ರಾಜ್ಯದ 31 ವಿಶ್ವವಿದ್ಯಾಲಯಗಳಲ್ಲಿ 2965 ಪ್ರಾಧ್ಯಾಪಕರ ಹುದ್ದೆಗಳು ಖಾಲಿ ಇದ್ದರೂ, ಅವುಗಳ ಭರ್ತಿ ಮಾಡುವ ಶಕ್ತಿ ರಾಜ್ಯ ಸರ್ಕಾರಕ್ಕಿಲ್ಲ.
ಹುಬ್ಬಳ್ಳಿ: ವಿಧಾನಪರಿಷತ್ ಮತ್ತು ರಾಜ್ಯಸಭೆ ಚಿಂತಕರ ಚಾವಡಿಯಾಗಿದ್ದು, ಇಲ್ಲಿ ಚಿಂತಕರು, ಸಜ್ಜನರು ಇರಬೇಕು. ಅಂತಹ ಸಜ್ಜನ ರಾಜಕಾರಣಿ ಎನಿಸಿರುವ ಎಸ್.ವಿ.ಸಂಕನೂರ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಬೇಕು. ಈ ಮೂಲಕ ಗೂಂಡಾಗಿರಿ ಮೂಲಕ ಸಭಾಪತಿ ಸ್ಥಾನದಿಂದ ಹೊರಟ್ಟಿ ಅವರನ್ನು ಕೆಳಕ್ಕಿಳಿಸಿದ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು
ನಗರದಲ್ಲಿ ಬಿಜೆಪಿಯಿಂದ ಆಯೋಜಿಸಿದ್ದ ಪಶ್ಚಿಮ ಪದವೀಧರರ ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳ ಶಿಕ್ಷಕರ ಹಾಗೂ ಪದವೀಧರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಬಸವರಾಜ ಹೊರಟ್ಟಿ ಅವರ ಹಿರಿತನವನ್ನು ಪರಿಗಣಿಸದೇ, ಸಿಎಂ, ಪಕ್ಷದ ಅಧ್ಯಕ್ಷರು ಹಾಗೂ 20 ಎಂಎಲ್‌ಸಿಗಳು ಗೂಂಡಾಗಿರಿ ಮಾಡುವ ಮೂಲಕ ಪರಿಷತ್ ಸಭಾಪತಿ ಸ್ಥಾನದಿಂದ ಕೆಳಗಿಳಿಸಿದರು. ಈಗ ಅದರ ವಿರುದ್ಧ ಸೇಡು ತೀರಿಸಿಕೊಳ್ಳುವ ಅವಕಾಶ ಶಿಕ್ಷಕರು ಮತ್ತು ಪದವೀಧರರಿಗೆ ಬಂದಿದೆ ಎಂದರು. ಇದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಕಾಂಗ್ರೆಸ್‌ನ್ನು ಚುನಾವಣೆಯಲ್ಲಿ ಸೋಲಿಸಬೇಕು ಎಂದರು.ರಾಜ್ಯದ 31 ವಿಶ್ವವಿದ್ಯಾಲಯಗಳಲ್ಲಿ 2965 ಪ್ರಾಧ್ಯಾಪಕರ ಹುದ್ದೆಗಳು ಖಾಲಿ ಇದ್ದರೂ, ಅವುಗಳ ಭರ್ತಿ ಮಾಡುವ ಶಕ್ತಿ ರಾಜ್ಯ ಸರಕಾರಕ್ಕಿಲ್ಲ. ಈಗಾಗಲೇ ಹಣಕಾಸು ಇಲಾಖೆ ಕ್ಯಾಬಿನೆಟ್‌ಗೆ ಹಣ ಇಲ್ಲ ಎಂದು ಪತ್ರ ಬರೆದಿದೆ ಅಲ್ಲದೇ, ಯಾವುದೇ ಹೊಸ ಯೋಜನೆಗೆ ಅನುದಾನ ನೀಡಲು ಹಣ ಇಲ್ಲ ಎಂದು ಹೇಳಿದೆ. ರಾಜ್ಯ ಸರಕಾರ, ಏನೇ ಮಾತನಾಡಿದರೂ ಕೇಂದ್ರ ಸರಕಾರ ಎನ್ನುತ್ತಿದೆ ಎಂದು ಕಿಡಿಕಾರಿದರು.
ವಿಧಾನಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಶಿಕ್ಷಕರು ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಪ್ರಸ್ತುತ ಚುನಾವಣೆಯಲ್ಲಿ ಎಸ್.ವಿ. ಸಂಕನೂರ ಅವರನ್ನು ಗೆಲ್ಲಿಸಲು ಶ್ರಮಿಸಬೇಕು. ಅನುದಾನಿತ, ಅನುದಾನ ರಹಿತ, ಸರಕಾರಿ ಶಾಲಾ ಶಿಕ್ಷಕರ ಬೇಡಿಕೆ ಈಡೇರಿಕೆಗೆ ನವೆಂಬರ್ 18ರಂದು ಶಾಲೆಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲು ಕರೆ ನೀಡಲಾಗಿದೆ. ನಮ್ಮ ಸಂಘಟನೆಯೇ ನಮ್ಮ ಶಕ್ತಿಯಾಗಿದ್ದು, ಹೋರಾಟದ ಮೂಲಕ ನಮ್ಮ ಹಕ್ಕು ಪಡೆಯೋಣ. ಹಾಗೆಯೇ ಈ ಚುನಾವಣೆಯಲ್ಲಿ ನಮ್ಮ ಸಂಘಟನೆಯಿಂದ ಹೆಚ್ಚಿನ ಕೆಲಸ ಆಗಬೇಕಿದೆ. ಈ ಗೆಲುವಿನಲ್ಲಿ ಸಲ್ಪ ವ್ಯತ್ಯಾಸ ಉಂಟಾದರೂ, ಸಂಘಟನೆ ಮೇಲೆ ಪರಿಣಾಮ ಬೀರುತ್ತದೆ. ನಾನೇ ಚುನಾವಣೆಗೆ ನಿಂತಿದ್ದೇನೆ ಎಂದುಕೊಂಡು ಸಂಘಟನೆಯ ಎಲ್ಲ ಪದಾಧಿಕಾರಿಗಳು ಸಂಕನೂರ ಅವರನ್ನು ಗೆಲ್ಲಿಸಬೇಕು ಎಂದರು. ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಮಾತನಾಡಿ, ಶಿಕ್ಷಕರು, ಪದವೀಧರರ ಸಮಸ್ಯೆಗಳನ್ನು ಸಮರ್ಥವಾಗಿ ಸದನದಲ್ಲಿ ಮಂಡಿಸುವ ಜತೆಗೆ ಅವರ ಪರ ಹೋರಾಟ ಮಾಡಿದ್ದೇನೆ. ಇದನ್ನು ಪರಿಗಣಿಸಿ ತಮ್ಮನ್ನು ಮತ್ತೆ ಆಯ್ಕೆಮಾಡಬೇಕೆಂದು ಮನವಿ ಮಾಡಿದರು.ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕ ಎಂ.ಆರ್. ಪಾಟೀಲ, ಕೆಎಲ್‌ಇ ಸಂಸ್ಥೆ ಮಾಜಿ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಜಿ.ಆರ್. ಭಟ್, ಸಂದೀಪ ಬೂದಿಹಾಳ, ಎಚ್.ಪಿ.ಬಣಕಾರ, ಜಗದೀಶ ದ್ಯಾವಕ್ಕನವರ, ವಿಶ್ವನಾಥ ಕೊರವಿ ಸೇರಿದಂತೆ ಇತರರು ಇದ್ದರು.