ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಲ್ಲದೇ ಮಾದಕ ವಸ್ತುಗಳನ್ನು ಬೆಳೆಯುವುದು, ಸಾಗಣೆ ಮತ್ತು ಸಂಗ್ರಹ ಮಾಡುವುದು ಅಪರಾಧವಾಗಿದೆ.
ಶಿರಹಟ್ಟಿ: ಮಾದಕ ವಸ್ತುಗಳ ಸೇವನೆಯು ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಪೊಲೀಸ್ ಇಲಾಖೆಯ ಡಾ. ವೆಂಕಟೇಶ್ ಪ್ರಸನ್ನ ತಿಳಿಸಿದರು.ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಪ್ರಯುಕ್ತ ಧರ್ಮಸ್ಥಳದ ಕೇಂದ್ರ ಕಚೇರಿಯ ಜನಜಾಗೃತಿ ಪ್ರಾದೇಶಿಕ ವಿಭಾಗದಿಂದ ಏಕಕಾಲದಲ್ಲಿ ರಾಜ್ಯದ ೧೦೦೦ಕ್ಕೂ ಹೆಚ್ಚು ಪ್ರೌಢಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳಿಗೆ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆಯವರು ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಪಟ್ಟಣದ ಎಫ್.ಎಂ. ಡಬಾಲಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಲ್ಲದೇ ಮಾದಕ ವಸ್ತುಗಳನ್ನು ಬೆಳೆಯುವುದು, ಸಾಗಣೆ ಮತ್ತು ಸಂಗ್ರಹ ಮಾಡುವುದು ಅಪರಾಧವಾಗಿದೆ. ಈ ಹಿಂದೆ ಅಷ್ಟೊಂದು ಮಾದಕ ವಸ್ತುಗಳು ಸಿಗುತ್ತಿರಲಿಲ್ಲ. ಇತ್ತಿತ್ತಲಾಗಿ ಮಾದಕ ವಸ್ತುಗಳ ಹಾವಳಿ ಜಾಸ್ತಿಯಾಗಿದೆ. ಸಾಕಷ್ಟು ಕಾನೂನುಗಳನ್ನು ತಂದರೂ ಮಾದಕ ವಸ್ತುಗಳ ಸೇವನೆ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವುದು, ಯುವಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಸಮಾಜ, ಕುಟುಂಬ ಮತ್ತು ಸರ್ಕಾರ ಒಟ್ಟಾಗಿ ಕಾರ್ಯನಿರ್ವಹಿಸಿದರೆ ಮಾದಕ ವ್ಯಸನ ಹಾಗೂ ಅದರಿಂದ ಉಂಟಾಗುವ ಅಪರಾಧಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದರು.
ಬೆಂಗಳೂರಿನ ಹೃದ್ರೋಗತಜ್ಞ ಡಾ. ದೇವಿ ಪ್ರಸಾದ್ ಶೆಟ್ಟಿ ಮಾತನಾಡಿ, ಇತ್ತೀಚೆಗೆ ಅತಿ ಹೆಚ್ಚು ಜನರು ಈ ಮಾದಕ ವಸ್ತುಗಳ ಸೇವನೆಯಿಂದ ಹೃದಯ ಸಂಬಂಧಿಸಿದ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಡ್ರಗ್ಸ್ ಸೇವಿಸುವುದರಿಂದ ದೇಹಕ್ಕೆ ಹಾನಿಯಾಗುತ್ತದೆ. ದೈಹಿಕ, ಮಾನಸಿಕ ಸಮಸ್ಯೆ ಸೇರಿದಂತೆ ಸಾಮಾಜಿಕ ಸಮಸ್ಯೆಗೆ ಗುರಿಯಾಗುತ್ತಾರೆ ಎಂದರು.ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಕಾಲೇಜಿನ ಪ್ರಾಚಾರ್ಯ ಎಂ.ಸಿ. ಭಜಂತ್ರಿ ಉದ್ಘಾಟಿಸಿದರು. ಉಪನ್ಯಾಸಕಿ ಸುಧಾ ಹುಚ್ಚಣ್ಣವರ, ರೇಣುಕಾ ಜಗಂಡಭಾವಿ, ಜಿಲ್ಲಾ ಜನಜಾಗೃತಿ ಸದಸ್ಯರಾದ ಫಕೀರೇಶ ರಟ್ಟಿಹಳ್ಳಿ, ಮಹಾಂತೇಶ್ ದಶಮನಿ, ಶಿವನಗೌಡ ಪಾಟೀಲ, ಪ್ರಕಾಶ ಬೋರಶೆಟ್ಟರ, ಶಿರಹಟ್ಟಿ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಪುನೀತ್ ಓಲೇಕಾರ ಹಾಗೂ ಪೊಲೀಸ್ ಇಲಾಖೆಯ ಅಯ್ಯನಗೌಡ ಪಾಟೀಲ್ ಹಾಗೂ ವಿದ್ಯಾರ್ಥಿಗಳು ಇದ್ದರು.