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಬಹುತೇಕ ರಿಕ್ಷಾಗಳು ಬೀದಿಗಿಳಿಯಲಿಲ್ಲ. ನಗರದಲ್ಲಿ ಹೆಚ್ಚುತ್ತಿರುವ ಎಲೆಕ್ಟ್ರಿಕ್ ಆಟೊಗಳು ಹಾಗೂ ಅವುಗಳಿಗೆ ನಿಗದಿ ಮಾಡಿದ ವಲಯದ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಆಟೋ ಚಾಲಕರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಪ್ರತಿಭಟಿಸಿ, ನಾಗರಿಕರು ಬಸವಳಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ನಗರದಲ್ಲಿ ಹೆಚ್ಚುತ್ತಿರುವ ಎಲೆಕ್ಟ್ರಿಕ್ ಆಟೊಗಳು ಹಾಗೂ ಅವುಗಳಿಗೆ ನಿಗದಿ ಮಾಡಿದ ವಲಯದ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಆಟೋ ಚಾಲಕರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಮಂಗಳೂರಿನಲ್ಲಿ ರಿಕ್ಷಾ ಬಂದ್ ನಡೆಸಿ ಪ್ರತಿಭಟಿಸಿದ್ದಾರೆ. ಬಹುತೇಕ ರಿಕ್ಷಾಗಳು ಸಂಚರಿಸದೆ ಇದ್ದುದರಿಂದ ಅಗತ್ಯ ಸ್ಥಳಗಳಿಗೆ ಪ್ರಯಾಣಿಸಬೇಕಿದ್ದ ಪ್ರಯಾಣಿಕರು ಬವಣೆ ಅನುಭವಿಸಬೇಕಾಯಿತು.ದ.ಕ. ಜಿಲ್ಲಾ ಆಟೋರಿಕ್ಷಾ ಚಾಲಕ ಮಾಲೀಕರ ಸಂಘಗಳ ಒಕ್ಕೂಟ ನೇತೃತ್ವದಲ್ಲಿ ಈ ಬಂದ್ ಪ್ರತಿಭಟನೆ ಆಯೋಜಿಸಲಾಗಿತ್ತು. ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಬಹುತೇಕ ರಿಕ್ಷಾಗಳು ಬೀದಿಗಿಳಿಯಲಿಲ್ಲ.ಬೃಹತ್ ಜಾಥಾ: ಬಂದ್ ಪ್ರಯುಕ್ತ ನಗರದ ಅಂಬೇಡ್ಕರ್ ವೃತ್ತದಿಂದ ಆರ್‌ಟಿಒವರೆಗೆ ಆಟೋ ಚಾಲಕರು ಬೃಹತ್ ಜಾಥಾ ನಡೆಸಿದರು. 2022ರ ನ.25ರ ಬಳಿಕ ನೋಂದಣಿಯಾದ ಬ್ಯಾಟರಿ ಚಾಲಿತ ಆಟೋ ರಿಕ್ಷಾಗಳಿಗೆ ವಲಯ-1ರ ಕ್ರಮಸಂಖ್ಯೆ ನೀಡಬಾರದು. ವಲಯ-1ರ ಕ್ರಮಸಂಖ್ಯೆ ಇಲ್ಲದ ಯಾವುದೇ ಕಂಪೆನಿಯ ಆಟೋರಿಕ್ಷಾಗಳು ಮಂಗಳೂರು ನಗರ ವ್ಯಾಪ್ತಿಯ ಹೊರಗೆ ಸಂಚರಿಸಬೇಕು ಮತ್ತು ವಲಯ-2ರ ಕ್ರಮಸಂಖ್ಯೆಯನ್ನು ಲಗತ್ತಿಸಬೇಕು. ನಗರದಲ್ಲಿ ಆಟೋ ರಿಕ್ಷಾ ನಿಲ್ದಾಣಗಳ ಕೊರತೆ ನೀಗಿಸಬೇಕು. ಮಂಗಳೂರು ನಗರದಲ್ಲಿ ಸಂಚಾರದ ಪರವಾನಗಿ ಇಲ್ಲದೆ ನಕಲಿ ಆಟೊಗಳ ಹಾವಳಿ ಹೆಚ್ಚಿದ್ದು, ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಚಾಲ್ತಿಯಲ್ಲಿರುವ ಆಟೊಗಳ ಪರವಾನಗಿಯನ್ನು ಬ್ಯಾಟರಿ ಚಾಲಿತ ಆಟೊಗಳಿಗೆ ವರ್ಗಾಯಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.ಆರ್‌ಟಿಒ ಅಧಿಕಾರಿ ಶ್ರೀಧರ್ ಮಲ್ಲಾಡ್, ಆಟೋರಿಕ್ಷಾ ಚಾಲಕರ ಮನವಿ ಸ್ವೀಕರಿಸಿ ಸಮಸ್ಯೆಗಳಿಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ದಕ್ಷಿಣ ಕನ್ನಡ ಜಿಲ್ಲಾ ಆಟೋರಿಕ್ಷಾ ಚಾಲಕ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಅಶೋಕ್ ಶೆಟ್ಟಿ ಬೋಳಾರ, ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ನೇತೃತ್ವ ವಹಿಸಿದ್ದರು. ಖಜಾಂಚಿ ಲೋಕೇಶ್ ಶೆಟ್ಟಿ, ಗೌರವಾಧ್ಯಕ್ಷ ಮಹಮ್ಮದ್ ಇರ್ಫಾನ್, ಗೌರವ ಸಲಹೆಗಾರ ಅರುಣ್ ಕುಮಾರ್ ಮತ್ತು ರಾಜೇಶ್, ಉಪಾಧ್ಯಕ್ಷರಾದ ಶೇಖರ ದೇರಳಕಟ್ಟೆಮತ್ತು ಅಬೂಬಕರ್ ಸುರತ್ಕಲ್, ಜತೆ ಕಾರ್ಯದರ್ಶಿ ಗೋಪಾಲಕೃಷ್ಣ, ಎಂ.ಮೊಹಮ್ಮದ್, ಸಂಘಟನಾ ಕಾರ್ಯಕಾರಿಣಿ ಜೆರಾಲ್ಡ್ ಡಿ ಕುನ್ಹಾ ಮತ್ತು ವಸಂತ ಶೆಟ್ಟಿ ಇದ್ದರು.