14 ವರ್ಷದ ಬಳಿಕ ಸಿಕ್ತು ಹಕ್ಕುಪತ್ರ!

| Published : May 24 2024, 12:53 AM IST

ಸಾರಾಂಶ

ಈ ಕುರಿತಂತೆ ಸಂಬಂಧಪಟ್ಟ ಇಲಾಖೆಗಳಿಗೆ, ಅಧಿಕಾರಿಗಳಿಗೆ, ಹಲವು ಬಾರಿ ಮನವಿಗಳನ್ನು ನೀಡುತ್ತಾ ಬಂದಿದ್ದರೂ ಈ ಬಗ್ಗೆ ಯಾವುದೇ ಸಕಾರಾತ್ಮಕ ಬೆಳವಣಿಗೆಗಳು ಈ ಹಿಂದಿನವರೆಗೆ ಕಂಡುಬಂದಿರಲಿಲ್ಲ.

ಕಾರವಾರ: ತಮಗೆ ಸಿಗಬೇಕಾದ ಹಕ್ಕುಪತ್ರಕ್ಕಾಗಿ ಕಳೆದ ೧೪ ವರ್ಷದಿಂದ ಸರ್ಕಾರಿ ಕಚೇರಿ ಅಲೆಯುತ್ತಿದ್ದ ಜನರು ನಿಟ್ಟುಸಿರು ಬಿಡುವಂತಾಗಿದೆ. ಮನೆ, ಮಠ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದವರಿಗೆ ಹಕ್ಕುಪತ್ರ ದೊರೆತು ವಾಸಕ್ಕೊಂದು ಸೂರು ಸಿಕ್ಕಂತಾಗಿದೆ.ತಾಲೂಕಿನ ಕಡವಾಡ ಗ್ರಾಮದ ಮಾಡಿಬಾಗ, ಜರಿವಾಡಾದಲ್ಲಿ ೨೦೦೯ರ ಅಕ್ಟೋಬರ್‌ನಲ್ಲಿ ಭಾರಿ ಮಳೆಯಿಂದಾಗಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ಮನೆ ಕಳೆದುಕೊಂಡವರಿಗೆ ಕಡವಾಡ ಗ್ರಾಮದ ಮಾಧವ ನಗರದಲ್ಲಿ ಆಸರೆ ಯೋಜನೆಯಡಿಯಲ್ಲಿ ೨೦೧೦ರ ನವೆಂಬರ್‌ನಲ್ಲಿ ೩೦x೫೦ ಅಡಿಯಂತೆ ಒಟ್ಟೂ ೫೫ ಜನರಿಗೆ ಪ್ಲಾಟಿನ ಪಟ್ಟಾ ನೀಡಲಾಗಿತ್ತು. ಇದರಲ್ಲಿ ಅನಸೂಯಾ ಲಕ್ಷ್ಮಣ ಮಾಂಜೇಕರ, ಪವಿತ್ರಾ ಕರುಣಾಕರ ತಳೇಕರ ಹಾಗೂ ನಾರಾಯಣ ಬಾಬು ಭಂಡಾರಿ ಇವರಿಗೆ ನೀಡಿದ ಪಟ್ಟಾದಲ್ಲಿ ಕಡವಾಡ ಗ್ರಾಮ ಸ.ನಂ. ೩೧/೭ ರಲ್ಲಿ ಪ್ಲಾಟಿನ ಅಳತೆ ೩೦x೫೦ ಅಂತಾ ದಾಖಲಿಸಿದ್ದು ಪಹಣಿ ಪತ್ರಿಕೆಯಲ್ಲಿ ಕೇವಲ ಭಾಗಶಃ ಕ್ಷೇತ್ರ ದಾಖಲಾಗಿತ್ತು. ಉಳಿದ ಕ್ಷೇತ್ರ ಇನ್ನೊಂದು ಹಿಸ್ಸಾದಲ್ಲಿ ಸೇರ್ಪಡೆಯಾಗಿದ್ದ ಕಾರಣ ಇವರೊಂದಿಗೆ ಸಂತ್ರಸ್ತರಾಗಿದ್ದ ಉಳಿದವರಿಗೆ ಜಮೀನು ಮಂಜೂರಾಗಿದ್ದರೂ, ಜಮೀನು ವಂಚಿತರಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು.

ಈ ಕುರಿತಂತೆ ಸಂಬಂಧಪಟ್ಟ ಇಲಾಖೆಗಳಿಗೆ, ಅಧಿಕಾರಿಗಳಿಗೆ, ಹಲವು ಬಾರಿ ಮನವಿಗಳನ್ನು ನೀಡುತ್ತಾ ಬಂದಿದ್ದರೂ ಈ ಬಗ್ಗೆ ಯಾವುದೇ ಸಕಾರಾತ್ಮಕ ಬೆಳವಣಿಗೆಗಳು ಈ ಹಿಂದಿನವರೆಗೆ ಕಂಡುಬಂದಿರಲಿಲ್ಲ. ೧೪ ವರ್ಷದಷ್ಟು ದೀರ್ಘ ಕಾಲದಿಂದ ಬಾಕಿ ಇದ್ದ ಈ ಸಂತ್ರಸ್ತರ ಮನವಿಯ ಅರ್ಜಿಯ ಕುರಿತಂತೆ ವಿಶೇಷ ಕಾಳಜಿ ವಹಿಸಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಈ ಕುರಿತು ಪರಿಶೀಲಿಸಿ ಈ ಅರ್ಜಿಯ ಕುರಿತಂತೆ ವರದಿ ನೀಡುವಂತೆ ಸ್ಥಳೀಯ ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗೆ ಸೂಚಿಸಿದ್ದರು. ಅವರು ನೀಡಿದ ವರದಿಯನ್ನು ಮೋಜಣಿ ಇಲಾಖೆಗೆ ಕಳುಹಿಸಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.ಈ ಪ್ರಕರಣದ ಪರಿಶೀಲಿಸಿದ ಕಾರವಾರದ ಭೂದಾಖಲೆಗಳ ಸಹಾಯಕ ನಿರ್ದೇಶಕರು ಹಕ್ಕುಪತ್ರದಲ್ಲಿ ಹಾಗೂ ಪಹಣಿ ಪತ್ರಿಕೆಯಲ್ಲಿ ತಿದ್ದುಪಡಿ ಮಾಡಿ, ತಾಲೂಕಿನ ಕಡವಾಡ ಗ್ರಾಮದ ಸ.ನಂ. ೩೧/೭ ಮತ್ತು ೩೧/೬ಬ ೨ ರಲ್ಲಿ ಪ್ಲಾಟಿನ ಅಳತೆ ೩೦x೫೦ರಂತೆ ಪಟ್ಟಾ ಮತ್ತು ಪಹಣಿ ಪತ್ರಿಕೆಯಲ್ಲಿ ದಾಖಲಿಸಿದ್ದು ಜಿಲ್ಲಾಧಿಕಾರಿ ಈ ಆದೇಶಕ್ಕೆ ಸಹಿ ಮಾಡುವ ಮೂಲಕ ೧೪ ವರ್ಷದಿಂದ ಕಚೇರಿಗೆ ಅಲೆದಾಡುತ್ತಿರುವ ಸಂತ್ರಸ್ತರ ದೀರ್ಘ ಕಾಲದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿದ್ದಾರೆ.ಸಂತ್ರಸ್ತರಿಗೆ ಸೌಲಭ್ಯ: ಕಚೇರಿಯಲ್ಲಿ ಬಾಕಿ ಇರುವ ಕಡತಗಳ ಪರಿಶೀಲನೆ ನಡೆಸುತಿದ್ದ ಸಂದರ್ಭದಲ್ಲಿ ೧೪ ವರ್ಷದಿಂದ ಬಾಕಿ ಇದ್ದ ಈ ಕಡತ ಇದುವರೆಗೂ ಇತ್ಯರ್ಥವಾಗದ ಬಗ್ಗೆ ಕಂಡುಬಂದಿತು. ಈ ಪ್ರಕರಣದ ಕುರಿತಂತೆ ವಿವರಗಳನ್ನು ಸಂಗ್ರಹಿಸಿದಾಗ, ಇದು ಪ್ರಾಕೃತಿಕ ವಿಕೋಪದಿಂದ ಸಂಭವಿಸಿದ ಗುಡ್ಡ ಕುಸಿತದಲ್ಲಿ ಮನೆ ಕಳೆದುಕೊಂಡು ಪರಿತಪಿಸುತ್ತಿದದವರಿಗೆ ಪರಿಹಾರವಾಗಿ ದೊರೆಯಬೇಕಾದ ಭೂಮಿ ಎಂದು ತಿಳಿಯಿತು. ತಮಗೆ ನ್ಯಾಯಯುತವಾಗಿ ದೊರೆಯಬೇಕಾದ ಸೌಲಭ್ಯವನ್ನು ಪಡೆಯಲು ಇಷ್ಟು ವರ್ಷಗಳ ಕಾಲ ಕಷ್ಟಪಡುತ್ತಿದ್ದರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಸಂಬಂಧಪಟ್ಟ ಇಲಾಖೆಗೆ ಅಗತ್ಯ ನಿರ್ದೇಶನಗಳನ್ನು ನೀಡಿ, ಸಂತ್ರಸ್ತರಿಗೆ ದೊರೆಯಬೇಕಾದ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.