ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿಗೆ ಹಕ್ಕೊತ್ತಾಯ

| Published : Oct 18 2024, 01:15 AM IST

ಸಾರಾಂಶ

ದೊಡ್ಡಬಳ್ಳಾಪುರ: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕುರಿತಂತೆ ಸರ್ಕಾರ ಯಾವುದೇ ರೀತಿಯ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಸರೋಜಿನಿ ಮಹಿಷಿ ವರದಿ ಯಾಥಾವತ್ತಾಗಿ ಜಾರಿ ಮಾಡಿಲ್ಲ.

ದೊಡ್ಡಬಳ್ಳಾಪುರ: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕುರಿತಂತೆ ಸರ್ಕಾರ ಯಾವುದೇ ರೀತಿಯ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಸರೋಜಿನಿ ಮಹಿಷಿ ವರದಿ ಯಾಥಾವತ್ತಾಗಿ ಜಾರಿ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗಾಗಿ ಆಗ್ರಹಿಸಿ, ಅ.19ರಂದು ಬೆಂಗಳೂರಿನ ಮೆಜೆಸ್ಟಿಕ್ ಬಳಿಯ ಸಂಗೊಳ್ಳಿ ರಾಯಣ್ಣ ಪ್ರತಿಮೆಯ ಮುಂಭಾಗದಿಂದ ಫ್ರೀಡಂ ಪಾರ್ಕ್‌ ಬೃಹತ್‌ ಪ್ರತಿಭಟನಾ ರ್ಯಾಲಿಯಲ್ಲಿ ತೆರಳಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಕನ್ನಡ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಎಂ.ನಾಗರಾಜ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರತಿಭಟನೆಯ ಕರಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಕರ್ನಾಟಕ ಭಾಷಾವಾರು ಪ್ರಾಂತ್ಯವಾಗಿ 68 ವರ್ಷ ಕಳೆದಿವೆ. ಆದರೆ ಕನ್ನಡಿಗನ ಪರಿಸ್ಥಿತಿ ಕನ್ನಡ ನಾಡಿನಲ್ಲೇ ಶೋಚನೀಯವಾಗಿದೆ. ವಲಸಿಗರ ಅಕ್ರಮಣಕಾರಿ ಬೆಳವಣಿಗೆಯಿಂದ ಕನ್ನಡಿಗರ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಪರಭಾಷಿಕರಿಗೆ ಅನ್ನ ಕೊಟ್ಟ ತಪ್ಪಿಗೆ ನಮ್ಮವರಿಗೆ ಅನ್ನ ಇಲ್ಲದಂತಾಗುತ್ತಿದೆ. ಉದ್ಯೋಗ, ಶಿಕ್ಷಣ, ಆರೋಗ್ಯ, ವ್ಯಾಪಾರ, ವಹಿವಾಟು ವಲಸಿಗರ ಹಿಡಿತಕ್ಕೆ ಸೇರುತ್ತಿದೆ. ಇದರಿಂದಲೇ ಕನ್ನಡಿಗರ ಅಭಿವೃದ್ಧಿ ಮತ್ತು ಅಸ್ತಿತ್ವಕ್ಕೆ ಧಕ್ಕೆಯುಂಟಾಗುತ್ತಿದೆ. ದೊಡ್ಡ ದೊಡ್ಡ ಉದ್ಯಮಗಳನ್ನು ಸ್ಥಾಪಿಸಲು ಬಂದಂತಹ ಖಾಸಗಿ ಉದ್ಯಮಿಗಳು ಕನ್ನಡಿಗರನ್ನು ಕಡೆಗಣಿಸುತ್ತಿರುವುದು ನಮ್ಮ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ನೀಡಿದೆ. ಉದ್ಯೋಗ ನಮ್ಮ ಹಕ್ಕು, ಮತ್ತು ನಮ್ಮ ಬದುಕು. ಅದೇ ಇಲ್ಲದ ಮೇಲೆ ಕನ್ನಡಿಗರು ಪರಕೀಯರ ಮುಂದೆ ಸ್ವಾಭಿಮಾನ ಬದಿಗಿಟ್ಟು ಗುಲಾಮರಂತೆ ಬದುಕಬೇಕಾಗಿರುವುದು ಶೋಚನೀಯ ಎಂದರು.

ಯಾವುದೇ ಖಾಸಗಿ ವಲಯದ ಉದ್ಯಮಗಳು ಪ್ರಾರಂಭಿಸಲು ಈ ನಾಡಿನ ರೈತರ ಭೂಮಿ, ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕೊಡುವ ಜೊತೆಗೆ ಸಬ್ಸಿಡಿಯನ್ನೂ ಸಹ ಸರ್ಕಾರ ಒದಗಿಸಿಕೊಡುತ್ತದೆ. ಆದರೆ ಅದೇ ಉದ್ಯಮಿಗಳು ಈ ನೆಲದ ಮಕ್ಕಳಿಗೆ ಶೇಕಡಾವಾರು ಹೆಚ್ಚಿನ ಉದ್ಯೋಗ ನೀಡುವುದರಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಸರ್ಕಾರದ ಸುತ್ತೋಲೆಗಳನ್ನು ತಿರಸ್ಕರಿಸುತ್ತಿದ್ದಾರೆ. ರಾಜ್ಯದಲ್ಲಿನ ಬಹುರಾಷ್ಟ್ರೀಯ ಕಂಪನಿಗಳು, ಐಟಿ, ಬಿಟಿ ಕಂಪನಿಗಳು, ಶಾಪಿಂಗ್ ಮಾಲ್‌ ಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ವಸತಿ ಸಮುಚ್ಚಯಗಳು, ಸಿನಿಮಾ ಥಿಯೇಟರ್‌ಗಳು, ಹೋಟೆಲ್‌ ಗಳು ಸೇರಿದಂತೆ ಸಣ್ಣಪುಟ್ಟ ವಲಯದ ಉದ್ಯಮಿಗಳು ಕನ್ನಡಿಗರನ್ನು ಕಡೆಗಣಿಸುತ್ತಿದ್ದಾರೆ. ಕೇಂದ್ರ ಸರ್ಕಾರಿ ಸ್ವಾಮ್ಯದ ರೈಲ್ವೆ ಇಲಾಖೆ ದೂರವಾಣಿ ಇಲಾಖೆ, ಬ್ಯಾಂಕ್‌ಗಳ ಉದ್ಯೋಗಗಳಲ್ಲೂ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ. ಹಾಗೆಯೇ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಗುತ್ತಿಗೆ ಹೊರ ರಾಜ್ಯದವರ ಪಾಲಾಗಿದೆ ಎಂದು ಆರೋಪಿಸಿದರು.

ಕನ್ನಡಿಗರನ್ನು ವಂಚಿಸಿ ಹೊರ ರಾಜ್ಯದವರಿಗೆ ಉದ್ಯೋಗ ನೀಡುವ ಯಾವುದೇ ಕಂಪನಿ, ಕಾರ್ಖಾನೆಯಾದರೂ ಸರಿಯೇ ಅವರಿಗೆ ನೀಡಿರುವ ಸರ್ಕಾರಿ ಸವಲತ್ತುಗಳನ್ನು ಹಿಂಪಡೆದು ಪರವಾನಗಿ ರದ್ದು ಮಾಡುವ ಎಚ್ಚರಿಕೆಯನ್ನು ಸರ್ಕಾರ ನೀಡಬೇಕಿದೆ. ಈ ನಿಟ್ಟಿನಲ್ಲಿ ಕನ್ನಡ ಜಾಗೃತಿ ವೇದಿಕೆ ಸಂಘಟನೆಯ ರಾಜ್ಯಾಧ್ಯಕ್ಷ ಕೆ. ಮಂಜುನಾಥ್ ದೇವ ನೇತೃತ್ವದಲ್ಲಿ ರಾಜಧಾನಿ ಬೆಂಗಳೂರು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಕನ್ನಡಿಗರ ಬದುಕು ಮತ್ತು ಅಸ್ತಿತ್ವವನ್ನು ಉಳಿಸುವ ಈ ಐತಿಹಾಸಿಕ ಹೋರಾಟಕ್ಕೆ ರಾಜ್ಯದ ಚಲನಚಿತ್ರ, ರಂಗಭೂಮಿ, ದೂರದರ್ಶನದ ಕಲಾವಿದರು, ಮಠಾಧೀಶರು, ಯುವಕ, ಯುವತಿಯರು, ಮಹಿಳೆಯರು, ಯುವ ಸಂಘಟನೆಗಳು, ಕಾರ್ಮಿಕರು, ಕವಿಗಳು, ಸಾಹಿತಿಗಳು ಬರಹಗಾರರು, ಕನ್ನಡ ಹಿತಚಿಂತಕರು ಸೇರಿದಂತೆ ನಾಡಿನ ಕನ್ನಡಿಗರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪತ್ರಕರ್ತ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಹೆಚ್.ಎಸ್.ಅಗ್ನಿ ವೆಂಕಟೇಶ್, ಸಂಘಟನೆಯ ಅಧ್ಯಕ್ಷ ಸಿ.ಶಶಿಧರ್, ಕಾರ್ಮಿಕ ಘಟಕದ ಅಧ್ಯಕ್ಷ ಗುರುಪ್ರಸಾದ್, ಮಹಿಳಾ ಘಟಕದ ಉಪಾಧ್ಯಕ್ಷೆ ಮುನಿರತ್ನ, ಮುಖಂಡರಾದ ಶಿವಕುಮಾರಸ್ವಾಮಿ ಗೌರಮ್ಮ, ಸಂಘಟನಾ ಕಾರ್ಯದರ್ಶಿ ಕೃಷ್ಣ ಉಪಸ್ಥಿತರಿದ್ದರು.

ಫೋಟೋ-17ಕೆಡಿಬಿಪಿ1-

ದೊಡ್ಡಬಳ್ಳಾಪುರದಲ್ಲಿ ಕನ್ನಡ ಜಾಗೃತಿ ವೇದಿಕೆಯ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ಆಗ್ರಹಿಸಿ ನಡೆಯುವ ಪ್ರತಿಭಟನೆಯ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು.