ಸಾರಾಂಶ
ಪಾಂಡಪುರದ ಬಳಿಯಿರುವ ವಿಶ್ವೇಶ್ವರಯ್ಯ ನಾಲೆಗೆ ಕಾರೊಂದು ಉರುಳಿ ಬಿದ್ದ ಪರಿಣಾಮ ಅದರಲ್ಲಿದ್ದ ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿ ಕೈದಾಳ ಗ್ರಾಮದ ಜಲ ಸಮಾಧಿಯಾಗಿದ್ದ ಐವರ ಮೃತದೇಹಗಳ ಅಂತ್ಯ ಸಂಸ್ಕಾರ ಬುಧವಾರ ನಡೆಯಿತು.
ಕನ್ನಡಪ್ರಭ ವಾರ್ತೆ ತಿಪಟೂರು
ಪಾಂಡಪುರದ ಬಳಿಯಿರುವ ವಿಶ್ವೇಶ್ವರಯ್ಯ ನಾಲೆಗೆ ಕಾರೊಂದು ಉರುಳಿ ಬಿದ್ದ ಪರಿಣಾಮ ಅದರಲ್ಲಿದ್ದ ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿ ಕೈದಾಳ ಗ್ರಾಮದ ಜಲ ಸಮಾಧಿಯಾಗಿದ್ದ ಐವರ ಮೃತದೇಹಗಳ ಅಂತ್ಯ ಸಂಸ್ಕಾರ ಬುಧವಾರ ನಡೆಯಿತು.ಕೈದಾಳ ಗ್ರಾಮದ ಕೆ.ಟಿ. ಕೃಷ್ಣಪ್ಪ (೬೦), ಧನಂಜಯ್ಯ (೫೫), ಚಂದ್ರಯ್ಯ (೬೦), ಮಂಜುನಾಥ್ (೨೬), ಬಾಬು (೨೨) ಮೃತಪಟ್ಟ ದುರ್ದೈವಿ. ಇವರು ಮಂಗಳವಾರ ಮೈಸೂರಿನಲ್ಲಿ ನಡೆದ ಸಂಬಂಧಿಕರೊಬ್ಬರ ಬೀಗರ ಔತಣ ಮುಗಿಸಿ ವಾಪಸ್ ತೆರಳುವಾಗ ಈ ಅವಘಡ ಸಂಭವಿಸಿದೆ. ಮಂಜುನಾಥ್ ಅವರಿಗೆ ೯ ತಿಂಗಳ ಮಗುವಿದ್ದು ಮನೆಯ ಯಜಮಾನರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
ವಿಶ್ವೇಶ್ವರಯ್ಯ ನಾಲೆಗೆ ಯಾವುದೇ ತಡೆಗೋಡೆ ನಿರ್ಮಿಸಿಲ್ಲದ ಕಾರಣ ಅಪಘಾತವಾಗಿದ್ದು, ಐವರ ಸಾವಿಗೆ ಅಧಿಕಾರಿ ವರ್ಗದವರೇ ನೇರ ಕಾರಣವಾಗಿದೆ. ಕೂಡಲೆ ಮೃತಪಟ್ಟ ಕುಟುಂಬದವರಿಗೆ ಪರಿಹಾರ ನೀಡಬೇಕೆಂದು ಕೈದಾಳ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪ್ರಕರಣ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕೈದಾಳ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಕೆ.ಷಡಕ್ಷರಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಸರ್ಕಾರದಿಂದ ಪರಿಹಾರ ಕೊಡಿಸುವ ಬಗ್ಗೆ ಭರವಸೆ ನೀಡಿದರು. ಕಾಂಗ್ರೆಸ್ ಮುಖಂಡ ಲೋಕೇಶ್ವರ ಮೃತ ಕುಟುಂಬಗಳಿಗೆ ಸಾಂತ್ವನ ತಿಳಿಸಿದ್ದಾರೆ.