ಮಕ್ಕಳಿಂದ ಹಿಡಿದು ವಯೋವೃದ್ಧರ ವರೆಗೆ ಜ್ವರದ ಭಾದೆ ಕಾಣಿಸಿಕೊಳ್ಳುತ್ತಿದ್ದು, ಕೆಲವರಲ್ಲಿ ತೀವ್ರ ಜ್ವರದ ಲಕ್ಷಣಗಳು ಕಂಡುಬಂದರೆ, ಇನ್ನು ಕೆಲವರಿಗೆ ಜ್ವರದೊಂದಿಗೆ ನೆಗಡಿ, ಕೆಮ್ಮು, ವಾಂತಿ ಹಾಗೂ ದೇಹದಲ್ಲಿ ತೀವ್ರ ನಿಶ್ಶಕ್ತಿ ಕಾಣಿಸಿಕೊಳ್ಳುತ್ತಿದೆ. ಮನೆಯ ಒಬ್ಬರಿಗೆ ಜ್ವರ ಕಾಣಿಸಿಕೊಂಡ ಬಳಿಕ ಇತರ ಸದಸ್ಯರಿಗೂ ಸೋಂಕು ಹರಡುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ಹುಬ್ಬಳ್ಳಿ:

ಹು-ಧಾ ಮಹಾನಗರದಲ್ಲಿ ಕಳೆದ ಕೆಲ ದಿನಗಳಿಂದ ವೈರಲ್ ಫೀವರ್‌ನ ಹಾವಳಿ ಹೆಚ್ಚಾಗಿದ್ದು, ಜ್ವರ, ನೆಗಡಿ, ಕೆಮ್ಮು ಸೇರಿದಂತೆ ವಿವಿಧ ಲಕ್ಷಣಗಳಿಂದ ಬಳಲುತ್ತಿರುವವರ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ನಗರದ ಕೆಎಂಸಿಆರ್‌ಐ, ಚಿಟಗುಪ್ಪಿ ಸೇರಿದಂತೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗಗಳಲ್ಲಿ ಜ್ವರಪೀಡಿತರ ಸಂಖ್ಯೆ ಹೆಚ್ಚುತ್ತಿದೆ.

ಮಕ್ಕಳಿಂದ ಹಿಡಿದು ವಯೋವೃದ್ಧರ ವರೆಗೆ ಜ್ವರದ ಭಾದೆ ಕಾಣಿಸಿಕೊಳ್ಳುತ್ತಿದ್ದು, ಕೆಲವರಲ್ಲಿ ತೀವ್ರ ಜ್ವರದ ಲಕ್ಷಣಗಳು ಕಂಡುಬಂದರೆ, ಇನ್ನು ಕೆಲವರಿಗೆ ಜ್ವರದೊಂದಿಗೆ ನೆಗಡಿ, ಕೆಮ್ಮು, ವಾಂತಿ ಹಾಗೂ ದೇಹದಲ್ಲಿ ತೀವ್ರ ನಿಶ್ಶಕ್ತಿ ಕಾಣಿಸಿಕೊಳ್ಳುತ್ತಿದೆ. ಮನೆಯ ಒಬ್ಬರಿಗೆ ಜ್ವರ ಕಾಣಿಸಿಕೊಂಡ ಬಳಿಕ ಇತರ ಸದಸ್ಯರಿಗೂ ಸೋಂಕು ಹರಡುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.

14 ಮಂದಿಗೆ ಎಚ್1ಎನ್1 ದೃಢ:

ನಗರದ ಕೆಎಂಸಿಆರ್‌ಐನಲ್ಲಿ ಜ್ವರದ ಹಿನ್ನೆಲೆಯಲ್ಲಿ ನಡೆಸಲಾಗುತ್ತಿರುವ ಪರೀಕ್ಷೆಗಳಲ್ಲಿ ಎಚ್1ಎನ್1 ಪ್ರಕರಣಗಳು ಪತ್ತೆಯಾಗುತ್ತಿವೆ. ಇದುವರೆಗೆ ಕಿಮ್ಸ್‌ನಲ್ಲಿ 14 ಮಂದಿಗೆ ಎಚ್1ಎನ್1 ಸೋಂಕು ದೃಢಪಟ್ಟಿದೆ. ಜುಲೈ ತಿಂಗಳಲ್ಲಿ 29 ಸ್ಯಾಂಪಲ್‌ಗಳನ್ನು ಪರೀಕ್ಷಿಸಲಾಗಿದ್ದು, ಐವರಲ್ಲಿ ಸೋಂಕು ದೃಢಪಟ್ಟಿತ್ತು. ಆಗಸ್ಟ್ ತಿಂಗಳಲ್ಲಿ ಈವರೆಗೆ 39 ಸ್ಯಾಂಪಲ್‌ಗಳನ್ನು ಪರೀಕ್ಷಿಸಲಾಗಿದ್ದು, 9 ಮಂದಿಯಲ್ಲಿ ಎಚ್1ಎನ್1 ಪಾಸಿಟಿವ್ ಬಂದಿದೆ. ಆದರೆ, ಯಾರಲ್ಲೂ ತೀವ್ರಸ್ವರೂಪ ಕಂಡುಬಂದಿಲ್ಲ. ಚಿಕಿತ್ಸೆ ಪಡೆದು ಮನೆಗೆ ಮರಳುತ್ತಿದ್ದಾರೆ.

ಜಿಟಿಜಿಟಿ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದಾಗಿ ವೈರಲ್ ಸೋಂಕುಗಳ ಪ್ರಮಾಣ ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ ಎಂದು ಕೆಎಂಸಿಆರ್‌ಐನ ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ ತಿಳಿಸಿದರು.