ಯಾರಿಗೂ ನೋವು ಮಾಡುವ ಉದ್ದೇಶ ನಮ್ಮದಲ್ಲ, ಸಮಾಜದಲ್ಲಿ ತುಳಿತಕ್ಕೆ ಒಳಪಟ್ಟಿರುವವರು ಎಸ್ಸಿ, ಎಸ್ಟಿಗಳು ಮಾತ್ರ, ನಾಗಮೋಹನ್ ದಾಸ್ ವರದಿ ಸಮಿತಿಯಲ್ಲಿರುವವರು ಮೇಲ್ವರ್ಗದ ಜನರಂತೆ ವರ್ತಿಸುತ್ತಿದ್ದಾರೆ, ಹಾಗಾಗಿ ಈ ರೀತಿ ಗೊಂದಲದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಇದೊಂದು ಅವೈಜ್ಞಾನಿಕ ವರದಿಯಾಗಿದೆ.

ಕನ್ನಡಪ್ರಭ ವಾರ್ತೆ ಕನಕಪುರ ಸಮಾಜದಲ್ಲಿ ದೇಶದ ಮೂಲ ನಿವಾಸಿಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳನ್ನು ತುಳಿಯುವ ಕೆಲಸವನ್ನು ಎಲ್ಲಾ ರಾಜಕೀಯ ಪಕ್ಷಗಳು ಮಾಡುತ್ತಿವೆ ಎಂದು ನಗರದ ದಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಆರೋಪಿಸಿದರು.

ನ್ಯಾ. ನಾಗಮೋಹನ್ ದಾಸ್ ವರದಿ ತಿರಸ್ಕರಿಸುವಂತೆ ಒತ್ತಾಯಿಸಿ, ಬಲಗೈ ಸಮುದಾಯದ ಹಿತರಕ್ಷಣಾ ಸಮಿತಿ ವತಿಯಿಂದ ನಗರದ ಚನ್ನಬಸಪ್ಪ ವೃತ್ತದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯದಲ್ಲಿ ದಲಿತ ಸಮುದಾಯಗಳು ದೊಡ್ಡ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿರುವುದನ್ನು ಮನಗಂಡ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳು ಒಳ ಮೀಸಲಾತಿ ವರ್ಗೀಕರಣ ನೆಪದಲ್ಲಿ ಪರಿಶಿಷ್ಟ ಜಾತಿ, ವರ್ಗದ ಜನರ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಣ್ಣ- ತಮ್ಮಂದಿರಂತೆ ಬದುಕುತ್ತಿರುವ ಪ. ಜಾತಿ ಮತ್ತು ಪ.ವರ್ಗದ ಒಗ್ಗಟ್ಟನ್ನು ಒಡೆಯಬೇಕು ಎಂಬ ದುರುದ್ದೇಶದಿಂದ ಒಳ ಮೀಸಲಾತಿಯ ವರ್ಗೀಕರಣದ ಹುನ್ನಾರ ನಡೆಸಿ 1 ಕೋಟಿ ಇದ್ದ ಪ.ಜಾ ವರ್ಗದ ಹೊಲೆಯರು 35 ಲಕ್ಷ , ಮಾದಿಗರು 35 ಲಕ್ಷ ಇದ್ದಾರೆ ಎಂದು ಸುಳ್ಳು ಅಂಕಿ ಅಂಶ ಬಿಡುಗಡೆ ಮಾಡಿ ದಲಿತರ ರಾಜಕೀಯ ಶಕ್ತಿಯನ್ನು ಕಿತ್ತುಕೊಳ್ಳುವ ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಷ್ಟ್ರೀಯವಾದಿ ಎಂದು ಹೇಳಿಕೊಳ್ಳುವ ಬಿಜೆಪಿ ಹಾಗೂ ದಲಿತರನ್ನು ಉದ್ಧಾರ ಮಾಡುತ್ತೇವೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಒಳ ಮೀಸಲಾತಿ ವರ್ಗೀಕರಣವೆಂಬ ವಿಷ ಬೀಜ ಕಿತ್ತು ಹಾಕಬೇಕಾಗಿತ್ತು, ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಒಳ ಮೀಸಲಾತಿ ವಿಷ ಬೀಜಕ್ಕೆ ಗೊಬ್ಬರ, ನೀರು ಹಾಕಿ ಬೆಳೆಸುತ್ತಿದ್ದಾರೆ, ಹೊಲೆಯರು, ಮಾದಿಗರ ಮೀಸಲಾತಿಯನ್ನು ತಿನ್ನುತ್ತಿದ್ದಾರೆ, ನಾಗಮೋಹನ್ ದಾಸ್ ವರದಿ ಮೂಲಕ ಎಸ್ಸಿ- ಎಸ್ಟಿಗಳ ನಡುವೆ ಜಗಳ ಸೃಷ್ಟಿಸಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳು ಶೀಘ್ರ ಗೊಂದಲ ಬಗೆಹರಿಸಬೇಕು, ಇಲ್ಲದಿದ್ದರೆ ಇಡೀ ರಾಜ್ಯದಲ್ಲಿ ಸರ್ಕಾರ ಮತ್ತು ವಿರೋಧ ಪಕ್ಷಗಳ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.

ಹಾರೋಹಳ್ಳಿ ಕೋಟೆ ಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿ ಮಾಡುವುದನ್ನು ನಾವು ಸ್ವಾಗತ ಮಾಡುತ್ತೇವೆ. ಆದರೆ ಪ್ರ.ವರ್ಗ ಎ ಗೆ ಸಿಗುತ್ತಿರುವ ಸೌಲಭ್ಯಗಳು ಪ್ರವರ್ಗ ಬಿ ಮತ್ತು ಸಿ ಗೆ ಸಿಗುತ್ತಿಲ್ಲ, ನಾಗ ಮೋಹನ್ ದಾಸ್ ಅವರ ವರದಿ ಅವೈಜ್ಞಾನಿಕ ಮತ್ತು ಅಪೂರ್ಣವಾಗಿದೆ. ರೋಸ್ಟರ್ ಪದ್ಧತಿಯಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಕೇಳಿದರೆ ರಾಜ್ಯದ ಮಂತ್ರಿಗಳು ಸಮುದಾಯದ ಮುಖಂಡರುಗಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಅವಮಾನ ಮಾಡುತ್ತಿರುವುದನ್ನು ನಾವು ಖಂಡಿಸುತ್ತೇವೆ, ಅವಿವೇಕಿ ಭಾಸ್ಕರ್ ಪ್ರಸಾದ್, ಅರುಣ್ ಕುಮಾರ್ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ಇದರಿಂದ ಎರಡು ಸಮುದಾಯಗಳ ನಡುವೆ ಕಿತ್ತಾಡಿಕೊಳ್ಳುವ ಸಂದರ್ಭ ಸೃಷ್ಟಿಯಾಗುತ್ತಿದೆ, ಹಾಗಾಗಿ ಒಳ ಮೀಸಲಾತಿಯ ರೋಸ್ಟರ್ ಪದ್ಧತಿ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಮುಖಂಡ ಜಿ. ಗೋವಿಂದಯ್ಯ ಮಾತನಾಡಿ, ಯಾರಿಗೂ ನೋವು ಮಾಡುವ ಉದ್ದೇಶ ನಮ್ಮದಲ್ಲ, ಸಮಾಜದಲ್ಲಿ ತುಳಿತಕ್ಕೆ ಒಳಪಟ್ಟಿರುವವರು ಎಸ್ಸಿ, ಎಸ್ಟಿಗಳು ಮಾತ್ರ, ನಾಗಮೋಹನ್ ದಾಸ್ ವರದಿ ಸಮಿತಿಯಲ್ಲಿರುವವರು ಮೇಲ್ವರ್ಗದ ಜನರಂತೆ ವರ್ತಿಸುತ್ತಿದ್ದಾರೆ, ಹಾಗಾಗಿ ಈ ರೀತಿ ಗೊಂದಲದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಇದೊಂದು ಅವೈಜ್ಞಾನಿಕ ವರದಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರದೀಪ್, ಭರತ್ ಕುಮಾರ್, ನವೀನ್ ಸೇರಿ ದಲಿತ ಸಮುದಾಯದ ಮುಖಂಡರು ಉಪಸ್ಥಿತರಿದ್ದರು