ಮಹದೇವಪ್ಪ ಎಂ. ಸ್ವಾಮಿ
ಶಿರಹಟ್ಟಿ: ಭಾರಿ ಬಿಸಿಲು, ಸೆಕೆ, ಸುಳಿಯದ ಗಾಳಿ, ವಿದ್ಯುತ್ ಕಣ್ಣಾಮುಚ್ಚಾಲೆ, ಅಲ್ಲಲ್ಲಿ ನೀರಿಗಾಗಿ ಹಾಹಾಕಾರ, ಮನೆಯಲ್ಲಿದ್ದರೆ ಸೆಕೆ, ಹೊರಗಡೆ ಹೋದರೆ ಬಿಸಿಲು, ಎಲ್ಲಿ ಹೋಗಬೇಕು ಎಂದು ಜನ ಚಡಪಡಿಸಲಾರಂಭಿಸಿದ್ದಾರೆ. ಹೀಗಾಗಿ ಸಾರ್ವಜನಿಕರು ಹೊಟ್ಟೆ ತಣ್ಣಗಿಡಲು ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದು, ಎಲ್ಲೆಡೆ ತಂಪು ಪಾನೀಯ, ನಾನಾ ಹಣ್ಣುಗಳಿಗೆ ಭಾರಿ ಬೇಡಿಕೆ ಕಂಡುಬರುತ್ತಿದೆ.ಮಕ್ಕಳಂತೂ ಬಿಸಿಲಿಗೆ ಬೆದರಿ ಮನೆ ಸೇರಿದರೆ ಹಿರಿಯರು, ವೃದ್ಧರು, ಅನಾರೋಗ್ಯ ಪೀಡಿತರ ಸಮಸ್ಯೆಯಂತೂ ಕೇಳುವವರೇ ಇಲ್ಲದಂತಾಗಿದೆ. ಊಟ, ತಿಂಡಿ ಏನೇ ತಿಂದರೂ ಅರಗಿಸಿಕೊಳ್ಳಲು ಸಾಕಷ್ಟು ವೇಳೆ ಹಿಡಿಯುತ್ತದೆ. ದೇಹ ತಂಪಾಗಿಸಲು ತಂಪು ಪಾನೀಯ, ಕಲ್ಲಂಗಡಿ, ಕಬ್ಬಿನ ಹಾಲು, ಎಳನೀರಿಗೆ ಸಾರ್ವಜನಿಕರು ಮುಗಿ ಬೀಳುತ್ತಿದ್ದಾರೆ.
ಮಾಹಿತಿ ಪ್ರಕಾರ ಈಗಾಗಲೇ ಗರಿಷ್ಠ ೩೫ ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನವಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಡಿಕೆಯಂತೆ ಮಾರ್ಚ್ ಕೊನೆಯಲ್ಲಿ ಬೇಸಿಗೆ ಕಾಲ ಆರಂಭವಾಗಿ ಬಿಸಿಲಿನ ತೀವ್ರತೆ ಹೆಚ್ಚಾಗುವುದು ಸಾಮಾನ್ಯ.ಶಿವರಾತ್ರಿ ನಂತರದ ದಿನಗಳಲ್ಲಿ ದಿನೇ ದಿನೇ ಬಿಸಿಲಿನ ಝಳ ಮತ್ತಷ್ಟು ಪ್ರಖರತೆ ಪಡೆದುಕೊಂಡಿದ್ದು, ಜನರು ರೋಸಿ ಹೋಗಿದ್ದಾರೆ. ತಾಲೂಕು ಕಾದ ಕಾವಲಿಯಂತಾಗಿದ್ದು, ನಗರವಾಸಿಗಳು ಹಗಲು ರಾತ್ರಿ ಎನ್ನದೆ ಫ್ಯಾನ್, ಕೂಲರ್‌ಗಳ ಮೊರೆ ಹೋಗಿದ್ದಾರೆ. ಹವಾಮಾನ ಬದಲಾವಣೆಯಿಂದ ಪರಿಸರದಲ್ಲಿ ಉಷ್ಣಾಂಶದ ಪ್ರಖರತೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.
ಏಪ್ರಿಲ್ ಮೊದಲ ವಾರದಲ್ಲೇ ಈ ಪರಿ ಬಿಸಿಲ ಝಳ ಜನರನ್ನು ಕಾಡುತ್ತಿದ್ದು, ಮುಂದಿನ ದಿನಗಳ ಸ್ಥಿತಿ ಹೇಗಿರುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಬಿಸಿಲ ಝಳ ಹೆಚ್ಚುತ್ತಿದ್ದಂತೆ ಅಲ್ಲಲ್ಲಿ ಮಂಗನ ಕಾಯಿಲೆ, ಕರುಳುಬೇನೆ ಸೇರಿದಂತೆ ಇತರ ಕಾಯಿಲೆಗಳು ಜನರನ್ನು ಬಾಧಿಸಲು ಆರಂಭಿಸುತ್ತಿವೆ.
ತಾಲೂಕಿನಲ್ಲಿ ದಾಖಲೆ ಪ್ರಮಾಣದಲ್ಲಿ ಉಷ್ಣಾಂಶ ಕಂಡುಬರುತ್ತಿದೆ. ತಂಗಾಳಿ ಮರೀಚಿಕೆಯಾಗಿದೆ. ಮುಂಜಾನೆ ೮ರಿಂದಲೇ ಬಿಸಿಲಿನ ಪ್ರಖರತೆ ಹೆಚ್ಚುತ್ತಲಿದೆ. ಮಧ್ಯಾಹ್ನದ ಹೊತ್ತಿಗೆ ಬೆಂಕಿಯ ಎದುರು ಕುಳಿತಂತೆ ಭಾಸವಾಗುತ್ತದೆ. ಗ್ರಾಮಗಳಲ್ಲಿ ಗಿಡ, ಮರ, ತೋಟಗಳನ್ನು ತಾತ್ಕಾಲಿಕವಾಗಿ ಆಶ್ರಯ ತಾಣಗಳನ್ನಾಗಿ ಮಾಡಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಕಡಕೋಳ ಗ್ರಾಮದ ರೈತ ತೋಟಪ್ಪ ಸೊನ್ನದ.