ಮಳೆ ನೀರಿನಲ್ಲಿ ಕೊಚ್ಚಿ ಹೋದ ರಿಂಗ್ ರಸ್ತೆ

| Published : Oct 23 2024, 12:34 AM IST

ಸಾರಾಂಶ

ನಿರಂತರವಾಗಿ ಮಳೆ ಸುರಿದು ತೇಜೂರು ಕೆರೆ, ಸೀಗೆ ಕೆರೆ, ಚಿಕ್ಕಕೊಂಡಗುಳ, ಸೇರಿದಂತೆ ಹಲವಾರು ಕೆರೆಗಳು ಭರ್ತಿಯಾಗಿ ಕೋಡಿ ಹರಿಯುತ್ತಿವೆ. ಈ ನೀರು ರಿಂಗ್‌ ರಸ್ತೆ ಮೂಲಕವೇ ತಮ್ಲಾಪುರ ಸಮೀಪ ಇರುವ ಹುಣಸಿನಕೆರೆಗೆ ಸೇರುತ್ತದೆ. ಹಾಗಾಗಿ ರಿಂಗ್‌ ರಸ್ತೆ ಮೇಲೆ ನೀರು ಪ್ರವಾಹದ ರೂಪದಲ್ಲಿ ನುಗ್ಗುತ್ತಿದೆ. ನೀರಿನ ರಭಸಕ್ಕೆ ರಸ್ತೆಯ ಡಾಂಬರ್‌ ಕೂಡ ಕೊಚ್ಚಿ ಹೋಗಿದೆ. ಇದನ್ನರಿತ ಗ್ರಾಮಸ್ಥರು ಪೊಲೀಸ್ ಠಾಣೆಗೆ ಕರೆ ಮಾಡಿ ಈ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತ ಮಾಡುವಂತೆ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಕಳೆದ ಎರಡು ದಿನಗಳಿಂದ ನಗರ ಹಾಗೂ ಸುತ್ತಮುತ್ತ ಸುರಿಯುತ್ತಿರುವ ಹುಚ್ಚು ಮಳೆಗೆ ಕೆರೆಗಳು ತುಂಬಿ ಕೋಡಿ ಹರಿತ್ತಿದ್ದು, ನಗರ ಡೈರಿ ಸರ್ಕಲ್‌ ನಿಂದ ಬೇಲೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಿಂಗ್ ರಸ್ತೆ ತಮ್ಲಾಪುರದ ಬಳಿ ಕೊಚ್ಚಿಹೋಗಿದೆ. ಜತೆಗೆ ಹಾಸನ ತಾಲೂಕಿನ ಹಲವು ಗ್ರಾಮಗಳಲ್ಲಿ ಬೆಳೆ ನಷ್ಟ ಸಂಭವಿಸಿದೆ.

ನಿರಂತರವಾಗಿ ಮಳೆ ಸುರಿದು ತೇಜೂರು ಕೆರೆ, ಸೀಗೆ ಕೆರೆ, ಚಿಕ್ಕಕೊಂಡಗುಳ, ಸೇರಿದಂತೆ ಹಲವಾರು ಕೆರೆಗಳು ಭರ್ತಿಯಾಗಿ ಕೋಡಿ ಹರಿಯುತ್ತಿವೆ. ಈ ನೀರು ರಿಂಗ್‌ ರಸ್ತೆ ಮೂಲಕವೇ ತಮ್ಲಾಪುರ ಸಮೀಪ ಇರುವ ಹುಣಸಿನಕೆರೆಗೆ ಸೇರುತ್ತದೆ. ಹಾಗಾಗಿ ರಿಂಗ್‌ ರಸ್ತೆ ಮೇಲೆ ನೀರು ಪ್ರವಾಹದ ರೂಪದಲ್ಲಿ ನುಗ್ಗುತ್ತಿದೆ. ನೀರಿನ ರಭಸಕ್ಕೆ ರಸ್ತೆಯ ಡಾಂಬರ್‌ ಕೂಡ ಕೊಚ್ಚಿ ಹೋಗಿದೆ. ಇದನ್ನರಿತ ಗ್ರಾಮಸ್ಥರು ಪೊಲೀಸ್ ಠಾಣೆಗೆ ಕರೆ ಮಾಡಿ ಈ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತ ಮಾಡುವಂತೆ ಮನವಿ ಮಾಡಿದ್ದಾರೆ. ಇಲ್ಲವಾದರೇ ಇಲ್ಲಿ ಬಾರಿ ಅನಾಹುತವೇ ಸಂಭವಿಸುತಿತ್ತು. ಪೊಲೀಸ್ ಸರ್ಪಗಾವಲಿನಲ್ಲೂ ಅನೇಕ ದ್ವಿಚಕ್ರ ವಾಹನ ಚಾಲಕರು ವಾಹನ ಚಾಲನೆ ಮಾಡಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಪ್ರಸಂಗ ಅನೇಕ ಬಾರಿ ನಡೆದು ಈ ವೇಳೆ ಸ್ಥಳೀಯರು ಕಾಪಾಡಿದ್ದಾರೆ.

ಇನ್ನು ಇಲ್ಲಿನ ಸುತ್ತ ಮುತ್ತ ಇರುವ ಬಡಾವಣೆಗಳು ಸಂಪೂರ್ಣ ಜಲಾವೃತವಾಗಿವೆ. ಇಲ್ಲಿ ಅಂಗಡಿ, ಮನೆಗಳು ಕೂಡ ಜಲಾವೃತವಾಗಿವೆ. ಶುಂಠಿ, ಜೋಳ, ರಾಗಿ ಇತರೆ ರೈತರ ಬಹುತೇಕ ಬೆಳೆ ನಾಶವಾಗಿದೆ. ರಿಂಗ್ ರಸ್ತೆಯಲ್ಲಿ ಮೇಲ್ಸೇತುವೆ ಮಾಡಬೇಕು. ಬೆಳೆ ನಷ್ಟವಾದ ರೈತರಿಗೆ ಸರಕಾರ ಸೂಕ್ತ ಪರಿಹಾರ ಕೊಡಬೇಕು, ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಇಲ್ಲಿನ ಸುತ್ತ ಮುತ್ತಲ ಗ್ರಾಮಸ್ಥರ ಆಗ್ರಹವಾಗಿದೆ. ತಮ್ಲಾಪುರ ನಿವಾಸಿ ಗಣೇಶ್ ಮಾಧ್ಯಮದೊಂದಿಗೆ ಮಾತನಾಡಿ, ಮಳೆ ಬಂದಿದ್ದರಿಂದ ಇಂದು ರಿಂಗ್ ರಸ್ತೆ ಕೊಚ್ಚಿ ಹೋಗಿದೆ. ಇದಕ್ಕೆ ಕಳಪೆ ಕಾಮಗಾರಿಯೇ ಕಾರಣ. ಬಾರಿ ಮಳೆಯಿಂದ ೨೫ಕ್ಕಿಂತ ಹೆಚ್ಚಿನ ಕೆರೆಯ ಕೋಡಿ ಬಿದ್ದು, ನೀರು ಹರಿಯುತ್ತಿದೆ. ರಿಂಗ್ ರಸ್ತೆಯಲ್ಲಿ ಸೇತುವೆ ಮಾಡಬೇಕಾಗಿತ್ತು. ಇಲ್ಲಿ ಇರುವ ಬಹುತೇಕ ಲೇಔಟ್ ಜಲಾವೃತವಾಗಿದೆ. ಇಲ್ಲಿನ ರೈತರ ಕೋಟ್ಯಾಂತರ ರು.ಗಳ ಬೆಳೆ ನಷ್ಟವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು.

ಇನ್ನು ಮುಂದೆ ಆಗಬಹುದಾದ ಅನಾಹುತ ತಪ್ಪಿಸಲು ಈಗಲೆ ಎಚ್ಚೆತ್ತುಕೊಳ್ಳಬೇಕು. ರಿಂಗ್ ರಸ್ತೆ ಮೇಲೆ ನೀರು ಹರಿದು ಸಂಪರ್ಕವೇ ಸ್ಥಗಿತವಾಗಿದೆ. ಈ ಬಗ್ಗೆ ಪೊಲೀಸರಿಗೆ ಕರೆ ಮಾಡಿದಾಗ ತಕ್ಷಣ ಬಂದು ವಾಹನ ಸಂಚಾರ ಸ್ಥಗಿತಗೊಳಿಸಿದ್ದಾರೆ. ಶಾಸಕರು ಮತ್ತು ಸಂಸದರು ಕೂಡಲೇ ಈ ಸ್ಥಳ ಪರಿಶೀಲಿಸಿ ನೀರಿನಿಂದ ಬೆಳೆ ನಷ್ಟವಾಗಿರುವ ರೈತರಿಗೆ ಬೆಳೆ ಪರಿಹಾರ ಕೊಟ್ಟು ಇಲ್ಲಿ ಸೇತುವೆ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಸುಮಾರು ೩೦ರಿಂದ ೫೦ ಕೆರೆ ಕೋಡಿ ಬಿದ್ದಿದ್ದು, ಆ ನೀರೆಲ್ಲಾ ಈ ಭಾಗದಲ್ಲೆ ಸಮುದ್ರದಂತೆ ಹರಿಯುತ್ತಿದೆ. ಕಳಪೆ ಕಾಮಗಾರಿ ಯಾರು ಮಾಡಿದ್ದಾರೆ ಅವರನ್ನು ಕಪ್ಪು ಪಟ್ಟಿಗೆ ಸೇರಿಸಿ ಸೇತುವೆ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.