ಹರಜಾತ್ರೆಯಲ್ಲಿ ಗಲಾಟೆ: ವ್ಯಕ್ತಿಯ ತಲೆಗೆ ಗಾಯ

| Published : Jan 15 2025, 12:46 AM IST

ಸಾರಾಂಶ

ಹರಜಾತ್ರೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ವ್ಯಕ್ತಿಯೊಬ್ಬನಿಗೆ ರಕ್ತಸ್ರಾವ ಬರುವಂತೆ ತಲೆಗೆ ಪೆಟ್ಟುಬಿದ್ದ ಘಟನೆ ಹರಿಹರದಲ್ಲಿ ನಡೆಯಿತು.

ಹರಿಹರ: ಹರಜಾತ್ರೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ವ್ಯಕ್ತಿಯೊಬ್ಬನಿಗೆ ರಕ್ತಸ್ರಾವ ಬರುವಂತೆ ತಲೆಗೆ ಪೆಟ್ಟುಬಿದ್ದ ಘಟನೆ ನಡೆಯಿತು. ಮಾಜಿ ಸಚಿವ ನಿರಾಣಿ ಅವರು ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲರಿಗೆ ರಾಜ್ಯಾದ್ಯಂತ ಸಂಚರಿಸಿ ಸಮಾಜ ಸಂಘಟನೆ ಮಾಡಲು ನೂತನ ಹೊಸ ಕಾರು ನೀಡಿದ್ದಾರೆ ಎಂದು ರಾಣೆಬೆನ್ನೂರಿನ ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್ ವೇದಿಕೆಯಲ್ಲಿ ಘೋಷಿಸಿದರು. ಈ ವಿಚಾರವಾಗಿ ವೇದಿಕೆ ಮುಂಭಾಗ ಕುಳಿತಿದ್ದ ಕೆಲವು ಭಕ್ತರ ಮಧ್ಯೆ ಮಾತಿನ ಸಮರ ಆರಂಭವಾಯಿತು.

ಒಬ್ಬರಿಗೊಬ್ಬರ ನಡುವೆ ಗಲಾಟೆ ಆರಂಭವಾದ ತಕ್ಷಣ ವೇದಿಕೆ ಮೇಲಿದ್ದ ಸೋಮನಗೌಡ ಪಾಟೀಲರು ಗಲಾಟೆ ನಿಲ್ಲಿಸುವಂತೆ ಮೈಕಿನಲ್ಲಿ ಮನವಿ ಮಾಡಿದರು. ಗಲಾಟೆ ತೀವ್ರತೆಗೆ ಹೋದಾಗ ಪೊಲೀಸರು ಮಧ್ಯ ಪ್ರವೇಶಿಸಿ ಗಲಾಟೆ ಮಾಡುವವರನ್ನು ಮಠದಿಂದ ಹೊರಕ್ಕೆ ಕಳಿಸಿದರು. ಈ ಗಲಾಟೆ ಮಧ್ಯೆ ಒಬ್ಬ ವ್ಯಕ್ತಿಗೆ ತೀವ್ರವಾಗಿ ಪೆಟ್ಟುಬಿದ್ದು, ರಕ್ತಸ್ರಾವ ಆಗುತ್ತಿದ್ದನ್ನು ನೆರೆದಿದ್ದ ಜನರು ಗಮನಿಸಿದರು.

ಈ ವ್ಯಕ್ತಿಗೆ ಯಾರು ಹೊಡೆದರು ಎಂದು ಕೇಳಿದರು, ಆದರೆ, ಆ ವ್ಯಕ್ತಿಗೆ ಗಲಾಟೆ ಮಧ್ಯೆ ಯಾರು ಹೊಡೆದಿದ್ದಾರೆ ಎಂಬುದು ಗೊತ್ತಾಗಿಲ್ಲ. ಮುಖದ ಮೇಲೆ ಮತ್ತು ಬಟ್ಟೆಗಳೆಲ್ಲ ರಕ್ತಸ್ರಾವವಾಗಿತ್ತು. ವ್ಯಕ್ತಿಯ ಅವಸ್ಥೆ ಕಂಡ ಮಠದ ಧರ್ಮದರ್ಶಿ ಚಂದ್ರಶೇಖರ್ ಪೂಜಾರ್ ಮಠದ ವಾಹನದಲ್ಲಿ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚನೆ ನೀಡಿದರು.

- - - -14 ಎಚ್‍ಆರ್‍ಆರ್ 05: ತಲೆಗೆ ಪೆಟ್ಟುಬಿದ್ದಿದ್ದ ವ್ಯಕ್ತಿ.