ಭ್ರಷ್ಟಾಚಾರ ನಿರ್ಮೂಲನೆಗೆ ಮಾಹಿತಿ ಹಕ್ಕು ಕಾಯ್ದೆ ಬ್ರಹ್ಮಾಸ್ತ್ರ: ಹೇಮಂತ ನಾಗರಾಜ

| Published : Feb 12 2024, 01:30 AM IST

ಭ್ರಷ್ಟಾಚಾರ ನಿರ್ಮೂಲನೆಗೆ ಮಾಹಿತಿ ಹಕ್ಕು ಕಾಯ್ದೆ ಬ್ರಹ್ಮಾಸ್ತ್ರ: ಹೇಮಂತ ನಾಗರಾಜ
Share this Article
  • FB
  • TW
  • Linkdin
  • Email

ಸಾರಾಂಶ

ಭ್ರಷ್ಟಾಚಾರದಿಂದ ಕೂಡಿರುವ ಸಮಾಜದಲ್ಲಿ ಸರ್ಕಾರಿ ಕೆಲಸ, ಕಾರ್ಯಗಳು ಯಾವ ರೀತಿ ಆಗುತ್ತಿವೆ, ಸರ್ಕಾರದಿಂದ ಮಂಜೂರಾದ ಅನುದಾನ ಸದ್ಭಳಕೆಯಾಗುತ್ತಿದೆಯೇ ಇಲ್ಲವೇ, ಸಾರ್ವಜನಿಕರ ತೆರಿಗೆ ಹಣ ಯಾರ ಪಾಲಾಗುತ್ತಿದೆ ಹೀಗೆ ಎಲ್ಲಾ ಹಗರಣ, ಭ್ರಷ್ಟಾಚಾರ, ಅನ್ಯಾಯವನ್ನು ಬಯಲಿಗೆಳೆಯಲು ಮಾಹಿತಿ ಹಕ್ಕು ಕಾಯ್ದೆಯು ಪರಿಣಾಮಕಾರಿಯಾಗಿದೆ. ಇಂತಹ ಕಾಯ್ದೆ ಸದ್ಭಳಕೆಯಾದಾಗ ಮಾತ್ರ ಕಾಯ್ದೆ ಜಾರಿಗೊಳಿಸಿದ್ದೂ ಸಾರ್ಥಕವಾಗುತ್ತದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಸರ್ಕಾರ ಆಡಳಿತ, ಇಲಾಖೆ, ಕಚೇರಿಗಳಲ್ಲಿ ಬೇರು ಬಿಟ್ಟಿರುವ ಭ್ರಷ್ಟ ವ್ಯವಸ್ಥೆ, ಭ್ರಷ್ಟ ಅಧಿಕಾರಿ, ಸಿಬ್ಬಂದಿಗಳ ಮಟ್ಟ ಹಾಕಲು, ಭ್ರಷ್ಟಾಚಾರ ನಿರ್ಮೂಲನೆಗೆ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಬ್ರಹ್ಮಾಸ್ತ್ರವಾಗಿದ್ದು, ಇದನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಜನ ಹಿತ ಕಾಯುವ ಕೆಲಸ ಆಗಬೇಕು ಎಂದು ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆ ರಾಜ್ಯಾಧ್ಯಕ್ಷ ಹೇಮಂತ ನಾಗರಾಜ ಕರೆ ನೀಡಿದರು.

ನಗರದ ರೋಟರಿ ಬಾಲಭವನದಲ್ಲಿ ರಾಜ್ಯ ಮಾಹಿತಿ ಹಕ್ಕು ವೇದಿಕೆ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಭ್ರಷ್ಟಾಚಾರ ನಿರ್ಮೂಲನೆಗೆ ಕಾಯ್ದೆಯ ಜೊತೆಗೆ ಜನರೂ ಜಾಗೃತರಾಗಬೇಕು. ಆಗ ಮಾತ್ರವೇ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಾಗುತ್ತದೆ ಎಂದರು.

ಭ್ರಷ್ಟಾಚಾರದಿಂದ ಕೂಡಿರುವ ಸಮಾಜದಲ್ಲಿ ಸರ್ಕಾರಿ ಕೆಲಸ, ಕಾರ್ಯಗಳು ಯಾವ ರೀತಿ ಆಗುತ್ತಿವೆ, ಸರ್ಕಾರದಿಂದ ಮಂಜೂರಾದ ಅನುದಾನ ಸದ್ಭಳಕೆಯಾಗುತ್ತಿದೆಯೇ ಇಲ್ಲವೇ, ಸಾರ್ವಜನಿಕರ ತೆರಿಗೆ ಹಣ ಯಾರ ಪಾಲಾಗುತ್ತಿದೆ ಹೀಗೆ ಎಲ್ಲಾ ಹಗರಣ, ಭ್ರಷ್ಟಾಚಾರ, ಅನ್ಯಾಯವನ್ನು ಬಯಲಿಗೆಳೆಯಲು ಮಾಹಿತಿ ಹಕ್ಕು ಕಾಯ್ದೆಯು ಪರಿಣಾಮಕಾರಿಯಾಗಿದೆ. ಇಂತಹ ಕಾಯ್ದೆ ಸದ್ಭಳಕೆಯಾದಾಗ ಮಾತ್ರ ಕಾಯ್ದೆ ಜಾರಿಗೊಳಿಸಿದ್ದೂ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಮಾಹಿತಿ ಹಕ್ಕು ವೇದಿಕೆ ಪದಾಧಿಕಾರಿಗಳು, ಕಾರ್ಯಕರ್ತರು ಅಷ್ಟೇ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಎಷ್ಟೋ ಸರ್ಕಾರಿ ಕಚೇರಿಗಳಲ್ಲಿ ಇಂದಿಗೂ ಆರ್‌ಟಿಐ ಫಲಕಗಳೇ ಇಲ್ಲ. ಅಧಿಕಾರಿಗಳು ತಮ್ಮ ಗುರುತಿನ ಚೀಟಿ ಧರಿಸುವುದಿಲ್ಲ. ಮೂಲ ಸೌಕರ್ಯಗಳೇ ಕಚೇರಿಗಳಲ್ಲಿ ಇರುವುದಿಲ್ಲ. ಇಂತಹ ಹತ್ತು ಹಲವು ಜ್ವಲಂತ ಸಮಸ್ಯೆಗಳಿಗೆ ಮುಕ್ತಿ ಹಾಡಲು ವೇದಿಕೆ ಕಾರ್ಯಕರ್ತರು ಆಸಕ್ತಿಯಿಂದ ಕಾರ್ಯೋನ್ಮುಖರಾಗಬೇಕು. ಯಾವ ಅಧಿಕಾರಿಗಳೇ ಆಗಿದ್ದರೂ ಧೈರ್ಯದಿಂದ ಅನ್ಯವನ್ನು ಪ್ರಶ್ನಿಸುವ ಮನೋಭಾವ ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.

ವರದಿಗಾರರ ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ ಮಾತನಾಡಿ, ಭ್ರಷ್ಟಾಚಾರ ಸಾರ್ವಜನಿಕರಿಗೆ ಮಾರಕವಾಗಿದೆ. ಮಾಹಿತಿ ಹಕ್ಕು ವೇದಿಕೆ ಕಾರ್ಯಕರ್ತರು ಭ್ರಷ್ಟಾಚಾರ, ಭ್ರಷ್ಟರ ಬಯಲಿಗೆಳೆಯುವ ಕೆಲಸ ಮಾಡುವ ಮೂಲಕ ವೇದಿಕೆ ಸ್ಥಾಪನೆಯ ಉದ್ದೇಶ‍ ಸಾರ್ಥಕಗೊಳಿಸಬೇಕು. ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಸಾರ್ವಜನಿಕರೂ ಸಹಕರಿಸಬೇಕು. ಅನ್ಯಾಯಕ್ಕೆ ಒಳಗಾದ ಜನರ ಪರ ನಿಲ್ಲುವ ಮೂಲಕ ವೇದಿಕೆಯು ನೊಂದವರ ಧ್ವನಿಯಾಗಲಿ ಎಂದು ಹಾರೈಸಿದರು.

ವೇದಿಕೆಯ ಧಾರವಾಡ ಘಟಕದ ಪ್ರಧಾನ ಕಾರ್ಯದರ್ಶಿ ಪರಶುರಾಮ ಬಗಲಿ ಮಾತನಾಡಿ, ರಾಜ್ಯದ ಪ್ರತಿ ಇಲಾಖೆಯಲ್ಲೂ ದಕ್ಷ, ಪ್ರಾಮಾಣಿಕ ಅಧಿಕಾರಿ, ಸಿಬ್ಬಂದಿಗಳ ಹುಡುಕುವ ಪರಿಸ್ಥಿತಿ ಇದೆ. ಭ್ರಷ್ಟಾಚಾರದಿಂದ ತುಂಬಿರುವ ವ್ಯವಸ್ಥೆಯನ್ನು ಸರಿಪಡಿಸುವ ಕಾರ್ಯಕ್ಕೆ ವೇದಿಕೆಯಲ್ಲಿ ನಾವೆಲ್ಲರೂ ಸಂಕಲ್ಪ ಮಾಡಿ, ಒಟ್ಟಾಗಿ ಕೆಲಸ ಮಾಡೋಣ ಎಂದು ಮನವಿ ಮಾಡಿದರು.

ವೇದಿಕೆ ಜಿಲ್ಲಾಧ್ಯಕ್ಷ ಯು.ಶ್ರೀನಿವಾಸ, ರಾಜ್ಯ ಸಮಿತಿ ಸದಸ್ಯ ಗುರುರಾಜ, ಪತ್ರಕರ್ತ ಎಚ್.ಎಂ.ಪಿ.ಕುಮಾರ, ವೇದಿಕೆ ರಾಜ್ಯ ಉಪಾಧ್ಯಕ್ಷ ಕೆ.ಟಿ.ಮಧು, ಜಗದೀಶ ಕೊಪ್ಪಳ, ಮಂಜುನಾಥ, ವಸಂತ, ಜಿಲ್ಲಾ ಉಪಾಧ್ಯಕ್ಷ ಮೂರ್ತೆಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ಶ್ರೇಯಸ್ ಇತರರಿದ್ದರು.