ಸಾರಾಂಶ
ಹದಿಹರೆಯದ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಪ್ರೀತಿ, ಪ್ರೇಮದ ವ್ಯಾಮೋಹಕ್ಕೆ ಒಳಗಾಗದೆ ಸಂಸ್ಕಾರವಂತರಾಗಿ ನಿರ್ದಿಷ್ಟ ಗುರಿಯೊಂದಿಗೆ ವಿದ್ಯಾಭ್ಯಾಸದ ಕಡೆ ಗಮನಹರಿಸುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕು ಕಟ್ಟಿಕೊಳ್ಳಬೇಕೆಂದು ನಗರ ಠಾಣೆ ಸಬ್ ಇನ್ಸಪೆಕ್ಟರ್ ಕೃಷ್ಣಪ್ಪ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಹದಿಹರೆಯದ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಪ್ರೀತಿ, ಪ್ರೇಮದ ವ್ಯಾಮೋಹಕ್ಕೆ ಒಳಗಾಗದೆ ಸಂಸ್ಕಾರವಂತರಾಗಿ ನಿರ್ದಿಷ್ಟ ಗುರಿಯೊಂದಿಗೆ ವಿದ್ಯಾಭ್ಯಾಸದ ಕಡೆ ಗಮನಹರಿಸುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕು ಕಟ್ಟಿಕೊಳ್ಳಬೇಕೆಂದು ನಗರ ಠಾಣೆ ಸಬ್ ಇನ್ಸಪೆಕ್ಟರ್ ಕೃಷ್ಣಪ್ಪ ತಿಳಿಸಿದರು. ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪೋಕ್ಸೋ ಕಾಯಿದೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಪೋಕ್ಸೋ ಪ್ರಕರಣಗಳು ಹೆಚ್ಚುತ್ತಿರುವುದು ಅಪಾಯಕಾರಿ ಬೆಳವಣಿಗೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿ ಜೀವನದಲ್ಲಿ ಬಾಹ್ಯ ಆಕರ್ಷಣೆಗೆ ಒಳಗಾಗದೆ ಪ್ರೀತಿ, ಪ್ರೇಮದಲ್ಲಿ ಸಿಲುಕದೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಪರವಾನಿಗೆ ಇಲ್ಲದೆ ವಾಹನ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು ಹದಿನೆಂಟು ವರ್ಷ ತುಂಬುವವರೆಗೂ ವಾಹನ ಚಾಲನೆ ಮಾಡಬೇಡಿ. ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು ಮನೆಗಳಿಗೆ ಭದ್ರವಾದ ಡೋರ್‌ಲಾಕ್ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು. ತುಮಕೂರಿನ ಸಖಿ ಕೇಂದ್ರದ ರಶ್ಮಿ ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಮಾತನಾಡುತ್ತಾ ಹದಿನೆಂಟು ವರ್ಷ ವಯಸ್ಸಿನೊಳಗೆ ಎಲ್ಲರೂ ಮಕ್ಕಳಾಗಿದ್ದು ಲೈಂಗಿಕ ಕಿರುಕುಳ, ದೌರ್ಜನ್ಯ ಆದಾಗ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಬೇಕೆಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಂ.ಡಿ. ಶಿವಕುಮಾರ್ ಮಾತನಾಡಿ ಶಿಕ್ಷಣ ಮತ್ತು ಸಂಸ್ಕಾರ ಬದುಕಿನ ಮೂಲಮಂತ್ರವಾಗಿದ್ದು ಮಕ್ಕಳು ಚಂಚಲ ಮನಸ್ಸು, ಆಕರ್ಷಣೆ, ಚಟಗಳಿಗೆ ಬಲಿಯಾಗದೆ ತಂದೆ ತಾಯಿಗಳ, ಗುರು ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ಗುರಿಯೊಂದಿಗೆ ಮುನ್ನಡೆದು, ಮೌಲ್ಯಾಧಾರಿದ ಶಿಕ್ಷಣದಿಂದ ಸದ್ಗುಣಿಗಳಾಗಬೇಕು. ಓದುವ ವಯಸ್ಸಿನಲ್ಲಿ ಮೊಬೈಲ್, ವಾಟ್ಸಾಪ್ ಬಳಸದೆ ಓದಿನತ್ತ ಗಮನಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನೀವೇ ಸಂಕಟ ಅನುಭವಿಸುವಂತಾಗುತ್ತದೆ ಎಂದು ಕಿವಿ ಮಾತು ಹೇಳಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಷಡಕ್ಷರಿ, ಅಭಿಷೇಕ್, ಸೋಮಶೇಖರ್ ಮತ್ತಿತರರಿದ್ದರು.