ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಇರುವುದರಿಂದಲೇ ನೆರೆಯ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳದಂತಹ ಪರಿಸ್ಥಿತಿ ಇಲ್ಲಿ ಸೃಷ್ಟಿಯಾಗಿಲ್ಲ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಅವರು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.ಮೋದಿ ಮತ್ತು ಅಮಿತ್ ಶಾ ಅವರಿಂದ ದೇಶ ಇಬ್ಬಾಗವಾಗುತ್ತಿದೆ ಎಂಬ ಹೇಳಿಕೆಗೆ ಗುರುವಾರ ಪ್ರತಿಕ್ರಿಯಿಸಿದ ಅವರು, ದೇಶದ ರಕ್ಷಣೆಗಾಗಿ ಮೋದಿಯವರಂತಹ ಸಮರ್ಥ ನಾಯಕರಿದ್ದಾರೆ. ಮೋದಿ- ಅಮಿತ್ ಶಾ ಇಲ್ಲದಿದ್ದರೇ ಕಾಂಗ್ರೆಸ್ ನವರು ನೆರೆಯ ದೇಶಗಳಲ್ಲಿ ಆಗಿರುವಂತೆಯೇ ಮಾಡುತ್ತಿದ್ದರು ಎಂದು ಹರಿಹಾಯ್ದರು.
ಬಿಜೆಪಿ ನೆಲೆ ವಿಸ್ತರಣೆಗಾಗಿ ಮದ್ದೂರಿನಲ್ಲಿ ಗಲಭೆ ಸೃಷ್ಟಿಸಿದೆ ಎಂಬ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಚಲುವರಾಯಸ್ವಾಮಿ ಅವರು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಕೆರಗೋಡಿನಲ್ಲಿ ತ್ರಿವರ್ಣ ಧ್ವಜ ಕೆಳಗಿಳಿಸುವ ಕೆಲಸ ಮಾಡಿದರು. ಚಲುವರಾಯಸ್ವಾಮಿ ಪ್ರತಿನಿಧಿಸುತ್ತಿರುವ ನಾಗಮಂಗಲದಲ್ಲಿ ನಡೆದ ಗಣೇಶೋತ್ಸವ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಯಿತು ಎಂದು ದೂರಿದರು.ಗಣೇಶನಮೂರ್ತಿಯನ್ನು ಪೊಲೀಸ್ ಜೀಪ್ ನಲ್ಲಿ ಹೊತ್ತೊಯ್ಯುವ ಪರಿಸ್ಥಿತಿ ನಿರ್ಮಾಣ ಆಯಿತು. ಈಗ ಮದ್ದೂರಿನಲ್ಲಿ ಗಲಭೆಯಾಗಿದೆ. ಗಣೇಶೋತ್ಸವ ಮೆರವಣಿಗೆ ಮೇಲೆ ಮಸೀದಿಯಿಂದ ಕಲ್ಲು ತೂರಾಟ ಮಾಡಲಾಗಿದೆ. ಮಂಡ್ಯ ಜೆಡಿಎಸ್ ನ ಭದ್ರ ನೆಲೆಯಾಗಿದೆ. ಈ ಮೊದಲು ಜೆಡಿಎಸ್ ಶಾಸಕರುಗಳಿದ್ದಾಗ ಯಾವುದೇ ಒಂದು ಗಲಭೆ ನಡೆದಿರಲಿಲ್ಲ. ಕಾಂಗ್ರೆಸ್ ಶಾಸಕರು ಬಂದನಂತರ ಗಲಾಟೆಗಳಾಗುತ್ತಿವೆ ಎಂದು ಅವರು ಆರೋಪಿಸಿದರು.
ಜೆಡಿಎಸ್ ನ ಭದ್ರ ನೆಲೆಯಲ್ಲಿ ಮುಸ್ಲಿಮರನ್ನು ಎತ್ತಿ ಕಟ್ಟುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದು ದೂರಿದರು.ಎಬಿವಿಪಿ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಪಾಲ್ಗೊಂಡಿರುವುದನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಸಮರ್ಥಿಸಿಕೊಂಡರು. ವಿ. ಶ್ರೀನಿವಾಸಪ್ರಸಾದ್ ಅವರಂತಹ ನಾಯಕರು ಕೂಡ ಆರ್.ಎಸ್.ಎಸ್ ಶಾಖೆಗೆ ಹೋಗುತ್ತಿದ್ದರು. ಕಾಂಗ್ರೆಸ್ ನ ಕೆಲ ನಾಯಕರು ಕೂಡ ಚಿಕ್ಕವರಿದ್ದಾಗ ಆರ್.ಎಸ್.ಎಸ್ ಶಾಖೆಗೆ ಹೋಗುತ್ತಿದ್ದವರೆ. ಆರ್.ಎಸ್.ಎಸ್ ದೇಶ ಕಟ್ಟುವ ವ್ಯಕ್ತಿತ್ವ ನಿರ್ಮಾಣ ಮಾಡುವ ಕೆಲಸ ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತು ಎಂದರು.
ಎಬಿವಿಪಿಯ ಕಾರ್ಯಗಳು ತಿಳಿದಿರುವ ಕಾರಣಕ್ಕಾಗಿಯೇ ಗೃಹ ಸಚಿವ ಪರಮೇಶ್ವರ್ ಅವರು ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ರಾಜಕೀಯ ಕಾರಣಗಳಿಗಾಗಿ ಕೆಲಮೊಮ್ಮೆ ಆರ್.ಎಸ್.ಎಸ್ ಅನ್ನು ಕಾಂಗ್ರೆಸ್ ನಾಯಕರು ಟೀಕಿಸುತ್ತಾರೆ ಅಷ್ಟೇ ಎಂದು ಅವರು ಹೇಳಿದರು.